ಬೆಂಗಳೂರು[ಡಿ.26]: ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದವರಿಗೆ ಪರಿಹಾರ ನೀಡುವುದಿಲ್ಲ ಎಂದು ಹೇಳುವ ಮೂಲಕ ಹೆಣ ಬೀಳಿಸಲು ಪೊಲೀಸರಿಗೆ ಆದೇಶ ನೀಡಿದ್ದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ಎಂಬುದು ಸಾಬೀತಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಗಲಭೆಯಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಚುನಾಯಿತ ಸರ್ಕಾರವೊಂದು ಇಷ್ಟೊಂದು ಅಮಾನವೀಯ, ಕ್ರೂರಿ, ಕೋಮುವಾದಿ ಆಗಬಾರದು ಎಂದು ಕಿಡಿಕಾರಿದರು.

ಮಂಗಳೂರು ಗಲಭೆಯಲ್ಲಿ ಸತ್ತವರಿಗೆ ಪರಿಹಾರ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ನಿರೀಕ್ಷೆಯಂತೆ ತನಿಖೆಗೆ ಮೊದಲೇ ತಮಗೆ ಬೇಕಾದಂತೆ ತೀರ್ಪು ನೀಡಿದ್ದಾರೆ. ಮಂಗಳೂರು ಗಲಭೆಗೆ ಗುಂಡೇಟಿನಿಂದ ಸತ್ತವರೇ ಕಾರಣ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳೇ, ಸತ್ತವರೇ ಗಲಭೆಗೆ ಕಾರಣ ಎಂದು ತೀರ್ಪು ನೀಡಿದ ಮೇಲೆ ಇನ್ನು ಸಿಐಡಿ ತನಿಖೆಯ ನಾಟಕ ಏಕೆ? ಅದನ್ನು ನಿಲ್ಲಿಸಿಬಿಡಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಮುಖ್ಯಮಂತ್ರಿಗಳ ಹೇಳಿಕೆಯಿಂದ ಎಲ್ಲವೂ ಖಾತ್ರಿಯಾಗಿದೆ. ಹೆಣ ಬೀಳಿಸಲು ಪೊಲೀಸರಿಗೆ ಆದೇಶ ನೀಡಿದ್ದು ನೀವೇ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.