ಬಾಗಲಕೋಟೆ[ಜ.14]: ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ತಮ್ಮ ವಿರುದ್ಧ ಮಾಡಿರುವ ಟೀಕೆಗೆ ಗೃಹ ಸಚಿವ ಎಂ.ಬಿ. ಪಾಟೀಲ್ ತೀವ್ರ ಗರಂ ಆಗಿದ್ದಾರೆ. ಶಾಮನೂರು ನನ್ನ ಏಳ್ಗೆ ಸಹಿಸದೆ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಇನ್ನು ಮುಂದೆ ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೆ ಸುಮ್ಮನಿರಲ್ಲ, ನಾನೇನಾದರೂ ಮಾತನಾಡಿದರೆ ಅವರ ಮರ್ಯಾದೆ ಹೋದೀತು ಎಂದು ಖಡಕ್ ವಾರ್ನಿಂಗ್ ನೀಡಿದ್ದಾ

ಹುಬ್ಬಳ್ಳಿ ಹಾಗೂ ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ, ಇಷ್ಟು ದಿನ ನಾನು ಶಾಮನೂರು ಶಿವಶಂಕರಪ್ಪ ಅವರನ್ನು ತಂದೆ ಸಮಾನ ಎಂದು ಭಾವಿಸಿದ್ದೆ. ಆದರೆ, ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್‌ನಿಂದ ಶನಿವಾರ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವರು ಲಂಚ, ಬೇನಾಮಿ ಹಣದಿಂದ ಲಿಂಗಾಯತ ಧರ್ಮದ ಹೋರಾಟ ನಡೆಸಿದ್ದಾರೆ ಎಂದು ಶಾಮನೂರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದರು.

ಬೀದರ್ ಮತ್ತು ಬೆಳಗಾವಿಯಲ್ಲಿ ನಡೆದ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ನಾನು ಇರಲೇ ಇಲ್ಲ. ಅದಕ್ಕೆ ಜನರೇ ಹಣ ಕೂಡಿಸಿದ್ದರು. ಅನ್ಯರ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ಶಿವಶಂಕರಪ್ಪ ಮೊದಲು ತಾವು ಹಿಂದೆ ಏನಾಗಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಾಪೂಜಿ ಸಂಸ್ಥೆಯ ಕಾರ್ಯದರ್ಶಿಯಾಗುವ ಮುನ್ನ ಅವರು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಕೊಟ್ಟೂರ ಬಸಪ್ಪ ಎಂಬುವರು ಬಾಪೂಜಿ ಶಿಕ್ಷಣ ಸಂಸ್ಥೆ ಬೆಳೆಸಿದವರು. ಆದರೆ, ಕೊಟ್ಟೂರ ಬಸಪ್ಪ ವಿದೇಶಕ್ಕೆ ತೆರಳಿದ ನಂತರ ಅವರು ವಾಪಸ್ ಬರುವುದಿಲ್ಲ ಎಂದು ಹೇಳಿ ಎಲ್ಲರ ಸಹಿ ಪಡೆದು ಮೋಸದಿಂದ ಬಾಪೂಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದರು. ಆ ಅಧಿಕಾರದ ಹಣ ಇಂದು ಶಾಮನೂರು ಶಿವಶಂಕರಪ್ಪ ಅವರನ್ನು ಬಾಯಿಗೆ ಬಂದಂತೆ ಮಾತನಾಡಿಸುತ್ತಿದೆ ಎಂದು ಎಂ.ಬಿ.ಪಾಟೀಲ ನೇರ ವಾಗ್ದಾಳಿ ನಡೆಸಿದರು.

ಅವರ ಪುತ್ರ ಯಾಕೆ ಸೋತರು?:

ಲಿಂಗಾಯತ ಹೋರಾಟದಲ್ಲಿ ತೊಡಗಿದ್ದರಿಂದ ವಿನಯ್ ಕುಲಕರ್ಣಿ ಮತ್ತು ಶರಣಪ್ರಕಾಶ್ ಪಾಟೀಲ ಸೋತರು ಎಂದು ಆರೋಪಿಸಿದ್ದಾರೆ. ಆದರೆ, ಶಿವಶಂಕರಪ್ಪ ಪುತ್ರ ಮಲ್ಲಿಕಾರ್ಜುನ ಯಾಕೆ ಸೋತರು? ಇನ್ನು ನಾನು ನೂರಾರು ಕೋಟಿ ಹಣ ಚೆಲ್ಲಿ ಗೆದ್ದಿದ್ದೇನೆ ಎಂದಿದ್ದಾರೆ. ಅವರು ನಮ್ಮ ಕ್ಷೇತ್ರಕ್ಕೆ ಬಂದು ನೋಡಲಿ. ₹೫೦೦೦ ಕೋಟಿಗೂ ಹೆಚ್ಚು ಅಭಿವೃದ್ಧಿ ಮಾಡಿದ್ದೇನೆ. ಅದನ್ನು ನೋಡಿ ಜನತೆ ನನ್ನನ್ನು ಗೆಲ್ಲಿಸಿದ್ದಾರೆ ಎಂದು ತಿರುಗೇಟು ನೀಡಿದರು

ಬಿ ಫಾರ್ಮ್ ಹರಿದು ಗೆದ್ದರು:

ಏತನ್ಮಧ್ಯೆ, ಶಿವಶಂಕರಪ್ಪ ಗೆದ್ದಿರುವ ವಿಷಯ ಯಾರಿಗೂ ಗೊತ್ತಿಲ್ಲ. ಅವರ ಕ್ಷೇತ್ರದಲ್ಲಿ ಹಿಂದೆ ಮುಸ್ಲಿಮರೊಬ್ಬರಿಗೆ ಟಿಕೆಟ್ ಸಿಕ್ಕಿತ್ತು. ಆದರೆ, ಆ ಬಿ ಫಾರಂ ಹರಿದು ಹಾಕಿ ಇವರು ಗೆದ್ದಿದ್ದಾರೆ. ಆ ಮತಕ್ಷೇತ್ರದಲ್ಲಿ 70,000 ಮುಸ್ಲಿಮರಿದ್ದಾರೆ. ಈ ಬಾರಿ ಮುಸ್ಲಿಮರು ಸಂಪೂರ್ಣವಾಗಿ ಕಾಂಗ್ರೆಸ್‌ಗೆ ಮತದಾನ ಮಾಡಿದ್ದಾರೆಂದು ಎಂ.ಬಿ.ಪಾಟೀಲ ಹೇಳಿದರು.

ಜತೆಗೆ, ಒಂದು ವೇಳೆ ಅವರ ಹಗುರ ಮಾತು ಇಲ್ಲಿಗೇ ನಿಂತರೆ ಸರಿ. ಇನ್ಮುಂದೆ ನಾನು ಸುಮ್ಮನಿರಲ್ಲ. ನಾನು ಮಾತನಾಡಿದರೆ ಅವರ ಮರ್ಯಾದೆ ಹೋದೀತು. ನನಗೆ ಎಲ್ಲವೂ ಗೊತ್ತು. ಎಲ್ಲವನ್ನೂ ಮಾತನಾಡಬೇಕಾದೀತು. ನನ್ನ ಮೈಯಲ್ಲಿ ಹರಿಯುವುದು ನನ್ನ ತಂದೆಯ ರಕ್ತ. ನನಗೆ ಯಾರ ಅಂಜಿಕೆಯೂ ಇಲ್ಲ ಎಂದು ಇದೇ ವೇಳೆ ಶಾಮನೂರು ಅವರಿಗೆ ಎಚ್ಚರಿಕೆ ನೀಡಿದರು.

ಶಾಮನೂರು ಹುಚ್ಚು ಮಂಗ ಎನ್ನಬಹುದು, ಆದರೆ ಹಾಗೆ ಕರೆಯಲ್ಲ ನನ್ನನ್ನು ಅವರು ಮಂಗ ಎಂದು ಕರೆದಿರುವುದು ಕಿವಿಗೆ ಬಿದ್ದಿದೆ. ಅವರಂತೆ ನಾನೂ ಅವರನ್ನು ಮಂಗ, ಹುಚ್ಚುಮಂಗ, ಗೋರಿಲ್ಲ ಎಂದು ಕರೆಯಬಹುದು. ಆದರೆ ಅದು ನಮ್ಮ ಸಂಸ್ಕೃತಿ ಅಲ್ಲ. ಮಂಗ ಎಂದು ಕರೆದಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತೆ ಎಂದು ಎಂ.ಬಿ. ಪಾಟೀಲ ಹೇಳಿದರು. ನನ್ನನ್ನು ಪ್ರಭಾಕರ ಕೋರೆ ಬೆಳೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ನಾನು ನಮ್ಮ ತಂದೆಯ ಆಶೀರ್ವಾದದಿಂದ ಬೆಳೆದಿದ್ದೇನೆ. ನಾನೇನು ಹಾದಿ ತಪ್ಪಿಲ್ಲ. ಮೊದಲು ಅವರು ಸರಿಯಾದ ಹಾದಿಗೆ ಬರಲಿ ಎಂದು ತಿರುಗೇಟು ನೀಡಿದರು