ಬೆಂಗಳೂರು[ಜ.17]: ಆಪರೇಷನ್‌ ಕಮಲ ಸಂಪೂರ್ಣ ವಿಫಲವಾಗಿದ್ದು ಬಿಜೆಪಿಯು ರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲಾಗಿದೆ. ಈ ಬೆಳವಣಿಗೆಯಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅಥವಾ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಇಬ್ಬರಲ್ಲಿ ಒಬ್ಬರ ತಲೆದಂಡ ಖಚಿತ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

ಬುಧವಾರ ಸಂಜೆ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್‌ ಕಮಲ ಸಂಪೂರ್ಣ ವಿಫಲವಾಗಿದೆ. ಇವರಿಗೆ ಮಾನ ಮರ್ಯಾದೆ ಎಂಬುದು ಇದ್ದರೆ ಮತ್ತೆ ಇಂತಹ ಪ್ರಯತ್ನಕ್ಕೆ ಕೈ ಹಾಕಬಾರದು. ಆಪರೇಷನ್‌ ಕಮಲದ ಹಿಂದೆ ಅಮಿತ್‌ ಶಾ ಇದ್ದರೆ ಅಮಿತ್‌ ಶಾ ತಲೆದಂಡ ಆಗುತ್ತದೆ. ಇಲ್ಲದಿದ್ದರೆ ಬಿ.ಎಸ್‌. ಯಡಿಯೂರಪ್ಪ ತಲೆದಂಡವಾಗುತ್ತದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್‌ನ ಎಲ್ಲಾ ಶಾಸಕರೂ ನಮ್ಮ ಜತೆಯಲ್ಲೇ ಇದ್ದಾರೆ. ನಮ್ಮ ಯಾವುದೇ ಶಾಸಕರೂ ಬಿಜೆಪಿಗೆ ಹೋಗಿಲ್ಲ. ರಮೇಶ್‌ ಜಾರಕಿಹೊಳಿ, ನಾಗೇಂದ್ರ ನನ್ನ ಸ್ನೇಹಿತರು. ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಇಬ್ಬರೊಂದಿಗೂ ಮಾತನಾಡಿದ್ದೇನೆ. ಪಕ್ಷೇತರರೂ ನಮ್ಮೊಂದಿಗಿದ್ದು, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲರೂ ಹಾಜರಾಗುತ್ತಾರೆ. ಯಾರೊಬ್ಬರೂ ಗೈರಾಗುವುದಿಲ್ಲ ಎಂದು ಹೇಳಿದರು.