ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಸ್ಥಾನಕ್ಕೆ ಇದೀಗ ಡಾ.ಎಂ.ಸಲೀಂ ನೇಮಕಗೊಂಡಿದ್ದಾರೆ. ಅಲೋಕ್ ಮೋಹನ್ ಸೇವಾ ಅವಧಿ ಅಂತ್ಯಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇದೀಗ ಹೊಸ ಡಿಜಿ ನೇಮಕ ಮಾಡಿದೆ. 

ಬೆಂಗಳೂರು(ಮೇ.21) ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಅವರ ಸೇವಾವಧಿ ಮುಕ್ತಾಯಕ್ಕೆ ಐದು ದಿನಗಳಿರುವ ಹಿನ್ನೆಲೆಯಲ್ಲಿ ಅವರಿಂದ ತೆರವಾಗಲಿರುವ ಹುದ್ದೆಗೆ ಸಿಐಡಿ ಡಿಜಿಪಿ ಡಾ.ಎಂ.ಸಲೀಂ ಅವರು ನೇಮಕಗೊಂಡಿದ್ದಾರೆ. ಸಲೀಂ ಆಯ್ಕೆ ಕುರಿತು ಇಂದು DPAR ಅಧಿಕೃತ ಆದೇಶ ಹೊರಡಿಸಿದೆ. ಡೈರೆಕ್ಟರ್ ಜನರಲ್ ಇನ್ಸ್‌ಪೆಕ್ಟರ್ ಆಪ್ ಪೊಲೀಸ್ ಹುದ್ದೆಗೆ ಆಯ್ಕೆಯಾಗಿರುವ ಸಲೀಂ, 1993 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದಾರೆ. 

ಸೇವಾ ಹಿರಿತನ ಆಧಾರದ ಮೇರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್‌, ಸಿಐಡಿ ಡಿಜಿಪಿ ಸಲೀಂ, ಸೈಬರ್ ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಸೇರಿ ಎಂಟು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಿದ್ದಾರೆ. ಆದರೆ ಹಿರಿತನದ ಮಾನದಂಡದಲ್ಲಿ ಡಿಜಿಪಿ ಹುದ್ದೆಗೆ ಸಲೀಂ ಹಾಗೂ ಪ್ರಶಾಂತ್ ಹೆಸರು ಮುಂಚೂಣಿಯಲ್ಲಿತ್ತು. ಈ ಪೈಕಿ ಸಲೀಂ ಕುಮಾರ್ ಆಯ್ಕೆ ಅಂತಿಮಗೊಂಡಿದೆ.

ಏ.30 ರಂದು ಅಲೋಕ್‌ ಮೋಹನ್‌ ಅವರು ನಿವೃತ್ತಿಯಾಗಬೇಕಿತ್ತು. ಆದರೆ ಮೇ 21 ವರೆಗೆ ಡಿಜಿಪಿ ಅವರ ಸೇವಾವಧಿ ವಿಸ್ತರಿಸಿದ್ದ ಸರ್ಕಾರ, ಮುಂದಿನ ಡಿಜಿಪಿ ಹುದ್ದೆಗೆ ಸಂಭವನೀಯ ಅಧಿಕಾರಿಗಳ ಹೆಸರಿನ ಪಟ್ಟಿಯನ್ನು ಯುಪಿಎಸ್‌ಸಿಗೆ ಕಳುಹಿಸಿತ್ತು. ಹೀಗಾಗಿ ಎರಡು ವರ್ಷಗಳ ಆಡಳಿತ ನಡೆಸಿದ ಹಾಲಿ ಡಿಜಿಪಿ ಅಲೋಕ್ ಮೋಹನ್‌ ಅವರ ಸೇವಾವಧಿ ಪೂರ್ವ ನಿಗದಿಯಂತೆ ಮೇ.21 ರಂದು ಮುಕ್ತಾಯವಾಗಿದೆ.ಹೀಗಾಗಿ ಇಂದು ಸಂಜೆಯೇ ಹೊಸ ಡಿಜಿ ನೇಮಕ ಅಂತ್ಯಗೊಂಡಿದೆ.

ಎಂ ಸಲೀಮ್ ಪರಿಚಯ
ಎಂ ಸಲೀಮ್‌ಗೆ ಬೆಂಗಳೂರು ಪ್ರತಿ ವಲಯ, ವಾರ್ಡ್ ಚೆನ್ನಾಗಿ ಗೊತ್ತಿದೆ. ಕಾರಣ ಎಂಎ ಸಲೀಮ್ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಚಿಕ್ಕಬಾಣಾವರ ಎಂಎ ಸಲೀಮ್ ಊರು. ಪಟ್ಟಣದಂತಿದ್ದ ಚಿಕ್ಕಬಾಣಾವರ ಈಗ ಅತ್ಯಧಿಕ ವೇಗದಲ್ಲಿ ಬೆಳೆದು ಬಿಟ್ಟಿದೆ. ಜುನ್ 25, 1966ರಲ್ಲಿ ಹುಟ್ಟಿದ ಸಲೀಮ್, ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಟ್ರಾಫಿಕ್ ಮ್ಯಾನೇಜ್ಮೆಂಟ್‌ನಲ್ಲಿ ಪಿಹೆಚ್‌ಡಿ ಪಡೆದಿದ್ದಾರೆ. ಬೆಂಗಳೂರು ಟ್ರಾಫಿಕ್ ವಿಚಾರದಲ್ಲಿ ಮಹತ್ತರ ಬದಲಾವಣೆ ತಂದು ನಿಟ್ಟುಸಿರು ಬಿಡುವಂತೆ ಮಾಡಿದ ದಕ್ಷ ಅಧಿಕಾರಿ ಎಂದೇ ಗುರತಿಸಿಕೊಂಡಿದ್ದಾರೆ.