ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಪ್ರಯುಕ್ತ ಹಮ್ಮಿಕೊಂಡಿದ್ದ ಸಂತ ಸಮ್ಮೇಳನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇತ್ರದಿಂದ ಕೈಗೆತ್ತಿಕೊಂಡಿರುವ ನೂರು ಕೆರೆಗಳ ಪುನಶ್ಚೇತನ ಯೋಜನೆಗೆ ಸಚಿವ ರೇವಣ್ಣ ಚಾಲನೆ ನೀಡಿದರು. ಡಾ.ಹೆಗ್ಗಡೆ ಅವರ ಸೂಚನೆ ಮೇರೆಗೆ, ಮಂಜುನಾಥ ದೇವರ ಆದೇಶದಂತೆ ದೇವಸ್ಥಾನ ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಧರ್ಮಸ್ಥಳದಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲು 2 ಕೋಟಿ ರು. ಅನುದಾನ ನೀಡಲಾಗಿದೆ. ಈ ಕೊಡುಗೆಯಲ್ಲಿ ನನಗೆ ತೃಪ್ತಿ ಇಲ್ಲ. ಶಿರಾಡಿ ಘಾಟ್‌ನಲ್ಲಿ 10 ಸಾವಿರ ಕೋಟಿ ರು.ಗಳ ಭೂಗತ ಹೆದ್ದಾರಿ ನಿರ್ಮಾಣ ಆಗಬೇಕಾಗಿದೆ. ಡಾ. ಹೆಗ್ಗಡೆ ಅವರು ಹೇಳಿದರೆ ಇನ್ನಷ್ಟು ಅನುದಾನ ನೀಡುವುದಾಗಿ ಸಚಿವ ರೇವಣ್ಣ ವಾಗ್ದಾನ ಮಾಡಿದರು.

ಶ್ರೀ 108 ವರ್ಧಮಾನ ಸಾಗರಜೀಮುನಿ ಮಹಾರಾಜ್, ಹೊಂಬುಜ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ದಾನಶಾಲೆಯ ಧ್ಯಾನಯೋಗಿ ಲಲಿತ ಕೀರ್ತಿ ಭಟ್ಟಾರಕ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಾಸ್ತಾವಿಕ ಮಾತನಾಡಿದರು. 

ಸಂತ ಸಮ್ಮೇಳನವನ್ನು ಉದ್ಘಾಟಿಸಬೇಕಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೊನೇಕ್ಷಣದಲ್ಲಿ ಗೈರಾಗಿದ್ದರು. ಹೀಗಾಗಿ ಅವರ ಪತ್ನಿ ಚೆನ್ನಮ್ಮ ಆಗಮಿಸಿ ಬೆಳ್ಳಿದೀಪವನ್ನು ಸಾಂಕೇತಿಕವಾಗಿ ಬೆಳಗಿಸಿದರು. ಅವರೊಂದಿಗೆ ಪುತ್ರ, ಸಚಿವ ರೇವಣ್ಣ ಹಾಗೂ ಪುತ್ರಿ ಶೈಲಜಾ ಕೂಡ ಆಗಮಿಸಿದ್ದರು.