Asianet Suvarna News Asianet Suvarna News

ಸಂದೇಶ್‌ಖಾಲಿಯಾ ರಾಕ್ಷಸ ಶಾಜಹಾನ್: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಅಳ್ವಿಕೆ ಸೂಕ್ತವಲ್ಲವೇ?

ಹಲವು ನೂರು ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯ ಅತ್ಯಾಚಾರದ ಕುರಿತ ಸತ್ಯ ಕಥೆಗಳನ್ನು ಸಾರಿ ಸಾರಿ ಹೇಳುತ್ತಿದ್ದರೂ, ಬೀದಿಗಿಳಿದು ಪ್ರತಿಭಟಿಸುತ್ತಿದ್ದರೂ, ಭಾಜಪ ಮತ್ತು ಆರ್‌ಎಸ್‌ಎಸ್‌ನವರು ಇವೆಲ್ಲದ್ದಕ್ಕೂ ಕಾರಣ, ಶಾಜಹಾನ ಸಾಚಾ ಎಂದು ತಮ್ಮ ಕುರ್ಚಿಯನ್ನುಳಿಸಿಕೊಳ್ಳಲು ಮಮತಾ ಸುಳ್ಳುಗಳನ್ನು ಪೋಣಿಸಿ ಹೇಳುತ್ತಿರುವುದು, ಒಂದು ರಾಜ್ಯ ಸರ್ಕಾರದ ಪರಮೋಚ್ಚ ವೈಫಲ್ಯವಲ್ಲವೇ?

Malavika avinash wrote about sandeshKhalia inhumanity ruckus at west bengal rav
Author
First Published Feb 23, 2024, 6:34 AM IST

- ಮಾಳವಿಕಾ ಅವಿನಾಶ್‌ 

‘ಮರ್ಡರ್ ಇನ್ ಎ ಕೋರ್ಟ್ ರೂಮ್’ ಎಂಬ ಶೀರ್ಷಿಕೆಯ ಒಂದು ಸಾಕ್ಷ್ಯಚಿತ್ರವನ್ನು ಕೆಲವು ತಿಂಗಳುಗಳ ಹಿಂದೆ ಓಟಿಟಿಯಲ್ಲಿ ನೋಡಿದ ನೆನಪು. ನಾಗಪುರದ ಕಸ್ತೂರ ಬಾ ನಗರವೆಂಬ ದಲಿತರ ಒಂದು ಬಸ್ತಿಯ ಹತ್ತಾರು ಹೆಣ್ಣುಮಕ್ಕಳು ತಮ್ಮ ಚೀಲಗಳಲ್ಲಿ ಅಡುಗೆ ಮನೆಯ ಚಾಕು, ಈಳಿಗೆ ಮಣೆ, ಖಾರದ ಪುಡಿಯನ್ನು ನಾಗಪುರದ ಕೋರ್ಟಿಗೆ ಕೊಂಡೊಯ್ದು ಅಕ್ಕು ಯಾದವ್ ಎಂಬಾತನನ್ನು ಸಾಮೂಹಿಕವಾಗಿ ವಧೆ ಮಾಡುತ್ತಾರೆ. ಇದು ಸಾಕ್ಷ್ಯಚಿತ್ರದ ಕ್ಲೈಮಾಕ್ಸ್. ಅಕ್ಕು ಯಾದವ್ ಆ ಬಸ್ತಿಯ ಹೆಣ್ಣುಮಕ್ಕಳಲ್ಲಿ ಸತತ ಭಯ ಮೂಡಿಸಿ, ಮದುವೆಯಾದ ಮತ್ತು ಮದುವೆಯಾಗದ ಹೆಣ್ಣುಮಕ್ಕಳನ್ನು ಬಲವಂತವಾಗಿ ಎಳೆದು ಹೋಗಿ ತನ್ನ ಸಂಗಡಿಗರೊಂದಿಗೆ ಮನಬಂದಂತೆ ಅತ್ಯಾಚಾರವೆಸಗುತ್ತಾನೆ. ಕೆಲವೊಮ್ಮೆ ಗಂಡನೆದುರೇ! ಪೊಲೀಸರು ದೂರು ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಸಾಕ್ಷ್ಯದ ಕೊರತೆ ಕಾರಣದಿಂದ ಅಕ್ಕು ಯಾದವ್‌ಗೆ ಕೋರ್ಟಿನಲ್ಲೂ ಶಿಕ್ಷೆಯಾಗುವುದಿಲ್ಲ. ವಿಧಿಯಿಲ್ಲದೆ ಆ ದಲಿತ ಹೆಣ್ಣುಮಕ್ಕಳು ಅವನನ್ನು ಸ್ವತಃ ಹತ್ಯೆ ಮಾಡುತ್ತಾರೆ. ಇದು 2004ರಲ್ಲಿ ನಡೆದ ಸತ್ಯ ಘಟನೆ. ಸಾಕ್ಷ್ಯ ಚಿತ್ರವನ್ನು ನೋಡುತ್ತಾ ನಮಗೇ ರಕ್ತ ಕುದ್ದು ಹೋಗುತ್ತದೆ. ಹೀಗೆ ಸಾಧ್ಯವಾ? ಎಂಬ ಭಾವ ನಮ್ಮಲ್ಲಿ ಮೂಡುತ್ತದೆ. ಇತ್ತೀಚೆಗೆ ಬೆಳಕಿಗೆ ಬಂದು ರಾಷ್ಟ್ರ ವ್ಯಾಪಿ ಚರ್ಚೆಗೆ ಗ್ರಾಸವಾಗಿರುವ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ನಡೆದಿರುವುದೂ, ಕಸ್ತೂರಬಾ ನಗರದ ಕತೆಯೇ.

ಯಾವುದೇ ಆಧಾರ್ ಸಂಖ್ಯೆ ರದ್ದುಗೊಳಿಸಿಲ್ಲ;ಕೇಂದ್ರದ ವಿರುದ್ಧ ಗಂಭೀರ ಆರೋಪ ಮಾಡಿದ್ದ ದೀದಿಗೆ ಯುಐಡಿಎಐ ಉತ್ತರ

ಸಂದೇಶ್‌ಖಾಲಿ ದಾದಾ ಶಾಜಹಾನ್

ಪಶ್ಚಿಮ ಬಂಗಾಳದ 24 ಉತ್ತರ ಪರಗಣಾಸ್ ಜಿಲ್ಲೆಯ ಬಸಿರ್‌ಹಾತ್‌ನಲ್ಲಿ ಸಂದೇಶ್‌ಖಾಲಿ ಗ್ರಾಮವಿರುವುದು. ಇದರ ಜನಸಂಖ್ಯೆ 1.62 ಲಕ್ಷ. ಬಹುತೇಕರು ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರು. ಬಾಂಗ್ಲಾದೇಶ ಗಡಿಯ ಸಮೀಪವಿರುವ ಸುಂದರಬನ ಪ್ರದೇಶದಲ್ಲಿ ಈ ಗ್ರಾಮವಿದೆ. ಈ ಪ್ರದೇಶ ಅಕ್ರಮ ವಲಸಿಗರ ಬೀಡು. ಶಾಜಹಾನ್ ಎಂಬಾತ ಸಂದೇಶ್‌ಖಾಲಿಯ ಸ್ವಯಂಘೋಷಿತ ದಾದಾ. ಈ ಶೇಕ್ ಶಾಜಹಾನ್ ಪಶ್ಚಿಮ ಬಂಗಾಳದಲ್ಲಿ 2011ರಿಂದ ಸತತವಾಗಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯತಿ ಸದಸ್ಯ. ‘ಮಧ್ಯರಾತ್ರಿಯಲ್ಲಿ ಕರೆ ಬರುತ್ತದೆ.’ ‘ಈ ಕೂಡಲೇ ನೀನು ಬಾ! ನೀನು ಬರದಿದ್ದರೆ ನಾವೇ ನಿಮ್ಮನೆಗೆ ನುಗ್ಗಿ ಎಳೆದೊಯ್ಯುತ್ತೇವೆ.’ ‘ಪೊಲೀಸರ ವೇಷದಲ್ಲಿ ಅವನ ಜನ ಮನೆಗೆ ನುಗ್ಗುತ್ತಿದ್ದರು.’ ‘ಕಂಪ್ಲೈಂಟ್ ಕೊಟ್ಟ ಮಹಿಳೆಯರ ಮನೆಗೆ ನುಗ್ಗಿ, ಅಮಾನುಷವಾಗಿ ವರ್ತಿಸುತ್ತಿದ್ದರು.’ ‘ಅವನು ಇಲ್ಲೇ ಎಲ್ಲೋ ಅಡಗಿ ಕುಳಿತಿದ್ದಾನೆ.’ -ಹೀಗೆ ತಮ್ಮನ್ನು ಕಳೆದ ಒಂದು ದಶಕದಿಂದ ಶೇಕ್ ಶಾಜಹಾನ್ ಮತ್ತವನ ಕಾಮುಕ ದಂಡುಪಡೆಯ ಸದಸ್ಯರು ಬೆದರಿಸುತ್ತಾರೆ ಎಂದು ಹೇಳುತ್ತಾರೆ ಸಂದೇಶ್‌ಖಾಲಿಯ ಮಹಿಳೆಯರು. ಹಾಗೆ ಅಪಹರಿಸಿ ಎಳೆದೊಯ್ಯುವ ಹಿಂದೂ ಮಹಿಳೆಯರನ್ನು 3-4 ದಿನಗಳ ಕಾಲ ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲೇ ಬರ್ಬರವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸುತ್ತಾನೆ, ಅವನಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಒಬ್ಬಾಕೆ ಪತ್ರಕರ್ತರ ಬಳಿ ಕೂಗಿ ಹೇಳುತ್ತಿದ್ದಳು. ಶಾಜಹಾನ್ ಎಂಬ ರಾಕ್ಷಸ ಅಲ್ಲಿಗೇ ನಿಲ್ಲಿಸುವುದಿಲ್ಲ. ಬಡ, ದಲಿತ, ಆದಿವಾಸಿಗಳನ್ನು ಹೆದರಿಸಿ, ಗೂಂಡಾಗಳ ಮೂಲಕ ಅವರ ಜಮೀನನ್ನೂ ತನ್ನದಾಗಿಸಿಕೊಂಡಿದ್ದಾನೆ ಎಂಬ ಕತೆಗಳು ಒಂದೊಂದಾಗಿ ಹೊರಬರುತ್ತಿವೆ.

ಮರೀಚ್‌ ಝಾಪಿಗಳಿಗೂ ನ್ಯಾಯ ಇಲ್ಲ!

‘ಬ್ಲಡ್ ಐಲ್ಯಾಂಡ್’ ಎಂಬ ತಮ್ಮ ಪುಸ್ತಕದಲ್ಲಿ ಪತ್ರಕರ್ತ ಮಿತ್ರರಾದ ದೀಪ್ ಹಲ್ದರ್ ಪಶ್ಚಿಮ ಬಂಗಾಳದ ಮರೀಚ್ ಝಾಪಿ ಎಂಬ ದ್ವೀಪದಲ್ಲಿ 1979ರಲ್ಲಿ ಸಾವಿರಾರು ಹಿಂದೂಗಳ ಅತ್ಯಾಚಾರ, ಮಾರಣಹೋಮ ಅಂದಿನ ಕಮ್ಯುನಿಸ್ಟ್ ಸರ್ಕಾರದ ಸುಪರ್ದಿಯಲ್ಲಿ ನಡೆಯಿತು ಎಂದು ಬರೆಯುತ್ತಾರೆ. ಪೂರ್ವ ಬಂಗಾಳ(ಬಾಂಗ್ಲಾದೇಶ)ದಿಂದ ವಿಭಜನೆಯ ನಂತರ ಆಶ್ರಯವನ್ನರಸಿ ಬಂದ ಹಿಂದೂ(ಪ್ರಧಾನವಾಗಿ ದಲಿತ) ಜನರು ಬದುಕಲು ಅನುವು ಮಾಡಿಕೊಡದಿದ್ದಾಗ ಸ್ವಪ್ರಯತ್ನದಿಂದ 15000 ಹಿಂದೂಗಳು ಸುಂದರಬನದ ಮರೀಚ್ ಝಾಪಿಯಲ್ಲಿ ಕಟ್ಟಿಕೊಂಡ ಬದುಕನ್ನು ಛಿದ್ರಗೊಳಿಸಿ, ರಾಯ್ಮಂಗಲ್ ನದಿಯ ನೀರಿಗೆ ವಿಷ ಬೆರೆಸಿ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ, ಬರ್ಬರವಾಗಿ ಹತ್ಯೆಗೈದು, ಇದೇ ನದಿಗೆಸೆದದ್ದು ಅಂದಿನ ಪೊಲೀಸರು.

ಮರೀಚ್ ಝಾಪಿಯ ಸಂತ್ರಸ್ತರಿಗೆ ನ್ಯಾಯ ಕೊಡಿಸುತ್ತೇನೆಂದು, ಕಮ್ಯುನಿಸ್ಟ್ ಸರ್ಕಾರವನ್ನು ಉರುಳಿಸಿ ಮಮತಾ ಬ್ಯಾನರ್ಜಿ 2011ರಲ್ಲಿ ಅಧಿಕಾರಕ್ಕೆ ಬಂದದ್ದು ವಿಪರ್ಯಾಸವೇ ಸರಿ. 1979ರ ಸರ್ಕಾರಿ ಪ್ರಾಯೋಜಿತ ನರಮೇಧದಲ್ಲಿ ಹಿಂದೂಗಳಿಗೆ ನ್ಯಾಯ ಕೊಡಿಸುವುದಿರಲಿ, ಸ್ವತಃ ದಲಿತರ-ಆದಿವಾಸಿಗಳ ಕಣ್ಣೀರಿಂದ ತನ್ನ ಅರಮನೆಯನ್ನು ತೊಳೆಯುತ್ತಿರುವ ಶಾಜಹಾನನಿಗೆ ರಕ್ಷಣೆ ಕೊಡುತ್ತಿದ್ದಾರೆ ಮಮತಾ.

ಈವರೆಗೂ ಸಿಕ್ಕಿಲ್ಲ ಶಾಜಹಾನ್‌

ಹಾಗಿದ್ದರೆ ಈ ಸಂದೇಶ್ ಖಾಲಿಯ ದಾರುಣ ಕತೆ ಬೆಳಕಿಗೆ ಬಂದದ್ದಾದರೂ ಹೇಗೆ? ಕೇಂದ್ರದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಶ್ಚಿಮ ಬಂಗಾಳದ ರೇಷನ್ ಕಾರ್ಡ್ ಹಗರಣದ ತನಿಖೆಗಾಗಿ ಜನವರಿ 5, 2024 ರಂದು ಸಂದೇಶ್‌ಖಾಲಿಯಲ್ಲಿರುವ ಶಾಜಹಾನ್‌ನ ಮನೆಯ ಮೇಲೆ ದಾಳಿ ನಡೆಸುತ್ತಾರೆ. ಆಗ ಅವನ ಗೂಂಡಾ ಬೆಂಬಲಿಗರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸುತ್ತಾರೆ. ಬಂಧನದ ಭೀತಿಯಿಂದ ಶಾಜಹಾನ್‌ ಊರು ಬಿಟ್ಟು ಪರಾರಿಯಾಗುತ್ತಾನೆ. ಈವರೆಗೆ ಅವನು ಪೊಲೀಸರ ವಶಕ್ಕೆ ಸಿಕ್ಕಿಲ್ಲವೆಂಬುದೇ ಮಮತಾರ ಸಂಪೂರ್ಣ ಆಶೀರ್ವಾದ/ರಕ್ಷಣೆ ಅವನಿಗಿದೆ ಎಂಬುದಕ್ಕೆ ಸಾಕ್ಷಿ. ರಾಕ್ಷಸ ಕಣ್ಮರೆಯಾಗಿದ್ದೆ ತಡ, ಸಂದೇಶ್‌ಖಾಲಿಯ ಹೆಣ್ಣುಮಕ್ಕಳು ತಮ್ಮ ನೋವಿನ ಕತೆಗಳನ್ನು ಹೊರಬಂದು ಹೇಳತೊಡಗಿದರು. ಫೆಬ್ರವರಿ 9ರಂದು ಸಂದೇಶ್‌ಖಾಲಿಯ ಮಹಿಳೆಯರು ಶಾಜಹಾನ್ ಮತ್ತು ಶಿಬು ಪ್ರಸಾದ್ ಹಜ್ರಾರನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಾರೆ. ಆಕ್ರೋಶಗೊಂಡ ಸಂತ್ರಸ್ತ ಮಹಿಳೆಯರು ಹಜ್ರಾನ ಹಲವು ಕೋಳಿಫಾರಂಗೆ ಬೆಂಕಿ ಹಚ್ಚುತ್ತಾರೆ. ಹಜ್ರಾ ಕೂಡ 24 ಪರಗಣಾಸ್ ಜಿಲ್ಲೆಯ ತೃಣಮೂಲ ಕಾಂಗ್ರೆಸ್ಸಿನ ಜಿಲ್ಲಾ ಪಂಚಾಯತಿ ಸದಸ್ಯ.

ಶಾಜಹಾನ್‌ ನಿರಪರಾಧಿ ಎನ್ನುವ ಮಮತಾ!

ಬೇಲಿನೇ ಎದ್ದು ಹೊಲ ಮೇಯ್ದಂತೆ, ಮಮತಾರ ಪೊಲೀಸರು ಈಗಲೂ ಅಲ್ಲಿನ ಜನರ ಮೇಲೆ ಬಲಪ್ರಹಾರ ನಡೆಸುತ್ತಿದ್ದಾರೆಯೇ ವಿನಃ ಶೇಖ್ ಶಾಜಹಾನನನ್ನು ಹಿಡಿದಿಲ್ಲ. ಸಾರ್ವಜನಿಕ ವಲಯದಲ್ಲಿ ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರೂ, ಒಬ್ಬ ಮಹಿಳೆಯಾಗಿ ಎಡಪಂಥೀಯರ ರಾಜಕೀಯ ಹಿಂಸಾಚಾರಕ್ಕೆ ಬಲಿಯಾಗಿದ್ದ ಮಮತಾ ಬ್ಯಾನರ್ಜಿ, ‘ಶಾಜಹಾನ ನಿರಪರಾಧಿ. ಅವನ ಮೇಲಿನ ಆರೋಪ ರಾಜಕೀಯ ಪ್ರೇರಿತ’ ಎಂದು ಪಶ್ಚಿಮ ಬಂಗಾಳದ ಸದನದಲ್ಲೇ ಸುಳ್ಳು ಹೇಳಿಕೆ ನೀಡಿರುವುದು ಅತ್ಯಂತ ಹೇಯ. 

ಸಂಸದೆ ನುಸ್ರತ್‌ ಜಹಾನ್‌ ಕೂಡ ಮೌನ

ಮಮತಾರ ಸರ್ಕಾರ ತೃಣಮೂಲ ಕಾಂಗ್ರೆಸ್‌ನವರಲ್ಲದೆ, ರಾಷ್ಟ್ರೀಯ ಮಹಿಳಾ ಆಯೋಗದ ಸಮೇತವಾಗಿ ಮತ್ಯಾರಿಗೂ ಸಂದೇಶ್‌ಖಾಲಿಗೆ ಪ್ರವೇಶ ನೀಡುತ್ತಿಲ್ಲ. ಕ್ಷೇತ್ರದ ಲೋಕಸಭಾ ಸದಸ್ಯೆ ನುಸ್ರತ್ ಜಹಾನ್ ಸಂತ್ರಸ್ತ ಮಹಿಳೆಯರ ನೆರವಿಗೆ ಧಾವಿಸುವುದಿರಲಿ, ಆಕೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಸಂದೇಶ್‌ಖಾಲಿ ರೇಪ್ ಕೇಸ್ : ಟಿಎಂಸಿ ನಾಯಕ ಶಹಜಹಾನ್‌ ಶರಣಾಗತಿಗೆ ಕೋಲ್ಕತಾ ಹೈಕೋರ್ಟ್‌ ಆದೇಶ

ಮಣಿಪುರದ ಜನಾಂಗೀಯ ಗಲಭೆಯಲ್ಲಿ ಮಹಿಳೆಯರ ಮೇಲಾದ ದೌರ್ಜನ್ಯವನ್ನು ಪಾರ್ಲಿಮೆಂಟನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದ ಸ್ತ್ರೀವಾದಿಗಳು, ಇತ್ಯಾದಿ ಇತ್ಯಾದಿಗಳು ಯಾರೂ ಕೂಡ ಸಂದೇಶ್‌ಖಾಲಿಯ ಕುರಿತು ಒಂದೇ ಒಂದು ಶಬ್ದವಾಡಿಲ್ಲ. ಹಲವು ನೂರು ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯ ಅತ್ಯಾಚಾರದ ಕುರಿತ ಸತ್ಯ ಕಥೆಗಳನ್ನು ಸಾರಿ ಸಾರಿ ಹೇಳುತ್ತಿದ್ದರೂ, ಬೀದಿಗಿಳಿದು ಪ್ರತಿಭಟಿಸುತ್ತಿದ್ದರೂ, ಭಾಜಪ ಮತ್ತು ಆರ್‌ಎಸ್‌ಎಸ್‌ನವರು ಇವೆಲ್ಲದ್ದಕ್ಕೂ ಕಾರಣ, ಶಾಜಹಾನ ಸಾಚಾ ಎಂದು ತಮ್ಮ ಕುರ್ಚಿಯನ್ನುಳಿಸಿಕೊಳ್ಳಲು ಮಮತಾ ಸುಳ್ಳುಗಳನ್ನು ಪೋಣಿಸಿ ಹೇಳುತ್ತಿರುವುದು, ಒಂದು ರಾಜ್ಯ ಸರ್ಕಾರದ ಪರಮೋಚ್ಚ ವೈಫಲ್ಯವಲ್ಲವೇ? ಸಂವಿಧಾನದ 356ನೇ ವಿಧಿಯಡಿ ರಾಷ್ಟ್ರಪತಿ ಹೇಳಿಕೆ ಹೇರಲು ಈ ಪ್ರಕರಣ ಸೂಕ್ತವಲ್ಲವೇ?

Follow Us:
Download App:
  • android
  • ios