Asianet Suvarna News Asianet Suvarna News

ಮಂಡ್ಯದಲ್ಲಿ ಹನುಮಧ್ವಜ ತೆರವು; ಕಾಂಗ್ರೆಸ್‌ ಸರ್ಕಾರಕ್ಕೆ ಪ್ರಮೋದ್ ಮುತಾಲಿಕ್ ಕೊಟ್ಟ ವಾರ್ನಿಂಗ್ ಏನು?

ಮಂಡ್ಯದ ಕೆರಗೋಡ ಗ್ರಾಮದಲ್ಲಿ ಬೆಳಗಿನ ಜಾವ 4 ಗಂಟೆಗೆ ಕೇಸರಿ ಧ್ವಜ ತೆಗೆದಿದ್ದಾರೆ. ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರಾಜ್ಯಸರ್ಕಾರದ ವಿರುದ್ಧ ಕಿಡಿಕಾರಿದರು.

Mandya hanumdhwaja removal issue Pramod muthalik warns at Gadag rav
Author
First Published Jan 28, 2024, 5:05 PM IST

ಗದಗ (ಜ.28): ಮಂಡ್ಯದ ಕೆರಗೋಡ ಗ್ರಾಮದಲ್ಲಿ ಬೆಳಗಿನ ಜಾವ 4 ಗಂಟೆಗೆ ಕೇಸರಿ ಧ್ವಜ ತೆಗೆದಿದ್ದಾರೆ. ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರಾಜ್ಯಸರ್ಕಾರದ ವಿರುದ್ಧ ಕಿಡಿಕಾರಿದರು.

ಮಂಡ್ಯದ ಕೆರಗೋಡ ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಿರುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೇಸರಿ ಧ್ವಜ ಯಾವುದೋ ಪಕ್ಷ, ಸಂಘಟನೆಯದ್ದಲ್ಲ. ಸಾವಿರಾರು ವರ್ಷದಿಂದ ಬಂದ ದೇಶದ ಧರ್ಮದ ಧ್ವಜ. ಗ್ರಾಮ ಪಂಚಾಯ್ತಿ ಒಮ್ಮತದಿಂದ ಹಾರಿಸಿದ ಹನುಮಧ್ವಜವನ್ನು ಬಲವಂತವಾಗಿ ತೆರವುಗೊಳಿಸಿದ್ದಾರೆ. ಕಾಂಗ್ರೆಸ್‌ನವರಿಗೆ ಕೇಸರಿ ಎಂದರೆ ಕೆಂಡ ಕಂಡಂತೆ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮಂಡ್ಯ ಹನುಮಧ್ವಜ ತೆರವು ವಿವಾದ: ಮನೆ ಮನೆಯಲ್ಲೂ ಹಾರಿಸಲು ಕರೆ ನೀಡಿದ ಬಿಜೆಪಿ!

ಹನಮಧ್ವಜದ ಮೇಲೆ ಕಾಂಗ್ರೆಸ್ ಯಾಕೆ ಸಿಟ್ಟು?

ಕೇಸರಿ ಎಂದರೆ ತ್ಯಾಗ, ಸಂಸ್ಕೃತಿಯ, ಸಮೃದ್ಧಿಯ ಪ್ರತೀಕ. ಅದು ಯಾವುದೋ ಬಿಜೆಪಿ, ಆರೆಸ್ಸೆಸ್ ಧ್ವಜ ಅಲ್ಲ. ಧರ್ಮ ಧ್ವಜವನ್ನು ಗೌರವಿಸುವುದು ಕಾಂಗ್ರೆಸ್ ಕಲಿತುಕೊಳ್ಳಬೇಕು. ಧರ್ಮ ಧ್ವಜದ ಮೇಲೆ ನಿಮಗ್ಯಾಕೆ ಇಷ್ಟೊಂದು ಸಿಟ್ಟು? ಕಾಂಗ್ರೆಸ್ ದ್ವೇಷ ಸಾಧಿಸಿದಷ್ಟು ಹಿಂದು ಸಮಾಜ ಕೆರಳುತ್ತದೆ. ನಿಮ್ಮನ್ನೂ ದ್ವೇಷಿಸುತ್ತೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಮೇಲಿಂದ ಮೇಲೆ ಈ ರೀತಿಯ ಘಟನೆಗಳನ್ನು ನಡೆಯುತ್ತಿವೆ. ಇತ್ತೀಚೆಗಿನ ರಾಮನ ಅಲೆ, ಸುನಾಮಿಯಂತಾಗಿದೆ. ಅದನ್ನು ಕಾಂಗ್ರೆಸ್ ನವರಿಗೆ ನೋಡೋದಕ್ಕೆ ಆಗ್ತಿಲ್ಲ, ತಡೆದುಕೊಳ್ಳೋಕೆ ಆಗ್ತಿಲ್ಲ. ಉರಿ ಜಾಸ್ತಿಯಾಗಿ ಹೀಗೆ ಮಾಡುತ್ತಿದ್ದಾರೆ. ಹನುಮಧ್ವಜ ತೆಗೆದು ಅಕ್ಷಮ್ಯ ಅಪರಾಧ ಮಾಡಿದ್ದೀರಿ, ಸಾಲದ್ದಕ್ಕೆ ಹನುಮಭಕ್ತರ ಮೇಲೆ ಲಾಠಿಚಾರ್ಜ್ ಮಾಡಿದ್ದೀರಿ. ಲಾಠಿ ಚಾರ್ಜ್ ಯಾಕೆ ಮಾಡ್ಬೇಕಿತ್ತು? ಅಲ್ಲೇನು ಕಲ್ಲೆಸೆದಿದ್ದಾರಾ? ಗಲಾಟೆ ಮಾಡಿದ್ದಾರಾ? ಧ್ವಜ ತೆಗೆದಿದ್ದಕ್ಕೆ ಪ್ರತಿಭಟನೆ ಮಾಡಿದ್ದಾರೆ. ನಿಮ್ಮ ನಡೆ ವಿರೋಧಿಸಬಾರದಾ? ವಿರೋಧಿಸುವ ಹಕ್ಕು ನಮಗೆ ಇಲ್ವಾ? ಅಧಿಕಾರ ಇದೆ ಅಂತಾ ಅವ್ರ ಮೇಲೆ ಲಾಠಿ ಚಾರ್ಜ್ ಮಾಡ್ತೀರಾ? ಎಂದು ತೀವ್ರ ವಾಗ್ದಾಳಿ ನಡೆಸಿದರು.

ರಾಷ್ಟ್ರಧ್ವಜ ಹಾರಿಸುವ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ: ಸಿಎಂ ಸಿದ್ದರಾಮಯ್ಯ

ಯಾರ ಮೇಲೆ ಲಾಠಿ ಪ್ರಹಾರ ಮಾಡ್ಬೇಕು ಅವರ ಮೇಲೆ ಮಾಡಲ್ಲ. ಟಿಪ್ಪು ಜಯಂತಿಯಲ್ಲಿ ಔರಂಗಜೇಬನ ಕಟೌಟ್ ಹಾಕಿ ಮೆರವಣಿಗೆ ಮಾಡಿದಾಗ ಕಾಂಗ್ರೆಸ್‌ನವರಿಗೆ ಕಾನೂನು ನೆನಪಾಗಲಿಲ್ಲ. ಈಗ ಹಿಂದುಗಳ ಹನುಮಧ್ವಜ ಹಾರಿಸಿದರೆ ಕಾನೂನು ಉಲ್ಲಂಘನೆ ಆಗುತ್ತಾ? ಹಿಂದೂಗಳ ಭಾವನೆಗೆ ಧಕ್ಕೆ ತರುವಂಥ ಒಂದೊಂದು ಘಟನೆ ನೋಡ್ತಾ ಇದ್ರೆ ನೀವು ರಾವಣನ ಮಾನಸಿಕ ಸ್ಥಿತಿಗೆ ಬಂದಿದ್ದೀರಿ, ಕಾಲವೇ ಉತ್ತರಿಸಲಿದೆ ಎಚ್ಚರಿಕೆ ನೀಡಿದರು.

Follow Us:
Download App:
  • android
  • ios