ಮಳವಳ್ಳಿಯಲ್ಲಿ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರು.ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಆರ್.ಪೇಟೆ (ಅ.16): ಮಳವಳ್ಳಿಯಲ್ಲಿ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರು.ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆದ ಮಹಾಕುಂಭಮೇಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಎಲ್ಲಾ ಸೆಕ್ಷನ್‌ಗಳನ್ನು ಹಾಕಿದ್ದಾರೆ. ಪ್ರಕರಣ ಸಂಬಂಧ ಕೂಡಲೇ ತನಿಖೆಯಾಗಿ ತಪ್ಪಿತಸ್ಥನಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಪೊಲೀಸರಿಗೆ ಸೂಚಿಸಿದರು. ಎಫ್‌ಎಸ್‌ಎಲ್ ವರದಿಯನ್ನು ವಾರದೊಳಗೆ ಕಳುಹಿಸುವುದಾಗಿ ಪೊಲೀಸರು ಹೇಳಿದ್ದಾರೆ. ವರದಿ ಬಂದ ಕೂಡಲೇ ದೋಷಾರೋಪಣಾ ಪಟ್ಟಿಯನ್ನು ಪೋಸ್ಕೋ ನ್ಯಾಯಾಲಯಕ್ಕೆ ರವಾನಿಸಿ ಆದಷ್ಟು ಬೇಗ ಈ ಪ್ರಕರಣಕ್ಕೆ ನ್ಯಾಯ ದೊರಕಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಈ ಪ್ರಕರಣ ಇಂತಹ ಕೃತ್ಯ ನಡೆಸುವವರಿಗೆ ಉದಾಹರಣೆಯಾಗಬೇಕಿದೆ. ಇನ್ನೊಮ್ಮೆ ಈ ರೀತಿಯ ಅತ್ಯಾಚಾರ ನಡೆದರೆ ಅತಿ ಕಡಿಮೆ ಅವಧಿಯಲ್ಲಿ ಉಗ್ರ ಶಿಕ್ಷೆ ನೀಡುತ್ತದೆ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸುವಂತೆ ತಿಳಿಸಿದರು.
ಪ್ರಕರಣದ ಹಿನ್ನೆಲೆ: ಮೈಸೂರಿನಲ್ಲಿ ವಾಸವಿದ್ದ ಕಾಂತರಾಜು (52) ಬಾಲಕಿಗೆ ಚಾಕೊಲೇಟ್ ನೀಡುವುದಾಗಿ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ನಡೆಸಿ ಕೊಲೆಗೈದು ನಂತರ ಬಾಲಕಿ ಶವವನ್ನು ನೀರಿನ ಸಂಪ್‌ಗೆ ಬಿಸಾಡಿದ್ದ. ಮಳವಳ್ಳಿ ಪಟ್ಟಣದ ಅಶ್ವಿನಿ ಮತ್ತು ಸುರೇಶ್‌ಕುಮಾರ್ ದಂಪತಿ ಪುತ್ರಿ ದಿವ್ಯ (10) ಮಂಗಳವಾರ ಬೆಳಗ್ಗೆ 11 ಗಂಟೆಯಲ್ಲಿ ಟ್ಯೂಷನ್‌ಗೆ ಮನೆಯಿಂದ ತೆರಳಿದ್ದ ನಂತರ ನಾಪತ್ತೆಯಾಗಿದ್ದರು. ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಗಾಬರಿಯಾದ ಪೋಷಕರು ಜ್ಞಾನ ಕುಠೀರ ಸೆಂಟರ್ ಸೇರಿದಂತೆ ಅಕ್ಕಪಕ್ಕದಲ್ಲಿ ವಿಚಾರಿಸಿದರೂ ಬಾಲಕಿ ಪತ್ತೆಯಾಗಿರಲಿಲ್ಲ.
ತರುವಾಯ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗ ನಾಗರಾಜು ಅವರ ನಿರ್ಮಾಣ ಹಂತದ ಮನೆಯ ಕಟ್ಟಡದ ಸಮೀಪದಲ್ಲಿ ಬಾಲಕಿ ನೀರಿನ ಸಂಪ್‌ನಲ್ಲಿ ಬಿದ್ದಿರುವ ಬಗ್ಗೆ ವ್ಯಕ್ತಿಯೊಬ್ಬ ನೀಡಿದ ಮಾಹಿತಿ ಮೇರೆಗೆ ಪೊಲೀಸರು ನೀರಿನ ಸಂಪ್‌ನಲ್ಲಿ ಪರಿಶೀಲನೆ ನಡೆಸಿದಾಗ ಬಾಲಕಿ ದಿವ್ಯಳ ಶವ ಪತ್ತೆಯಾಗಿತ್ತು.
ಬಾಲಕಿ ಶವ ದೊರೆತ ವೇಳೆ ಸಾಕಷ್ಟುಅನುಮಾನಗಳು ಉಂಟಾಗಿದ್ದವು. ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಬಗ್ಗೆ ಸಂಶಯ ಮೂಡಿದ್ದವು. ಘಟನಾ ಸ್ಥಳಕ್ಕೆ ಎಎಸ್ಪಿ ಸೇರಿದಂತೆ ಶ್ವಾನದಳ ತಂಡ ಪರಿಶೀಲನೆ ನಡೆಸಿದ ನಂತರ ಪೊಲೀಸರು ತನಿಖೆ ಕೈಗೊಂಡರು.
ನಾಗರಾಜು ಅವರ ನಿರ್ಮಾಣ ಹಂತದ ಮನೆಯ ನೀರಿನ ಸಂಪ್‌ನಲ್ಲಿ ಬಾಲಕಿ ದಿವ್ಯಳ ಶವ ಪತ್ತೆ ಬಗ್ಗೆ ಸಿಪಿಐ ಶ್ರೀಧರ್, ರಾಜೇಶ್, ಪಿಎಸ್‌ಐಗಳಾದ ವಿಸಿ ಅಶೋಕ್, ರವಿಕುಮಾರ್, ಶೇಷಾದ್ರಿ ಸೇರಿದಂತೆ ಪೊಲೀಸರ ತಂಡ ಸೆಂಟರ್‌ಗೆ ತೆರಳಿ ಪರಿಶೀಲಿಸಿ ಮನೆ ಬಳಿಗೆ ಯುವಕರು ಬರುತ್ತಿದ್ದಾರೆಯೇ ಎಂದು ವಿಚಾರಿಸಿದಾಗ ಯಾರು ಬರುವುದಿಲ್ಲ ಎಂದು ಸ್ವಷ್ಟನೆ ಸಿಕ್ಕಿದೆ.
ನಂತರ ಪಕ್ಕದಲ್ಲಿಯೇ ಇದ್ದ ಕಾಂತರಾಜು ಹೇಳಿಕೆ ಮೇಲೆ ಸಂಶಯಗೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಾಲಕಿಯನ್ನು ಅತ್ಯಾಚಾರಗೈದು ನೀರಿನ ಸಂಪ್‌ನಲ್ಲಿ ಬಿಸಾಡಿರುವುದಾಗಿ ತಪ್ಪೋಪ್ಪಿಕೊಂಡಿದ್ದಾನೆ.
ಸಿಎಂಗೆ ಪತ್ರ ಬರೆದ ಕೇಂದ್ರ ಗೃಹ ಸಚಿವೆ: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ‘ನಿರ್ಭಯಾ’ ಕಾಯ್ದೆಯನುಸಾರ ಪ್ರಕರಣ ದಾಖಲಿಸಬೇಕು ಮತ್ತು ಆದಷ್ಟುಬೇಗ ಎಫ್‌ಎಸ್‌ಎಲ್ ವರದಿಯನ್ನು ತರಿಸಿಕೊಳ್ಳಬೇಕು ಎಂದು ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಬಾಲಕಿ ಮೇಲೆ ನಡೆದಿರುವ ಘಟನೆಯು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ನಿರ್ಭಯಾ ಪ್ರಕರಣದ ನಂತರ ದೇಶದಲ್ಲಿ ಬಲವಾದ ಕಾನೂನು ಬಂದ ಮೇಲೂ ಇಂತಹ ನೀಚ ಮಾನಸಿಕತೆಯ ಜನರಿಗೆ ಭಯ ಇಲ್ಲದಿರುವುದು ಪ್ರಕರಣದಿಂದ ಮತ್ತೊಮ್ಮೆ ಸಾಬೀತಾಗಿದೆ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ದೇಶದ ಕಾನೂನಿನ ಬಗ್ಗೆ ಭಯ ಮೂಡಬೇಕು. ಅಂತಹ ಕಠಿಣವಾದ ಶಿಕ್ಷೆಯಿಂದ ಮಾತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗಲು ಸಾಧ್ಯ ಎಂದು ಹೇಳಿದ್ದಾರೆ.
ತನಿಖೆಯನ್ನು ತೀವ್ರಗತಿಗೊಳಿಸಿ, ಆರೋಪಪಟ್ಟಿಯನ್ನು ಸಲ್ಲಿಸಬೇಕು. ಸರ್ಕಾರವು ಈ ಪ್ರಕರಣಕ್ಕಾಗಿಯೇ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕು. ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬೇಕು. ಈ ನಿರ್ಧಾರವನ್ನು ಸರ್ಕಾರ ತಕ್ಷಣವೇ ತೆಗೆದುಕೊಳ್ಳಬೇಕು. ಪೋಷಕರಿಗೆ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
