ಕರ್ನಾಟಕ ರಾಜ್ಯದ ಹೊಸ ಪೊಲೀಸ್ ಮಹಾನಿರ್ದೇಶಕರಾಗಿ ಎಂ. ಎ. ಸಲೀಂ ಅವರನ್ನು ನೇಮಕ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಹೊತ್ತಿರುವ ಅವರು ಹಲವು ಸವಾಲುಗಳನ್ನು ಎದುರಿಸಬೇಕಿದೆ.

ಬೆಂಗಳೂರು: ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಾದ ಪೊಲೀಸ್ ಮಹಾನಿರ್ದೇಶಕ (DGP) ಹುದ್ದೆಗೆ ಎಂ. ಎ. ಸಲೀಂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮಹತ್ತರ ಜವಾಬ್ದಾರಿ ಈಗಿನಿಂದ ಎಂ. ಎ. ಸಲೀಂ ಅವರ ಮೇಲಿದೆ. ರಾಜ್ಯ ಸರ್ಕಾರ ಶುಕ್ರವಾರ ಸಂಜೆ ಅಧಿಕೃತ ಪ್ರಕಟಣೆ ಹೊರಡಿಸಿ, ಎಂ. ಎ. ಸಲೀಂ ಅವರು ತಕ್ಷಣದಿಂದಲೇ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ಸ್ವೀಕರಿಸುವಂತೆ ಸೂಚಿಸಿದೆ. ಹೀಗಾಗಿ, ಅವರು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.

1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಇವರು ಡಿಜಿಪಿ ಅಲೋಕ್ ಮೋಹನ್ ಅವರು ನಿವೃತ್ತರಾದ ನಂತರ ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ ಕಳೆದ ಮೇ 21, 2025ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಅವರು 2026ರ ಜೂನ್‌ನಲ್ಲಿ ನಿವೃತ್ತರಾಗಲಿದ್ದು, ಸುಮಾರು ಒಂದು ವರ್ಷಗಳ ಕಾಲ ಅಧಿಕಾರ ನಿರ್ವಹಿಸಲಿದ್ದಾರೆ. ಡಾ. ಎಂ.ಎ. ಸಲೀಂ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿಯೂ ಕಾರ್ಯನಿರ್ವಹಿಸಿದ್ದಾರೆ. .ರಾಜ್ಯ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿ ಮತ್ತು ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್‌ಮೆಂಟ್ (CID) ನ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ.

ಎಂ. ಎ. ಸಲೀಂ ಅವರ ಈವರೆಗಿನ ಸೇವಾ ಪಥ

  • ಎಂ. ಎ. ಸಲೀಂ ಅವರು ಕರ್ನಾಟಕ ಕಾಡರ್‌ನ ಹಿರಿಯ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದು, ತಮ್ಮ ಸೇವಾ ಅವಧಿಯಲ್ಲಿ ಹಲವು ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದಾರೆ.
  • ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿಯೇ ಅವರು ತಂತ್ರಜ್ಞಾನ ಆಧಾರಿತ ನೂತನ ಪ್ರಯತ್ನಗಳನ್ನು ಪರಿಚಯಿಸಿ ಮೆಚ್ಚುಗೆ ಪಡೆದಿದ್ದರು.
  • ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಿ, ಸಾರ್ವಜನಿಕರಲ್ಲಿ ರಸ್ತೆ ಸಂಚಾರ ಸುರಕ್ಷತಾ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ನಡೆಸಿದ್ದರು.
  • ರೈಲ್ವೆ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುವ ಅವಧಿಯಲ್ಲಿಯೂ ಅವರು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸವಾಲು

ಹೊಸ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಎಂ. ಎ. ಸಲೀಂ ಅವರಿಗೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ದೊಡ್ಡ ಸವಾಲಾಗಿದೆ. ವಿಶೇಷವಾಗಿ:

  • ಸಂಘಟಿತ ಅಪರಾಧ
  • ಸೈಬರ್ ಅಪರಾಧ
  • ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ
  • ಟ್ರಾಫಿಕ್ ನಿರ್ವಹಣೆ

ಹೀಗೆ ಹಲವು ವಿಷಯಗಳಲ್ಲಿ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕಿದೆ.