ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ: ಸಚಿವ ಕತ್ತಿ ಹೇಳಿಕೆಗೆ ಮಹೇಶ್ ಜೋಶಿ ಕಿಡಿ
* ಕನ್ನಡ ನೆಲ ಒಡೆವ ಮಾತು ಸಹಿಸಲ್ಲ
* ಸ್ವಾರ್ಥಕ್ಕಾಗಿ ಕತ್ತಿ ಹೇಳಿಕೆ
* ಸಿಎಂ ಕತ್ತಿ ಅವರಿಗೆ ಮಾತಿನ ಮೇಲೆ ಹಿಡಿತ ಇಟ್ಟುಕೊಂಡು ಎಚ್ಚರದಲ್ಲಿರುವಂತೆ ಸೂಚಿಸಬೇಕು
ಬೆಂಗಳೂರು(ಜೂ.29): ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಕೇಳುವ ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಶಿ, ಕನ್ನಡ ನೆಲವನ್ನು ಒಡೆಯುವ ಮಾತನ್ನು ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಲ ವರ್ಷಗಳಿಂದ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವ ಕುರಿತು ಸ್ವಾರ್ಥ ಹಾಗೂ ಸ್ವಹಿತಾಸಕ್ತಿಯಿಂದ ಉಮೇಶ್ ಕತ್ತಿ ಹೇಳಿಕೆ ನೀಡುತ್ತಿದ್ದಾರೆ. ಅವರ ಪ್ರಚೋದನಾಕಾರಿ ಹೇಳಿಕೆಯಿಂದ ಕನ್ನಡಿಗರಲ್ಲಿ ಗೊಂದಲ ಉಂಟಾಗುತ್ತಿದೆ. ಸರ್ಕಾರ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸಿ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸುವ ಬದಲು ಪ್ರತ್ಯೇಕ ರಾಜ್ಯದ ಕಿಚ್ಚು ಹಚ್ಚುತ್ತಿರುವುದು ಖಂಡನೀಯ ಎಂದಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಮೋದಿ ಚಿಂತನೆ: ಕತ್ತಿ..!
ನೆರೆಯ ರಾಜ್ಯಗಳಲ್ಲಿ ಕನ್ನಡಿಗರೇ ಹೆಚ್ಚಾಗಿರುವ ಪ್ರದೇಶಗಳನ್ನು ಕರ್ನಾಟಕಕ್ಕೆ ವಿಲೀನಗೊಳಿಸುವ ಇಚ್ಛಾಶಕ್ತಿಯನ್ನು ಸಚಿವ ಕತ್ತಿ ಪ್ರಕಟಿಸಬೇಕಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಮರಾಠಿಗರ ಅಟ್ಟಹಾಸವನ್ನು ಮಟ್ಟಹಾಕುವ ಧ್ವನಿ ಎತ್ತುವ ಬದಲು ಪ್ರತ್ಯೇಕತೆಯ ಸ್ವರ ಎಬ್ಬಿಸುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿಯವರು ಉಮೇಶ ಕತ್ತಿ ಅವರಿಗೆ ಮಾತಿನ ಮೇಲೆ ಹಿಡಿತ ಇಟ್ಟುಕೊಂಡು ಎಚ್ಚರದಲ್ಲಿರುವಂತೆ ಸೂಚಿಸಬೇಕು ಅವರು ಆಗ್ರಹಿಸಿದ್ದಾರೆ.