ಉಳ್ಳಾಲದ ಭೂಕುಸಿತದಲ್ಲಿ ಮನೆ ಕುಸಿದು ಮೂವರು ಸಾವು. ತಾಯಿ ಅಶ್ವಿನಿ ಮಕ್ಕಳನ್ನು ರಕ್ಷಿಸಲು ಗೋಡೆ ತಡೆದು ಪ್ರಜ್ಞೆ ಕಳೆದುಕೊಂಡರು. ರಕ್ಷಣಾ ಕಾರ್ಯಾಚರಣೆ ತಡವಾದ ಕಾರಣ ಇಬ್ಬರು ಮಕ್ಕಳು ಮೃತಪಟ್ಟರು. ಅಶ್ವಿನಿ ಸ್ಥಿತಿ ಗಂಭೀರ, ಮಕ್ಕಳ ಸಾವಿನ ವಿಚಾರ ಮುಚ್ಚಿಡಲಾಗಿದೆ. ಗಂಡ, ಮಾವನಿಗೂ ಗಾಯ.
ದಕ್ಷಿಣ ಕನ್ನಡ (ಮೇ 30): ಮಂಗಳೂರು ಬಳಿಯ ಉಳ್ಳಾಲದಲ್ಲಿ ಭೂ ಕುಸಿತಕ್ಕೆ ಸಿಲುಕಿ ಮನೆಯಲ್ಲಿ ಮಲಗಿದ್ದ 3 ಜನರ ಪೈಕಿ ಮೂವರು ಮೃತಪಟ್ಟಿದ್ದಾರೆ. ಆದರೆ, ಮನೆ ಕುಸಿತವಾದಾಗ ತನ್ನ ಪ್ರಾಣ ಹೋದರೂ ಸರಿ ಮಕ್ಕಳನ್ನು ಉಳಿಸೋಣವೆಂದು ಗೋಡೆಯ ಭಾರ ತಾನು ತಡೆದುಕೊಂಡು ಮಕ್ಕಳನ್ನು ಉಳಿಸಿದ್ದಳು. ಆದರೆ, ಗೋಡೆಯ ಭಾರಕ್ಕೆ ದೇಹ ಜರ್ಜಿರಿತವಾಗಿ ಪ್ರಜ್ಞೆ ಕಳೆದುಕೊಂಡಿದ್ದಳು. ಗೋಡೆ ಬಿದ್ದ ಕ್ಷಣದಲ್ಲಿ ತಾಯಿಯ ಮಡಿಲಲ್ಲಿ ಒಂದು ಮಗು ಆಟವಾಡುತ್ತಿತ್ತು. ಆದರೆ, ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿಯಿಂದ ತಡವಾಗಿದ್ದು, ಇದೀಗ ಇಬ್ಬರೂ ಮಕ್ಕಳು ಸಾವನ್ನಪ್ಪಿವೆ. ಇದೀಗ ತಾಯಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಎಚ್ಚರ ಬಂದ ತಕ್ಷಣವೇ ತನ್ನ ಮಕ್ಕಳೆಲ್ಲಿ, ಹೇಗಿದ್ದಾರೆ? ಎಂದು ಕೇಳಿದ್ದಾರೆ. ಆದರೆ, ತಾಯಿ ಅಶ್ವಿನಿ ಸ್ಥಿತಿ ಗಂಭೀರವಾಗಿರುವುದರಿಂದ ಮಕ್ಕಳ ಸಾವಿನ ವಿಚಾರವನ್ನು ಮುಚ್ಚಿಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳದಲ್ಲಿ ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದ ಭೂಕುಸಿತದಿಂದ ಆರ್‌ಸಿಸಿ ಮನೆಯೊಳಗೆ ಮಲಗಿದ್ದ ಅಪ್ಪ-ಮಗ, ಅತ್ತೆ-ಸೊಸೆ ಹಾಗೂ ಇಬ್ಬರು ಮಕ್ಕಳ ಪೈಕಿ (ಪ್ರೇಮಾ ಪೂಜಾರಿ, ಕಾಂತಪ್ಪ ಪೂಜಾರಿ, ಇವರ ಮಗ ಸೀತಾರಾಮ, ಸೊಸೆ ಅಶ್ವಿನಿ ಮೊಮ್ಮಕ್ಕಳು ಆರ್ಯನ್ ಮತ್ತು ಆರುಷ್). ಮೂವರು ಮೃತಪಟ್ಟಿದ್ದಾರೆ. ಅಂದರೆ, ಅಜ್ಜಿ ಪ್ರೇಮಾ ಹಾಗೂ ಇಬ್ಬರು ಚಿಕ್ಕ ಮಕ್ಕಳು ಆರ್ಯನ್ ಮತ್ತು ಆರುಷ್ ಸಾವನ್ನಪ್ಪಿದ್ದಾರೆ. ಉಳಿದಂತೆ ಮನೆಯಲ್ಲಿ ಇಬ್ಬರು ಪುರುಷರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಮನೆಯೊಳಗೆ ಹೋಗಿ ಉಳಿದವರನ್ನು ರಕ್ಷಣೆ ಮಾಡಬೇಕು ಎನ್ನುವಷ್ಟರಲ್ಲಿ ಅಜ್ಜಿ ಸಾವಿಗೀಡಾಗಿದ್ದರು. ತಾಯಿ ಮಕ್ಕಳ ಕೋಣೆಗೆ ರಕ್ಷಣೆಗೆ ಹೋಗಲಾಗದಷ್ಟು ಮಣ್ಣು ಕುಸಿತವಾಗಿತ್ತು.
ಆದರೆ, ಮನೆ ಕುಸಿತವಾಗಿ ಅವಶೇಷಗಳ ಅಡಿ ಸಿಲುಕಿದ್ದವರನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ವಿಡಿಯೋ ಶೂಟ್ ಮಾಡಿದ್ದಾರೆ. ಅದರಲ್ಲಿ ತಾಯಿಯ ಮೇಲೆ ದೊಡ್ಡ ಪ್ರಮಾಣದ ಗೋಡೆ ಬಿದ್ದಿದ್ದು, ಅವರ ಪಕ್ಕದಲ್ಲಿದ್ದ ಮಕ್ಕಳ ಮೇಲೆ ಗೋಡೆ ಬೀಳದಂತೆ ತಬ್ಬಿಕೊಂಡು ಹಿಡಿದಿದ್ದರು. ಆದೆ ಗೋಡೆ ಭಾರಕ್ಕೆ ತಾಯಿ ಅಶ್ವಿನಿ ಪ್ರಜ್ಞೆ ತಪ್ಪಿದ್ದರು. ಇನ್ನು ತಾಯಿ ಪಕ್ಕದಲ್ಲಿದ್ದ ಚಿಕ್ಕ ಮಗು 2 ವರ್ಷದ ಆರುಷ್ ಇನ್ನೂ ಆಟವಾಡುತ್ತಾ ತನ್ನ ಮೇಲೆ ಬಿದ್ದಿದ್ದ ಗೊಡೆ ಮೇಲೆತ್ತಿ ಹೊರಬರಲು ಪ್ರಯತ್ನ ಮಾಡುತ್ತಿತ್ತು. ಆದರೆ, ಇನ್ನೊಂದು ಮಗು ಆರ್ಯನ್ (3 ವರ್ಷ) ಅದಾಗಲೇ ಪ್ರಾಣ ಕಳೆದುಕೊಂಡಿತ್ತು.
ಆಗ ಸ್ಥಳೀಯರೊಬ್ಬರು ಅವರನ್ನು ರಕ್ಷಣೆ ಮಾಡಲು ಮುಂದಾದರೂ ಗೋಡೆ ಮೇಲೆತ್ತಲು ಮುಂದಾಗಿದ್ದರು. ಆಗ ತಾಯಿ ಮಗುವಿಗೆ ನೀರು ಕುಡಿಸಿ ರಕ್ಷಣೆ ಮಾಡುವ ಭರವಸೆ ನೀಡಿದ್ದಾರೆ. ಆಗ ತಾಯಿ ನನಗೇನಾದರೂ ಪರವಾಗಿಲ್ಲ, ನನ್ನ ಮಕ್ಕಳನ್ನು ಉಳಿಸಿ ಎಂದು ಕೇಳಿಕೊಂಡಿದ್ದಳು. ಆದರೆ, ಮಣ್ಣು ಕುಸಿತ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಅಲ್ಲಿಂದ ವಾಪಸ್ ಹೋಗಿದ್ದಾರೆ. ನಂತರ ಸ್ಥಳಕ್ಕೆ ಬಂದ ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ (National Disaster Response Force-NDRF) ಹಾಗೂ ರಾಜ್ಯ ವಿಪತ್ತು ರಕ್ಷಣಾ ಪಡೆಯಿಂದ (ಎಸ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಆದರೆ, ಭೋರ್ಗರೆದು ಮಳೆ ಸುರಿಯುತ್ತಿದ್ದು, ಮಣ್ಣು ಕುಸಿತ ಇನ್ನೂ ನಿರಂತರವಾಗಿತ್ತು. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಹೋದರೂ ಕೊಂಚ ಕೊಂಚ ಮಣ್ಣು ಕುಸಿತವಾಗುತ್ತಲೇ ಇತ್ತು. ಸತತ 11 ಗಂಟೆಗಳ ಕಾರ್ಯಾಚರಣೆಯಿಂದ ತಾಯಿ ಅಶ್ವಿನಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಇಬ್ಬರೂ ಮಕ್ಕಳನ್ನು ರಕ್ಷಣೆ ಮಾಡಿದರಾದರೂ ಅವರ ಪ್ರಾಣ ಹಾರಿಹೋಗಿತ್ತು. ಇದೀಗ ತಾಯಿಯ ಸ್ಥಿತಿಯೂ ಗಂಭೀರವಾಗಿದ್ದು, ಐಸಿಯುನಲ್ಲಿ ಎಚ್ಚರವಾದಾಗ ತನ್ನ ಮಕ್ಕಳು ಹೇಗಿದ್ದಾರೆ? ಎಂದು ಕೇಳಿದ್ದಾಳೆ.
ತಾಯಿ ಅಶ್ವಿನಿ ಸ್ಥಿತಿ ಗಂಭೀರವಾಗಿದ್ದರಿಂದ ಮಕ್ಕಳು ಸಾವನ್ನಪ್ಪೊದ ವಿಚಾರವನ್ನು ಆಸ್ಪತ್ರೆ ಸಿಬ್ಬಂದಿ ತಿಳಿಸಿಲ್ಲ. ಇನ್ನು ಅವರ ಗಂಡ ಸೀತಾರಾಮ ಮತ್ತು ಅವರ ಮಾವ ಕಾಂತಪ್ಪ ಪೂಜಾರಿಗೂ ಗಂಭೀರ ಗಾಯವಾಗಿದೆ. ಅವರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
