Asianet Suvarna News Asianet Suvarna News

ಸೈಟ್‌ ಕೊಡಿಸೋದಾಗಿ ಜ್ಯೋತಿಷಿಗೇ ಟೋಪಿ ಹಾಕಿದ ನಟ

ಹೈ ಲೆವೆಲ್‌ನಲ್ಲಿ ಮೋಸ | ಕರ್ನಾಟಕ ಗೃಹ ಮಂಡಳಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ | ಕಡಿಮೆ ದರಕ್ಕೆ ಸೈಟ್‌ ಕೊಡಿಸೋದಾಗಿ ಹಣ ಕಿತ್ತ

Man cheats astrologer giving fake promise of arranging new site for him dpl
Author
Bangalore, First Published Jan 2, 2021, 6:58 AM IST

ಬೆಂಗಳೂರು(ಜ.02): ಕರ್ನಾ​ಟಕ ಗೃಹ ಮಂಡ​ಳಿ ಅಧಿಕಾರಿ ಸೋಗಿನಲ್ಲಿ ನಿವೇ​ಶನ ಕೊಡಿ​ಸುವುದಾಗಿ ಚಿತ್ರರಂಗದ ಗಣ್ಯರು ಹಾಗೂ ಜ್ಯೋತಿಷಿಗಳಿಗೆ ವಂಚಿ​ಸು​ತ್ತಿದ್ದ ನಿರ್ಮಾಪಕ ಹಾಗೂ ನಿರ್ದೇಶಕನೂ ಆಗಿರುವ ಆರೋಪಿಯೊಬ್ಬ ಮಹಾ​ಲಕ್ಷ್ಮಿ ಲೇಔಟ್‌ ಠಾಣೆ ಪೊಲೀ​ಸರ ಬಲೆಗೆ ಬಿದ್ದಿದ್ದಾನೆ.

ರಾಜಾ​ಜಿ​ನ​ಗರದ ನಿವಾಸಿ ಶ್ರೀಧರ್‌ ಅಲಿ​ಯಾಸ್‌ ಹರಿ​ಪ್ರ​ಸಾ​ದ್‌​(29) ಬಂಧಿತ. ಮಹಾ​ಲಕ್ಷ್ಮಿ ಲೇಔಟ್‌ ನಿವಾಸಿ ಜ್ಯೋತಿಷಿ ಶಂಕರ್‌ ಜಿ.ಹೆಗ್ಡೆ ಎಂಬು​ವರು ನೀಡಿದ ದೂರಿನ ಮೇರೆಗೆ ಆರೋ​ಪಿ​ಯನ್ನು ಬಂಧಿ​ಸ​ಲಾ​ಗಿದೆ.

 

ಶ್ರೀಧರ್‌ ಅಲಿಯಾಸ್‌ ಹರಿಪ್ರಸಾದ, ‘ಕಲಿಯುಗದ ಕಂಸ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದು, ‘ರಾಜನಿಗೂ-ರಾಣಿಗೂ’ ಎಂಬ ಚಿತ್ರಕ್ಕೆ ಹಣ ಹೂಡಿದ್ದಾನೆ. ಎರಡೂ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕು.

ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ದೂರುದಾರ ಜ್ಯೋತಿಷಿ ಶಂಕರ್‌ ಜಿ.ಹೆಗ್ಡೆ ಅವರಿಗೆ ಆರೋಪಿ ಹರಿಪ್ರಸಾದ್‌ ಕರ್ನಾಟಕ ಗೃಹ ಮಂಡಳಿಯಲ್ಲಿ ಹಿರಿಯ ಅಧಿಕಾರಿಯಾಗಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ. ಕಡಿಮೆ ಮೊತ್ತದಲ್ಲಿ ಕರ್ನಾಟಕ ಗೃಹ ಮಂಡಳಿಯಲ್ಲಿ ನಿವೇಶನ ಕೊಡಿಸುವುದಾಗಿ ಜ್ಯೋತಿಷಿಗೆ ನಂಬಿಸಿದ್ದ. ಅಲ್ಲದೆ, ಚಿತ್ರರಂಗದ ಹಲವು ಗಣ್ಯರಿಗೆ ನಿವೇಶನ ಕೊಡಿಸಿದ್ದೇನೆ ಎಂದು ಹೇಳಿ ಅವರೊಂದಿಗಿರುವ ಫೋಟೋಗಳನ್ನು ತೋರಿಸಿದ್ದ. ಜ್ಯೋತಿಷಿ ಅವರ ಬಳಿ ಆರೋಪಿ ಅರ್ಜಿ​ಯೊಂದನ್ನು ಭರ್ತಿ ಮಾಡಿ​ಸಿ​ಕೊಂಡಿ​ದ್ದ.

 

ನಂತ​ರ ಆರೋ​ಪಿಯ ಮೊಬೈಲ್‌ ಸಂಖ್ಯೆಯಿಂದ ದೂರುದಾರ ಜ್ಯೋತಿಷಿ ಮೊಬೈ​ಲ್‌ಗೆ ಚಲನ್‌ ಮೂಲಕ ಮಂಡಳಿಗೆ ‘ಜೆಡಿ​ಕೆ​ಎ​ಚ್‌​ಬಿ​ಎ​ಪಿ​ಎ​ಲ್‌’ ಎಂಬ ಆ್ಯಪ್‌ ಮೂಲಕ ಹಣ ಕಟ್ಟಿ​ರು​ವು​ದಾಗಿ ಸಂದೇಶ ಕಳು​ಹಿ​ಸಿ​ದ್ದ. ಇದು ಗೃಹ ಮಂಡಳಿ ಅವರೇ ಕಳಿಸಿದ್ದಂತೆ ಇತ್ತು. ಇದನ್ನು ನಂಬಿದ ಜ್ಯೋತಿಷಿ .1,73,900 ಹಣ ಪಾವ​ತಿ​ಸಿದ್ದರು. ಬಳಿಕ ಅದೇ ಆ್ಯಪ್‌ ​ಮೂ​ಲಕ ಮತ್ತೊಮ್ಮೆ ಮೊದಲ ಕಂತು .6.50 ಲಕ್ಷ ಬಾಕಿ ಇದ್ದು, ಡಿ.21ರೊಳಗೆ ಪಾವ​ತಿ​ಸ​ಬೇಕು ಎಂದು ಡಿ.18ರಂದು ಸಂದೇಶ ಬಂದಿದೆ. ಈ ವೇಳೆಯೂ ಜ್ಯೋತಿಷಿ ಶಂಕರ್‌ ಅವರು ಹಣ ಪಾವತಿಸಿದ್ದರು.

ಈ ಮಧ್ಯೆ ಡಿ.25ರಂದು ಮಂಡ​ಳಿಯ ನಿವೇ​ಶ​ನ​ಗ​ಳನ್ನು ಪಡೆ​ಯಲು ಹೆಚ್ಚು​ವರಿ ಖರ್ಚು .4 ಲಕ್ಷ ಕೊಡಿ ಎಂದು ಆರೋಪಿ ದೂರುದಾರರ ಬಳಿ ಬಂದಿದ್ದ. ಅನು​ಮಾ​ನ​ಗೊಂಡ ಜ್ಯೋತಿಷಿ, ಆರೋ​ಪಿ​ಯ​ನ್ನು ಹಿಡಿದು ಪ್ರಶ್ನಿ​ಸಿ​ದಾಗ ತನ್ನ ಬಳಿ​ಯಿದ್ದ .3.40 ವಾಪಸ್‌ ನೀಡಿದ್ದ. ಉಳಿಕೆ ಹಣ ನೀಡಲು ಸತಾಯಿಸುತ್ತಿದ್ದ. ವಂಚನೆಯಾಗಿರುವ ಬಗ್ಗೆ ಪೊಲೀಸರಿಗೆ ಜ್ಯೋತಿಷಿ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

 

ಆರೋಪಿ ಚಿತ್ರರಂಗದಲ್ಲಿನ ಕೆಲವು ಪ್ರಮುಖರಿಗೆ ವಂಚನೆ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಈತನ ವಿರುದ್ಧ ಕುಮಾರಸ್ವಾಮಿ ಲೇಔಟ್‌, ಮಡಿವಾಳ, ಸಿ.ಕೆ.ಅಚ್ಚುಕಟ್ಟು ಠಾಣೆ ಸೇರಿದಂತೆ ನಗರದಲ್ಲಿ 20ಕ್ಕೂ ಹೆಚ್ಚು ವಂಚನೆ ದೂರುಗಳು ದಾಖಲಾಗಿವೆ. ಆರೋಪಿ 2 ವರ್ಷಗಳ ಹಿಂದೆ ಸಿ.ಕೆ.ಅಚ್ಚುಕಟ್ಟು ಮತ್ತು ಮಡಿವಾಳ ಠಾಣೆ ಪೊಲೀಸರಿಂದ ಇದೇ ರೀತಿಯ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ. ಜೈಲಿನಿಂದ ಬಿಡುಗಡೆ ಆದ ಬಳಿಕವೂ ವಂಚನೆ ಕೃತ್ಯವನ್ನು ಮುಂದುವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶರತ್‌ ಲೋಹಿತಾಶ್ವಗೆ .6​​0 ಲಕ್ಷ ವಂಚನೆ!

ಆರೋಪಿ ಹರಿಪ್ರಸಾದ್‌ ನಟ ಲೋಹಿತಾಶ್ವ ಅವರ ಬಳಿ ಸಿನಿಮಾ ನಿರ್ಮಾಪಕ ಆಗಿದ್ದು, ಕರ್ನಾಟಕ ಗೃಹ ಮಂಡಳಿಯಲ್ಲಿ ಎಇಇ ಆಗಿದ್ದೇನೆ ಎಂದು ಕಳೆದ ವರ್ಷ ಮೇ ತಿಂಗಳಿನಲ್ಲಿ ಪರಿಚಯಿಸಿಕೊಂಡಿದ್ದ. ನಿಮ್ಮ ಪತ್ನಿ ಹೆಸರಿಗೆ 50/80 ಅಡಿಯ ನಿವೇಶನ ಮಂಜೂರು ಮಾಡಿಸೋದಾಗಿ ಕೆಲವು ದಾಖಲೆ ಪಡೆದಿದ್ದ. ಬಳಿಕ ಹಂತ-ಹಂತವಾಗಿ ಶರತ್‌ ಲೋಹಿತಾಶ್ವ ಅವರಿಂದ ಒಟ್ಟು .60 ಲಕ್ಷ ಪಡೆದಿದ್ದಾನೆ. ಹಣ ಜಮೆಯಾದ ಬಳಿಕ ಗೃಹ ಮಂಡಳಿಯಿಂದ ಸಂದೇಶ ಬಂದಂತೆ ಶರತ್‌ ಅವರ ಮೊಬೈಲ್‌ಗೆ ಸಂದೇಶ ರವಾನೆಯಾಗಿದೆ. ನಾಲ್ಕೈದು ತಿಂಗಳು ಕಳೆದರೂ ನಿವೇಶನ ಮಂಜೂರಾಗದ ಬಗ್ಗೆ ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ ಎಂದು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನೂ ಹಲವರಿಗೆ ಮೋಸ?

ಆರೋಪಿ ವಂಚನೆ ಮಾಡಿದ ಹಣದಲ್ಲಿ ಮೋಜು ಮಾಡುತ್ತಿದ್ದ, ಹೊರ ರಾಜ್ಯಕ್ಕೆ ಹೋದರೂ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದ. ಸುಮಾರು ಹತ್ತಾರು ಕೋಟಿ ರು. ವಂಚನೆಯಾಗಿರುವ ಬಗ್ಗೆ ಮಾಹಿತಿ ಇದೆ. ಚಿತ್ರರಂಗದ ತಾರೆಗಳಿಗೆ ವಂಚನೆಯಾಗಿರುವ ಬಗ್ಗೆ ಇನ್ನಷ್ಟೇ ಮಾಹಿತಿ ಕಲೆ ಹಾಕಬೇಕಿದೆ. ವಂಚನೆಗೊಳಗಾದವರು ಪೊಲೀಸರಿಗೆ ದೂರು ನೀಡಬಹುದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Follow Us:
Download App:
  • android
  • ios