ಬೆಂಗಳೂರು(ನ.06): ಪಕ್ಷ ಹಾಗೂ ಮುಖ್ಯಮಂತ್ರಿಗಳಿಗೆ ಮುಜುಗರ ತರುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ರಾಜ್ಯಾಧ್ಯಕ್ಷರಿಗೆ ದೂರು ನೀಡುವುದಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ. 

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಿಸ್ತಿನ ಪಕ್ಷವಾಗಿರುವ ಬಿಜೆಪಿ ಯಾರೂ ಕೂಡಾ ಬಹಿರಂಗವಾಗಿ ಪಕ್ಷ ಅಥವಾ ನಾಯಕರ ವಿರುದ್ಧ ಹೇಳಿಕೆಯನ್ನು ನೀಡುವುದನ್ನು ಸಹಿಸುವುದಿಲ್ಲ. ಅದು ಬಸನಗೌಡ ಪಾಟೀಲ್‌ ಯತ್ನಾಳ ಇರಬಹುದು ಅಥವಾ ಬೇರೆ ಯಾರೇ ಇರಬಹುದು. ಎಲ್ಲರೂ ಶಿಸ್ತಿನ ಚೌಕಟ್ಟಿನಲ್ಲಿ ಇರಬೇಕಾಗುತ್ತದೆ. ಯತ್ನಾಳ ಅವರು ತಮ್ಮ ಹಿರಿತನಕ್ಕೆ ತಕ್ಕಂತೆ ವರ್ತಿಸಬೇಕು. ಬಾಯಿ ಚಪಲಕ್ಕಾಗಿ ಮಾತನಾಡಬಾರದು. ಇಲ್ಲದಿದ್ದರೆ ದುರಂತ ನಾಯಕರಾಗಬೇಕಾಗುತ್ತದೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. 

'ಯತ್ನಾಳ್‌ ತಿರುಕನ ಕನಸು ಕಾಣಬೇಡಿ, ಸವಾಲ್‌ ಹಾಕ್ತೇನೆ, ನೀವು ಸಿಎಂ ಆಗೋದಿಲ್ಲ'

ಪಕ್ಷದ ಯಾವುದೇ ಶಾಸಕರಲ್ಲಿ ಭಿನ್ನಾಭಿಪ್ರಾಯ ಇದ್ದರೆ ಸೂಕ್ತ ವೇದಿಕೆಯಲ್ಲಿ ಚರ್ಚಿಸಬೇಕು. ಕ್ಷೇತ್ರದ ಸಮಸ್ಯೆ ಇದ್ದರೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಬೇಕು. ಅಲ್ಲಿಯೂ ಸಮಸ್ಯೆ ಬಗೆಹರಿಯದಿದ್ದರೆ ಪಕ್ಷದ ಅಧ್ಯಕ್ಷರ ಜೊತೆ ಮಾತನಾಡಬೇಕು. ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ಮಾತನಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.