ಬೆಂಗಳೂರು, (ಡಿ.8): ವೃತ್ತಿಯಲ್ಲಿ ವೈದ್ಯನಾಗಿರೋ ಪತಿರಾಯನೊಬ್ಬ ಹೆಂಡತಿಗೆ ವಾಟ್ಸ​ಪ್​ನಲ್ಲಿ ತಲಾಖ್​ ನೀಡಿ ಪರಾರಿಯಾಗಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಡಾ. ಜಾವೀದ್ ಖಾನ್, 2003ರಲ್ಲಿ ರೇಷ್ಮಾ ಅಜೀಜ್​ ಎಂಬುವವರನ್ನು ವಿವಾಹವಾಗಿದ್ದು, ಬಳಿಕ ಅವರು ಇಂಗ್ಲೆಂಡ್​ನಲ್ಲಿ ನೆಲೆಸಿದ್ದರು. ನಂತರ ಇಡೀ ಕುಟುಂಬ ಅಮೆರಿಕಾಗೆ ಶಿಫ್ಟ್​ ಆಗಿದ್ದು, ಈ ದಂಪತಿಗೆ 13 ವರ್ಷದ ಹೆಣ್ಣು ಹಾಗೂ 10 ವರ್ಷದ ಗಂಡು ಮಗು ಇದೆ.

ಗಂಡ ಹೆಂಡ್ತಿ ಮಕ್ಕಳು ಚೆನ್ನಾಗಿಯೇ ಇದ್ದರು. ಆದ್ರೆ ಇತ್ತೀಚೆಗೆ ಅದೇನಾಯ್ತು ಏನೋ ಇವರ ಕುಟುಂಬದಲ್ಲಿ ಬಿರುಕು ಉಂಟಾಗಿತ್ತು.

ಈ ವೇಳೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹಿರಿಯರು ಸಲಹೆಗೆ ನಿರ್ಧರಿಸಿ ಇಬ್ಬರೂ ಮಕ್ಕಳನ್ನು ಅಮೇರಿಕಾದಲ್ಲೇ ಬಿಟ್ಟು ದಂಪತಿ ಬೆಂಗಳೂರಿಗೆ ಬಂದಿದ್ದಾರೆ.

ನ.30ರಂದು ಎಮಿರೇಟ್ಸ್ ವಿಮಾನದ ಮೂಲಕ ದೇವನಹಳ್ಳಿ ಏರ್​ಪೋರ್ಟ್​ಗೆ ಪ್ರಯಾಣ ಬೆಳೆಸಿದ್ದಾರೆ. ಈ ಮಧ್ಯೆಯೇ, ಡಾ. ಜಾವೀದ್ ಪತ್ನಿಯ ಪಾಸ್ಪೋರ್ಟ್, ಡೆಬಿಟ್, ಕ್ರೆಡಿಟ್ ಕಾರ್ಡ್ ಪಡೆದುಕೊಂಡಿದ್ದಾನೆ.

ಏರ್​ಪೋರ್ಟ್​ಗೆ ಆಗಮಿಸಿದ ಬಳಿಕ ಜಾವೀದ್​ ಬೌನ್ಸರ್ಗಳ ಭದ್ರತೆಯಲ್ಲಿ ರೇಷ್ಮಾ ಅಜೀಜ್​ನನ್ನು ಬಿಟ್ಟು ಅಮೇರಿಕಾಗೆ ಹಿಂದಿರುಗಿದ್ದು, ಅಮೆರಿಕಾ ತಲುಪುತ್ತಿದ್ದಂತೆಯೇ ಅಜೀಜ್​ಗೆ ವಾಯ್ಸ್ ಮೆಸೇಜ್ ಮತ್ತು ಟೆಕ್ಸ್ಟ್​ ಮೂಲಕ ತಲಾಖ್ ನೀಡುತ್ತಿರುವುದಾಗಿ ಸಂದೇಶ ಕಳುಹಿಸಿದ್ದಾನೆ.

ಈ ಸಂದೇಶ ಓದುತ್ತಲೇ ಅಜೀಜ್​ ಕಂಗಾಲಾಗಿ ಆಗಿದ್ದು, ನ್ಯಾಯಕ್ಕಾಗಿ ನಗರ ಉತ್ತರ ವಿಭಾಗ ಡಿಸಿಪಿ ಚೇತನ್​ ಸಿಂಗ್​ ರಾಥೋಡ್​, ಶಾಸಕ ಸುರೇಶ್ ಕುಮಾರ್, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಮೊರೆ ಹೋಗಿದ್ದಾರೆ.