ರಾಜ್ಯದಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದೆ. ಆದರೆ ನೆರೆಯ ಪ್ರಮಾಣ ಮಾತ್ರ ಇನ್ನೂ ಇಳಿದಿಲ್ಲ. ಮಹಾರಾಷ್ಟ್ರದ ಮಳೆಯು ಹೆಚ್ಚು ರಾಜ್ಯಕ್ಕೆ ಸಮಸ್ಯೆಯುಂಟು ಮಾಡಿದೆ. 

ಬೆಂಗಳೂರು [ಅ.23]:  ಉತ್ತರ ಕರ್ನಾಟಕವೂ ಸೇರಿದಂತೆ ಮಲೆನಾಡು, ಕರಾವಳಿ ಮತ್ತಿತರ ಭಾಗದಲ್ಲಿ ಹಲವೆಡೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಪ್ರಮಾಣ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಆದರೆ, ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಕೃಷ್ಣಾ, ದೂಧ್‌ಗಂಗಾ, ವೇದಗಂಗಾ, ಮಲಪ್ರಭಾ, ಭೀಮಾ ನದಿಗಳು ಉಕ್ಕಿ ಹರಿಯುತ್ತಿವೆ. ಆಲಮಟ್ಟಿ, ನಾರಾಯಣಪುರ ಅಣೆಕಟ್ಟಿನಿಂದ ಕೃಷ್ಣ ನದಿಗೆ ಭಾರೀ ಪ್ರಮಾಣದ ನೀರು ಹೊರಬಿಡಲಾಗುತ್ತಿದ್ದು, ಸುಮಾರು 3 ಲಕ್ಷ ಕ್ಯುಸೆಕ್‌ ನೀರು ಹರಿಯುತ್ತಿದ್ದು, ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಮತ್ತಷ್ಟುಗಂಭೀರವಾಗಿದೆ.

ಇದೇ ವೇಳೆ, ತುಂಗಭದ್ರಾ ನದಿಯಿಂದ 1.5 ಲಕ್ಷ ಕ್ಯು. ನೀರು ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಐತಿಹಾಸಿಕ ಹಂಪಿ, ಕೊಪ್ಪಳದ ನವವೃಂದಾವನಗಡ್ಡಿ ಸೇರಿದಂತೆ ಅನೇಕ ಪ್ರದೇಶಗಳು ಮುಳುಗಡೆ ಭೀತಿಯನ್ನು ಎದುರಿಸುತ್ತಿವೆ. ಹೆಚ್ಚೂಕಮ್ಮಿ ರಾಜ್ಯದ ಅರ್ಧಭಾಗದಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ಮಳೆ ಸಂಬಂಧಿ ಕಾರಣಗಳಿಗಾಗಿ ಮಂಗಳವಾರ ಇಬ್ಬರು ಮಹಿಳೆಯರೂ ಸೇರಿದಂತೆ ಐವರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ರಾಮಪ್ಪ ಮಲ್ಲಪ್ಪ ಹೊನ್ನನವರ (52) ಮಳೆನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದರೆ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರಲ್ಲಿ ಭದ್ರಾ ಹೊಳೆಯಲ್ಲಿ ಕಾಲುಜಾರಿ ಬಿದ್ದು ರವಿ ಎಂಬವರು ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಣ್ಣೂರಿನಲ್ಲಿ ಶೇಖವ್ವ ಶಿವಪ್ಪ ತಿಮ್ಮಣ್ಣವರ(68), ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರದಲ್ಲಿ ಬುಡೇನ್‌ಬಿ(80), ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ಕುಮಾರ್‌(46) ಎಂಬವರು ಮನೆ ಗೋಡೆ ಕುಸಿದು ಮೃತಪಟ್ಟಿದ್ದಾರೆ.

ಯಥಾಸ್ಥಿತಿಯಲ್ಲಿ ನೆರೆ ಭೀತಿ: ಎರಡು ತಿಂಗಳ ಹಿಂದಷ್ಟೇ ಕಂಡುಕೇಳರಿಯದ ರೀತಿಯಲ್ಲಿ ಪ್ರವಾಹದ ಪರಿಣಾಮ ಅನುಭವಿಸಿರುವ ಮಲಪ್ರಭಾ ನದಿ ತೀರ ಪ್ರದೇಶಗಳ ಜನತೆಗೆ ಈಗ ಮತ್ತೊಮ್ಮೆ ನೆರೆ ಭೀತಿಗೆ ಒಳಗಾಗಿದ್ದಾರೆ. ಜತೆಗೆ ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಮುಂದುವರಿದಿರುವುದರಿಂದ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ 1.1 ಲಕ್ಷ ಕ್ಯು.ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಜಿಲ್ಲಾಡಳಿತ ಮೂರು ಎನ್‌ಡಿಆರ್‌ಎಫ್‌ ತಂಡಗಳನ್ನು ನದಿ ತೀರದ ಗ್ರಾಮಗಳಲ್ಲಿ ನಿಯೋಜಿಸಿದೆ.

ಚಿಕ್ಕೋಡಿ ಉಪವಿಭಾಗದಲ್ಲಿ 6 ಸೇತುವೆಗಳು ಸಂಪೂರ್ಣ ಜಲಾವೃತಗೊಂಡು ಸಂಚಾರ ಕಡಿತಗೊಂಡಿದ್ದು ಬಾಗಲಕೋಟೆ, ಗದಗ ಸಂಪರ್ಕ ಕಲ್ಪಿಸುವ ಚೊಳಚಗುಡ್ಡ ಸೇತುವೆ ಜಲಾವೃತಗೊಂಡಿದ್ದರಿಂದ ರಸ್ತೆ ಸಂಚಾರ ಬಂದಾಗಿದೆ. ಬಾಗಲಕೋಟೆ, ವಿಜಯಪುರ ಸೇರಿದಂತೆ ಪ್ರಮುಖ ಸಂಪರ್ಕ ಸೇತುವೆಯಾದ ಹುಬ್ಬಳ್ಳಿ ಮಾರ್ಗದ ಕೊಣ್ಣೂರು ಸೇತುವೆ ಮೇಲೆ ನೀರು ಬಂದಿದ್ದರಿಂದ ಈ ಮಾರ್ಗವೂ ಸ್ಥಗಿತಗೊಂಡಿದೆ. ಅಲ್ಲದೆ ಐತಿಹಾಸಿಕ ಸ್ಥಳ ಪಟ್ಟದಕಲ್ಲಿಗೆ ಮತ್ತೆ ನೀರು ನುಗ್ಗಿದ್ದರಿಂದ ವಿದೇಶಿ ಪ್ರವಾಸಿಗರು ಸೇರಿದಂತೆ ಗ್ರಾಮಸ್ಥರಿಗೆ ಪ್ರವಾಹದ ಬಿಸಿ ತಟ್ಟಿದೆ.

ಮಲಪ್ರಭಾ ನದಿ ಪಾತ್ರದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನದಿ ತೀರದ ಏಳಕ್ಕೂ ಹೆಚ್ಚು ಗ್ರಾಮಗಳಲ್ಲಿ ಮತ್ತೆ ನೀರು ನುಗ್ಗಿದ್ದು ಜನ ಜೀವನ ಸಂಪೂರ್ಣ ಅವ್ಯವಸ್ತಗೊಂಡಿದೆ. ಘಟಪ್ರಭಾ ನದಿ ತೀರದ ಮುಧೋಳ ತಾಲೂಕಿನ ಚಿತ್ರಭಾನುಕೋಟೆ ಸೇರಿದಂತೆ ಸುತ್ತಲಿನ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ಸಂಪೂರ್ಣ ಕೊಚ್ಚಿ ಹೋಗಿದೆ.

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಮಂಗಳವಾರ 41600 ಕ್ಯುಸೆಕ್‌ ನೀರನ್ನು ಭೀಮಾನದಿಗೆ ಬಿಟ್ಟಿರುವ ಪರಿಣಾಮ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ವ್ಯಾಪ್ತಿಯ ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬಾಂದಾರಗಳು ಮುಳುಗಡೆಯಾಗಿ, ಬಾಂದಾರ್‌ ಮೇಲಿಂದ ನೀರು ಹರಿಯುತ್ತಿದೆ. ಮತ್ತೆ ನೀರಿನ ಪ್ರಮಾಣ ಹೆಚ್ಚಿದಲ್ಲಿ 12 ಗ್ರಾಮಗಳ ಗ್ರಾಮ​ಸ್ಥರು ಪ್ರವಾಹ ಭೀತಿಗೆ ಒಳ​ಗಾ​ಗ​ಬೇ​ಕಾ​ಗು​ತ್ತದೆ. ಇದರ ನಡುವೆ ಭೀಮಾ ನದಿಗೆ ನೀರು ಹರಿದುಬಂದಿರುವುದರಿಂದ ಆಲಮೇಲ ತಾಲೂಕಿನ ತಾರಾಪುರ ಮತ್ತೆ ಸಂಪೂರ್ಣ ಜಲಾವೃತವಾಗಿದ್ದು ಹೊರ ಸಂಪರ್ಕ ಕಳೆದುಕೊಂಡಿದೆ. ಅಲ್ಲದೆ, ತಾಳಿಕೋಟೆಯಲ್ಲಿ ಡೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.

ತುಂಗಭದ್ರಾ ತೀರದಲ್ಲಿ ನೆರೆ ಪರಿಸ್ಥಿತಿ: ತುಂಗಭದ್ರಾ ನದಿಗೆ ನೀರು ಬಿಟ್ಟಿದ್ದರಿಂದ ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿ ನದಿ ದಂಡೆಯಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವವಾಗಿದೆ. ತುಂಗಭದ್ರಾ ಪ್ರವಾಹದಿಂದ ಕೃಷ್ಣದೇವರಾಯ ಸಮಾಧಿ ಭಾಗಶಃ ಜಲಾವೃತವಾಗಿದ್ದು, ನವ ವೃಂದಾವನ ಗಡ್ಡೆ ಸಂಪೂರ್ಣವಾಗಿ ಮುಳುಗಿದೆ. ವಿರೂಪಾಪುರ ಗಡ್ಡೆಯ ಸುತ್ತಮುತ್ತ ನೀರು ನುಗ್ಗಿದ್ದು ಇಲ್ಲಿನ ರೆಸಾರ್ಟ್‌ನಲ್ಲಿದ್ದ ಪ್ರವಾಸಿಗರನ್ನು ಸೋಮವಾರ ಸಂಜೆಯೇ ಸ್ಥಳಾಂತರಿಸಲಾಗಿದೆ. ಗಂಗಾವತಿ- ಕಂಪ್ಲಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಗದಗ ಜಿಲ್ಲೆಯಲ್ಲಿ ಮಳೆಯ ಅಬ್ಬರದ ಜೊತೆಗೆ ಮಲಪ್ರಭಾ, ಬೆಣ್ಣಿಹಳ್ಳದ ಪ್ರವಾಹ ಜನರನ್ನು ಕಂಗೆಡಿಸಿದೆ. ಮಲಪ್ರಭಾ ನದಿಗೆ ನವಿಲುತೀರ್ಥ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟಿದ್ದರಿಂದ ರೋಣ ಮತ್ತು ನರಗುಂದ ತಾಲೂಕಿನ 10 ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿದ್ದು ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಹೊಳೆಆಲೂರಿಗೂ ನೀರು ನುಗ್ಗಿದ್ದು, ಸೋಮವಾರ ರಾತ್ರಿಯೇ ತೀರ ಪ್ರದೇಶದ ಜನರು ಎತ್ತರದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಸ್ಥಳಾಂತರಗೊಂಡಿದ್ದಾರೆ. ಇಲ್ಲಿನ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆ, ಎಚ್ಚರೇಶ್ವರ ಪ್ರೌಢ ಶಾಲೆಗಳು ಸಂಪೂರ್ಣ ಜಲಾವೃತವಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಒಟ್ಟು 1513 ಮನೆ ಹಾನಿಗೀಡಾಗಿವೆ. ರಾಣಿಬೆನ್ನೂರಿನಲ್ಲಿ ಸೋಮವಾರದಿಂದ ಆರಂಭಿಸಿರುವ ಪರಿಹಾರ ಕೇಂದ್ರದಲ್ಲಿ 54 ಕುಟುಂಬಗಳ 195 ಜನರು ಆಶ್ರಯ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಭಾರೀ ಮಳೆಯಿಂದ ಹಠಾತ್‌ ಬಂದ ಪ್ರವಾಹದಿಂದ 400ರಷ್ಟುಮನೆಗಳಿಗೆ ನೀರು ನುಗ್ಗಿದ್ದು 2 ಮನೆಗಳು ಕುಸಿದಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ತರೀಕೆರೆ, ಎನ್‌.ಆರ್‌.ಪುರ, ಕಡೂರು ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು 182 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಶಿವಮೊಗ್ಗದ ಜಿಲ್ಲೆಯ ಮಲೆನಾಡು ಭಾಗದಲ್ಲೂ ವ್ಯಾಪಕ ಮಳೆಯಾಗುತ್ತಿದ್ದು ತುಂಗಾ, ಭದ್ರಾ, ಶರಾವತಿ ನದಿಗಳ ಮಟ್ಟದಲ್ಲಿ ಏರಿಕೆ ಕಂಡಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಸುರಿದಿರುವ ಧಾರಾಕಾರ ಮಳೆಗೆ ನಿಟ್ಟೂರು ಬಳಿ ಹೇಮಾವತಿ ನಾಲೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಬಿರುಕು ಬಿಟ್ಟಿದೆ. ಇನ್ನುಳಿದಂತೆ ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಉತ್ತಮ ಮಳೆ ಸುರಿದಿದೆ.