Asianet Suvarna News Asianet Suvarna News

42 ವರ್ಷ ನಮ್ಮಿಬ್ಬರ ಒಡನಾಟ: ಹೈ-ಕ ಸ್ಥಾನಮಾನ ಸಹಿ ಅವರದೇ: ಖರ್ಗೆ

ಪ್ರಣಬ್‌ ಮುಖರ್ಜಿ ಮತ್ತು ನನ್ನದು 42 ವರ್ಷಗಳ ರಾಜಕೀಯ ಒಡನಾಟ. ಅವರು ಈ ದೇಶಕ್ಕೆ ಮಹಾನ್‌ ಕೊಡುಗೆಗಳನ್ನು ನೀಡಿದ್ದಾರೆ. ಅವರು ಭವಿಷ್ಯದಲ್ಲಿಯೂ ನೆನಪಿನಲ್ಲಿ ಉಳಿಯುವ ರಾಜಕಾರಣಿ.

Mallikarjuna Kharge Tributes to Pranab Mukherjee
Author
Bengaluru, First Published Sep 1, 2020, 9:44 AM IST

ಬೆಂಗಳೂರು (ಸೆ. 01): ಪ್ರಣಬ್‌ ಮುಖರ್ಜಿ ಮತ್ತು ನನ್ನದು 42 ವರ್ಷಗಳ ರಾಜಕೀಯ ಒಡನಾಟ. ಅವರು ಈ ದೇಶಕ್ಕೆ ಮಹಾನ್‌ ಕೊಡುಗೆಗಳನ್ನು ನೀಡಿದ್ದಾರೆ. ಅವರು ಭವಿಷ್ಯದಲ್ಲಿಯೂ ನೆನಪಿನಲ್ಲಿ ಉಳಿಯುವ ರಾಜಕಾರಣಿ.

ಪ್ರಣಬ್‌ ಅವರೊಳಗೆ ಒಬ್ಬ ಪತ್ರಕರ್ತರಿದ್ದರು. ಅವರು ಪತ್ರಕರ್ತರಾಗಿದ್ದುಕೊಂಡೇ ರಾಜ್ಯಸಭಾ ಸದಸ್ಯರಾಗಿದ್ದರು. ಪಶ್ಚಿಮ ಬಂಗಾಳ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್‌ ನ ಕಾರ್ಯಕಾರಿ ಸಮಿತಿ, ಸಂಸದೀಯ ಮಂಡಳಿಯಲ್ಲಿ ದೀರ್ಘಕಾಲ ಸದಸ್ಯರಾಗಿದ್ದು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಮೇಲೆ ತಮ್ಮ ಹಿಡಿತ ಸಾಧಿಸಿದ್ದರು.

ಯಾವುದೇ ವಿಷಯದ ಬಗ್ಗೆಯೂ ಪಾಂಡಿತ್ಯಪೂರ್ಣವಾಗಿ ಮಾತನಾಡುತ್ತಿದ್ದರು. ಅವರು ಸಚಿವ ಸಂಪುಟದ ಅನೇಕ ಉಪ ಸಮಿತಿ (ಗ್ರೂಪ್‌ ಅಫ್‌ ಮಿನಿಸ್ಟ​ರ್‍ಸ್) ಗಳಲ್ಲಿ ಇರುತ್ತಿದ್ದರು. ರಾಜಕೀಯ, ಆರ್ಥಿಕತೆ, ರಾಜಕೀಯ, ವಾಣಿಜ್ಯ, ವಿದೇಶಾಂಗ, ರಕ್ಷಣೆ, ಆಡಳಿತ, ಕಾನೂನು ಸುವ್ಯವಸ್ಥೆ ಹೀಗೆ ಎಲ್ಲ ಪ್ರಮುಖ ಅಂಶಗಳ ಬಗ್ಗೆ ಪ್ರಣಬ್‌ ಮುಖರ್ಜಿ ಅವರಿಗೆ ಸ್ಪಷ್ಟವಾದ ಅರಿವಿರುತ್ತಿತ್ತು.

ವಿದ್ವತ್, ಅನುಭವ ಎರಡೂ ಇದ್ದರೂ ಪ್ರಣಬ್‌ ದಾಗೆ ಪ್ರಧಾನಿ ಹುದ್ದೆ ಅವಕಾಶ ಸಿಗಲಿಲ್ಲ: ಸಿದ್ದರಾಮಯ್ಯ

ಅವರ ನೆನಪಿನ ಶಕ್ತಿ ಅಗಾಧ. ರಾಜಕಾರಣಿಗಳಲ್ಲಿ ಇಷ್ಟೊಂದು ನೆನಪಿನ ಶಕ್ತಿ ಇದ್ದ ಇನ್ನೊಬ್ಬರನ್ನು ನಾನು ನೋಡಿಲ್ಲ. ಐತಿಹಾಸಿಕ ಸಂಗತಿಗಳನ್ನು ಯಾವುದೇ ಕ್ಷಣದಲ್ಲಿಯೂ ನೆನಪು ಮಾಡಿಕೊಂಡು ಕರಾರುವಾಕ್ಕಾಗಿ ಮಂಡಿಸುವ ಮೇಧಾವಿ ಪ್ರಣಬ್‌ ಆಗಿದ್ದರು. ಸಂಸದೀಯ ಕಲಾಪದ ಆಗುಹೋಗುಗಳ ಬಗ್ಗೆ ಅಪಾರ ತಿಳುವಳಿಕೆ ಮತ್ತು ಜ್ಞಾನ ಹೊಂದಿದ್ದರು. ಅವರನ್ನು ಪ್ರತಿಪಕ್ಷಗಳು ಅವರನ್ನು ಕೆಣಕಲು ಹೋಗುತ್ತಿರಲಿಲ್ಲ.

1978ರಲ್ಲಿ ಚಿಕ್ಕಮಗಳೂರು ಲೋಕಸಭೆಯ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರು ಸ್ಪರ್ಧಿಸಿದ್ದರು. ಆಗ ಇಂದಿರಾ ಗಾಂಧಿ ಅವರ ಪರ ಪ್ರಚಾರದಲ್ಲಿ ಭಾಗಿಯಾಗಲು ಪ್ರಣಬ್‌ ಮುಖರ್ಜಿ ಬೆಳ್ತಂಗಡಿಗೆ ಬಂದು ಅಲ್ಲೆ$25 ದಿನಗಳ ಕಾಲ ಉಳಿದುಕೊಂಡಿದ್ದರು. ಆಗ ಬೆಳ್ತಂಗಡಿ ಎಂಬುದು ಒಂದು ಹಳ್ಳಿ. ಅಲ್ಲಿ ದೊಡ್ಡ ವ್ಯವಸ್ಥೆಗಳೇನು ಇರಲಿಲ್ಲ. ಬೆಳ್ತಂಗಡಿ ತಾಲೂಕಿನ ಪ್ರತಿ ಗ್ರಾಮಗಳಿಗೂ ಪ್ರಣಬ್‌ ಬೇಟಿ ನೀಡುತ್ತಿದ್ದರು. ಸಂಜೆ 6 ಗಂಟೆ ಒಳಗೆ ತಮ್ಮ ಕೊಠಡಿ ಸೇರಿಕೊಳ್ಳುತ್ತಿದ್ದರು. ಆಗ ನಾನು ದೇವರಾಜ ಅರಸು ಸರ್ಕಾರದಲ್ಲಿ ಸಚಿವನಾಗಿದ್ದೆ. ಆಗ ಪ್ರತಿದಿನ ಭೇಟಿಯಾಗುತ್ತಿದ್ದೆವು.

ಕಾಂಗ್ರೆಸ್‌ ಪಕ್ಷದ ಸಭೆಯಾಗಲಿ, ಸಚಿವ ಸಂಪುಟದ ಸಭೆಯೇ ಆಗಲಿ ಯಾವುದೇ ಮಾತನ್ನು ಧೈರ್ಯವಾಗಿ ಹೇಳುವ ತಾಕತ್ತು ಪ್ರಣಬ್‌ ಅವರಿಗಿತ್ತು. ಅವರು ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಅವರ ಜೊತೆ ಆಪ್ತ ಒಡನಾಟ ಹೊಂದಿದ್ದರು. ರಾಜೀವ್‌ ಗಾಂಧಿ ಜೊತೆ ಸಂಬಂಧ ತುಸು ಹಳಸಿದರೂ ಕೂಡ ಆ ಬಳಿಕ ನರಸಿಂಹ ರಾವ್‌ ಮತ್ತು ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದರು.

ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡುವ 371 (ಜೆ) ಕಾಯ್ದೆಯಾಗಿ ರೂಪುಗೊಳ್ಳುವ ಸಂದರ್ಭದಲ್ಲಿ ಪ್ರಣಬ್‌ ದೇಶದ ರಾಷ್ಟ್ರಪತಿಯಾಗಿದ್ದರು. ಈ ಕಾಯ್ದೆಗೆ ಶೀಘ್ರವಾಗಿ ಅವರು ಒಪ್ಪಿಗೆ ನೀಡಿದ್ದರು. ಅವರಿಗೆ ಸಹಾಯ ಮಾಡಬೇಕು ಎಂದೆನಿಸಿದರೆ ಯಾವ ರೀತಿಯಲ್ಲಾದರೂ ನೆರವಾಗುತ್ತಿದ್ದರು. ಕಲಬುರಗಿಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ನಾನು ಅವರನ್ನು ಎರಡು ಮೂರು ಬಾರಿ ಆಹ್ವಾನಿಸಿದೆ. ಅವರು ಬಂದಿದ್ದರು.

ಅವರೊಬ್ಬ ರಾಜಕೀಯ ಪಂಡಿತ. ರಾಜಕೀಯದಲ್ಲಿ ಚತುರ. ಮಹಾನ್‌ ನಾಯಕ. ಪಶ್ಚಿಮ ಬಂಗಾಳದ ಸಣ್ಣ ಕುಟುಂಬದಿಂದ ಬಂದು ಕೇಂದ್ರ ಸರ್ಕಾರದ ಅನೇಕ ಪ್ರಮುಖ ಸಚಿವ ಸ್ಥಾನಗಳನ್ನು ನಿರ್ವಹಿಸಿ, ರಾಷ್ಟ್ರಪತಿಯಾಗಿ ಭಾರತ ರತ್ನರಾದ ಅಸಾಧಾರಣ ಪ್ರತಿಭೆ ಪ್ರಣಬ್‌ ಮುಖರ್ಜಿ. ವ್ಯಕ್ತಿಗತವಾಗಿ ಇಷ್ಟೆಲ್ಲ ಸಾಧನೆ ಮಾಡಿದ್ದು ನೋಡಿದರೆ ಅವರ ಸಾಮರ್ಥ್ಯದ ಅರಿವಾಗುತ್ತದೆ.

Follow Us:
Download App:
  • android
  • ios