Magadi Fire Tragedy ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ಕಸದ ರಾಶಿಗೆ ಹಚ್ಚಿದ ಬೆಂಕಿ ಸಮೀಪದ ನೀಲಗಿರಿ ತೋಪಿಗೆ ವ್ಯಾಪಿಸಿದೆ. ಅಗ್ನಿಶಾಮಕ ದಳ ಬರುವ ಮುನ್ನವೇ ಸ್ಥಳೀಯರು ಸಮಯಪ್ರಜ್ಞೆ ಮೆರೆದು ಬೆಂಕಿಯನ್ನು ನಂದಿಸಿ, ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ಬೆಂಗಳೂರು (ಜ.17): ಮಾಗಡಿ ರಸ್ತೆಯಿಂದ ಮಾಲಗಾಳಕ್ಕೆ ಹೋಗುವ ದಾರಿಯಲ್ಲಿರುವ ಕೊಟ್ಟಿಗೆಪಾಳ್ಯದಲ್ಲಿ ಇಂದು ಬೆಂಕಿ ಅವಘಡ ಸಂಭವಿಸಿದೆ. ರಸ್ತೆ ಬದಿಯಲ್ಲಿದ್ದ ಕಸದ ರಾಶಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಅದು ಕ್ಷಣಾರ್ಧದಲ್ಲಿ ಪಕ್ಕದಲ್ಲೇ ಇದ್ದ ನೀಲಗಿರಿ ತೋಪಿಗೆ ವ್ಯಾಪಿಸಿದೆ. ಒಣಗಿದ ಎಲೆಗಳು ಮತ್ತು ಮರಗಳಿದ್ದ ಕಾರಣ ಬೆಂಕಿ ಅತಿ ವೇಗವಾಗಿ ಹಬ್ಬಿತು.

ನಿಲ್ಲದ ಜ್ವಾಲೆ: ನೀಲಗಿರಿ ತೋಪಿಗೆ ಭಾರಿ ಹಾನಿ

ಗಾಳಿಯ ತೀವ್ರತೆಗೆ ಬೆಂಕಿಯ ಜ್ವಾಲೆ ವ್ಯಾಪಿಸಿತು. ಕಸದ ರಾಶಿಯಿಂದ ಶುರುವಾದ ಬೆಂಕಿ ಇಡೀ ನೀಲಗಿರಿ ತೋಪನ್ನು ಆವರಿಸಿತು. ಮರಗಳು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ಕಂಡು ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾದರು.

ಅಗ್ನಿಶಾಮಕ ದಳ ಬರುವ ಮೊದಲೇ ಸ್ಥಳೀಯರ ಕಾರ್ಯಾಚರಣೆ

ಸ್ಥಳೀಯ ನಿವಾಸಿಗಳು ಸಮಯಪ್ರಜ್ಞೆ ಮೆರೆದು ಬೆಂಕಿ ನಂದಿಸುವ ಕಾರ್ಯಕ್ಕೆ ಕೈಹಾಕಿದರು. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡುವ ಜೊತೆಜೊತೆಗೇ ಲಭ್ಯವಿದ್ದ ನೀರು ಮತ್ತು ಮರಳನ್ನು ಬಳಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಕೊಟ್ಟಿಗೆಪಾಳ್ಯದ ಜನರ ಸತತ ಪರಿಶ್ರಮದ ಫಲವಾಗಿ ಬೆಂಕಿ ನಿಯಂತ್ರಣಕ್ಕೆ ಬಂದು ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.