*10 ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ ಮಾಡಿಕೊಂಡಿರುವ ಟ್ರಸ್ಟ್*ಅಡ್ಮಿನ್‌, ಸದಸ್ಯ ಸ್ಥಾನದಿಂದ ಉಚ್ಚಾಟನೆ ಪ್ರಶ್ನಿಸಿ ಮೊರೆ*ಸಿವಿಲ್‌ ನ್ಯಾಯಾಲದಯ ಮೊರೆ ಹೋಗಲು ಸೂಚನೆ

ಬೆಂಗಳೂರು (ಜ. 4) : ಖಾಸಗಿ ಟ್ರಸ್ಟ್‌ಗೆ ಸಂಬಂಧಿಸಿದ ವಾಟ್ಸ್‌ಆ್ಯಪ್‌ ಗ್ರೂಪಿನ ಅಡ್ಮಿನ್‌ (WhatsApp Group Admin) ಮತ್ತು ಸದಸ್ಯ ಸ್ಥಾನದಿಂದ ತೆಗೆದುಹಾಕಿದ ಕ್ರಮ ಆಕ್ಷೇಪಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್‌ ಕದ ತಟ್ಟಿದ ಅಪರೂಪದ ಪ್ರಕರಣವಿದು! ಬಡ ಹಾಗೂ ನಿರ್ಗತಿಕರ ಸೇವಾ ಚಟುವಟಿಕೆ ನಿರ್ವಹಿಸಲು ಸ್ಥಾಪನೆ ಮಾಡಲಾಗಿದೆ ಎನ್ನಲಾದ ‘ದಿ ರಾಬಿನ್‌ ಹುಡ್‌ ಪ್ರಾಜೆಕ್ಟ್ ಟ್ರಸ್ಟ್‌’ಗೆ ಸಂಬಂಧಿಸಿದ 10 ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಅಡ್ಮಿನ್‌ ಹಾಗೂ ಸದಸ್ಯ ಸ್ಥಾನದಿಂದ ತಮ್ಮನ್ನು ತೆಗೆದುಹಾಕಿದ ಕ್ರಮ ಆಕ್ಷೇಪಿಸಿ ಬೆಂಗಳೂರಿನ ಗುರಪ್ಪನಪಾಳ್ಯದ ನಿವಾಸಿ ಮೊಹಮ್ಮದ್‌ ಶರೀಫ್‌ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆದರೆ, ಶರೀಫ್‌ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿದಾರರು ಸಿವಿಲ್‌ ಅಥವಾ ಇತರೆ ನ್ಯಾಯಾಲಯದಲ್ಲಿ ತಮ್ಮ ಈ ಕುಂದುಕೊರತೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ.

ಟ್ರಸ್ಟ್‌ನ ಸೇವಾ ಕಾರ್ಯಗಳನ್ನು ಬಡ ಹಾಗೂ ನಿರ್ಗತಿಕರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ತಮ್ಮನ್ನು, ಸುಳ್ಳು ಆರೋಪದ ಮೇಲೆ ವಾಟ್ಸ್‌ಆ್ಯಪ್‌ ಗ್ರೂಪ್‌ನಿಂದ ಹೊರಹಾಕಲಾಗಿದೆ. ಹಾಗಾಗಿ, ಸುಳ್ಳು ಆರೋಪ ಹೊರಿಸಿ ಮಾನನಷ್ಟಉಂಟು ಮಾಡಿರುವುದಕ್ಕೆ ಪ್ರತಿಯಾಗಿ ನಷ್ಟಪರಿಹಾರ ನೀಡಲು ಹಾಗೂ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಮತ್ತೆ ತಮ್ಮನ್ನು ಸೇರಿಸಲು ಟ್ರಸ್ಟ್‌ಗೆ ನಿರ್ದೇಶನ ನೀಡುವಂತೆ ಕೋರಿ ಶರೀಫ್‌ ಅರ್ಜಿಯಲ್ಲಿ ಕೋರಿದ್ದರು. ಟ್ರಸ್ಟ್‌ ಹಾಗೂ ಅದರ ಸಂಸ್ಥಾಪಕರು, ಟ್ರಸ್ಟಿಗಳು, ಮುಂಬೈ, ಬೆಂಗಳೂರು, ನವದೆಹಲಿಯ ತಂಡದ ಸ್ವಯಂ ಸೇವಕರನ್ನು ಪ್ರತಿವಾದಿ ಮಾಡಿದ್ದರು.

ಪ್ರಕರಣವೇನು?:

‘ದಿ ರಾಬಿನ್‌ ಹುಡ್‌ ಪ್ರಾಜೆಕ್ಟ್ ಟ್ರಸ್ಟ್‌’ ತನ್ನ ಸ್ವಯಂ ಸೇವಕರ ಸದಸ್ಯತ್ವ ಹೊಂದಿದ 10 ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ ಮಾಡಿಕೊಂಡಿದೆ. ಗ್ರೂಪಿನಲ್ಲಿ ಅರ್ಜಿದಾರ 2018ರ ಫೆಬ್ರವರಿಯಿಂದ ಸದಸ್ಯರಾಗಿದ್ದರು. ಎರಡೂವರೆ ವರ್ಷಕ್ಕಿಂತ ಹೆಚ್ಚು ಕಾಲ ಅಡ್ಮಿನ್‌ ಆಗಿದ್ದರು. ಈ ಮಧ್ಯೆ ಟ್ರಸ್ಟ್‌ಗೆ ಸೇರಿದ ಯುನೈಟೆಡ್‌ ಕಿಂಗ್‌ಡಮ್‌ (ಯುಕೆ) ತಂಡವು ವಿಚಾರವೊಂದರ ಸಂಬಂಧ ಅನಿಸಿಕೆ ಹಂಚಿಕೊಂಡಿತ್ತು. ಅದರ ಬಗ್ಗೆ ಮಾತನಾಡಿದ ಕಾರಣಕ್ಕೆ ಅರ್ಜಿದಾರನನ್ನು ಗ್ರೂಪಿನ ಅಡ್ಮಿನ್‌ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಸ್ವಲ್ಪ ದಿನದ ನಂತರ ಟ್ರಸ್ಟ್‌ಗೆ ಸಂಬಂಧಿಸಿದ ಯೋಜನೆಯ ಮಾಹಿತಿಯನ್ನು ಸಾರ್ವಜನಿಕ ವೇದಿಕೆಯಲ್ಲಿ ಹಂಚಿಕೊಂಡ ಆರೋಪದ ಮೇಲೆ 10 ವಾಟ್ಸ್‌ಆ್ಯಪ್‌ ಗ್ರೂಪ್‌ನಿಂದಲೂ ಅರ್ಜಿದಾರರನ್ನು ತೆಗೆದು ಹಾಕಲಾಗಿತ್ತು.

ಇದನ್ನೂ ಓದಿWhatsApp Group Adminಗಳಿಗೆ ಹೆಚ್ಚಿನ ಅಧಿಕಾರ:‌ ಶೀಘ್ರದಲ್ಲೇ ಸದಸ್ಯರ ಮೆಸೇಜ್‌ ಡೀಲಿಟ್‌ ಮಾಡುವ ಸೌಲಭ್ಯ!

ಅದನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ ಶರೀಫ್‌, ಟ್ರಸ್ಟ್‌ಗೆ ಸಂಬಂಧಿಸಿದ ಯೋಜನೆಯ ಯಾವೊಂದು ಮಾಹಿತಿಯನ್ನು ತಾವು ಸಾರ್ವಜನಿಕ ವೇದಿಕೆಯಲ್ಲಿ ಹಂಚಿಕೊಂಡಿಲ್ಲ. ಸುಳ್ಳು ಆರೋಪ ಮಾಡಿ ವಾಟ್ಸ್‌ ಆ್ಯಪ್‌ ಗ್ರೂಪಿನಿಂದ ನನ್ನನ್ನು ತೆಗೆದು ಹಾಕಲಾಗಿದೆ. ಆ ಮೂಲಕ ನನ್ನ ಮೂಲಭೂತ ಹಕ್ಕು ಅದರಲ್ಲೂ ವಾಕ್‌ ಸ್ವಾತಂತ್ರ್ಯ ಹರಣ ಮಾಡಲಾಗಿದೆ. ಆದ್ದರಿಂದ ಮತ್ತೆ ವಾಟ್ಸ್‌ಆ್ಯಪ್‌ ಗ್ರೂಪಿಗೆ ಸೇರಿಸಬೇಕು. ಸುಳ್ಳು ಆರೋಪ ಹೊರಿಸಿ ಮಾನನಷ್ಟಮಾಡಿರುವುದಕ್ಕೆ ನಷ್ಟಪರಿಹಾರ ತುಂಬಿಕೊಡಲು ಟ್ರಸ್ಟ್‌ ಮತ್ತದರ ಸಂಸ್ಥಾಪಕರು, ಟ್ರಸ್ಟಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಕೋರ್ಟ್‌ ಆದೇಶವೇನು?:

ಅರ್ಜಿದಾರರು ಹೈಕೋರ್ಟ್‌ಗೆ ರಿಟ್‌ (ತಕರಾರು) ಅರ್ಜಿ ಸಲ್ಲಿಸಿ, ವಾಟ್ಸ್‌ಆ್ಯಪ್‌ ಗ್ರೂಪ್‌ ಅಡ್ಮಿನ್‌ ಸ್ಥಾನದಿಂದ ತೆಗೆದು ಹಾಕಿರುವುದರಿಂದ ಮೂಲಭೂತ ಹಕ್ಕು ಅದರಲ್ಲೂ ವಾಕ್‌ ಸ್ವಾತಂತ್ರ್ಯದ ಹರಣವಾಗಿದೆ ಎಂದು ಮೊರೆಯಿಟ್ಟಿದ್ದಾರೆ. ಆದರೆ, ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಅರ್ಜಿದಾರರ ಮನವಿಯನ್ನು ರಿಟ್‌ ನ್ಯಾಯಾಲಯ ಪುರಸ್ಕರಿಸಲಾಗದು. ಸಾರ್ವಜನಿಕ ಕಾನೂನಿನ ಅಂಶ ಹೊಂದಿರದ ಖಾಸಗಿ ಹಕ್ಕಿನ ವಿಚಾರದಲ್ಲಿ ರಿಟ್‌ ನ್ಯಾಯಾಲಯ ಯಾವುದೇ ಪರಿಹಾರ ಕಲ್ಪಿಸಲಾಗದು. ಹಾಗಾಗಿ, ಅರ್ಜಿದಾರರು ಸಿವಿಲ್‌ ಕೋರ್ಟ್‌ ಅಥವಾ ಇತರೆ ನ್ಯಾಯಾಲಯದಲ್ಲಿ ತಮ್ಮ ಕುಂದುಕೊರತೆಗೆ ಪರಿಹಾರ ಪಡೆಯಬಹುದು. ಅರ್ಜಿಯಲ್ಲಿ ಎತ್ತಲಾಗಿರುವ ಎಲ್ಲಾ ಅಂಶಗಳು ಮುಕ್ತವಾಗಿರುತ್ತದೆ ಎಂದು ತಿಳಿಸಿದ ಹೈಕೋರ್ಟ್‌, ಅರ್ಜಿ ಇತ್ಯರ್ಥಪಡಿಸಿತು.