ಬೆಂಗಳೂರು(ಫೆ.26): ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟವು ತೈಲ ಬೆಲೆ ಏರಿಕೆ ಖಂಡಿಸಿ ಶುಕ್ರವಾರ ರಾಜ್ಯಾದ್ಯಂತ ಲಾರಿ ಮುಷ್ಕರಕ್ಕೆ ಕರೆ ನೀಡಿದೆ. ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಉಳಿದಂತೆ ಶುಕ್ರವಾರ ಯಾವುದೇ ಲಾರಿ ಸಂಚಾರ ನಡೆಸುವುದಿಲ್ಲ. ಸುಮಾರು ಆರು ಲಕ್ಷ ಲಾರಿಗಳು ಶುಕ್ರವಾರ ತಟಸ್ಥವಾಗಲಿವೆ ಎಂದರು.

ತುಮಕೂರು ರಸ್ತೆಯ ನೈಸ್‌ ರಸ್ತೆ ಬಳಿ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಬಳಿಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ಸದ್ಯಕ್ಕೆ ಶುಕ್ರವಾರ ಒಂದು ದಿನ ಮಾತ್ರ ಮುಷ್ಕರ ಮಾಡಲಾಗುತ್ತಿದೆ. ಒಂದು ವೇಳೆ ಸರ್ಕಾರ ಈಗಲೂ ತೈಲ ಬೆಲೆ ಇಳಿಸದಿದ್ದರೆ, ಮಾ.5ರಂದು ಸಭೆ ನಡೆಸಿ ಮಾ.15ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತೈಲ ಬೆಲೆ ಏರಿಕೆ, ರಾಜ್ಯಾದ್ಯಂತ ಲಾರಿ ಸಂಚಾರ ಸ್ಥಗಿತ!

ವಿಮೆ ಹೆಚ್ಚಳದಿಂದ ಟ್ರಕ್ಕಿಂಗ್‌ ಉದ್ಯಮದಲ್ಲಿ ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇ-ವೇ ಬಿಲ್‌, ಹಸಿರು ತೆರಿಗೆ ಹೆಚ್ಚಳ, ಬಿಎಸ್‌6 ವಾಹನಗಳ ವೆಚ್ಚ, ವಾಹನಗಳ ಬಿಡಿಭಾಗಗಳ ದರ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳಾಗುತ್ತಿವೆ. ಈ ಯಾವ ಸಮಸ್ಯೆಗೂ ಸರ್ಕಾರ ಸ್ಪಂದಿಸುತ್ತಿಲ್ಲ. ಜತೆಗೆ, ತೈಲ ಬೆಲೆಯನ್ನು ವಿಪರೀತ ಹೆಚ್ಚಳ ಮಾಡುತ್ತಿದೆ. ಇದು ಸಹಿಸಲು ಸಾಧ್ಯವಿಲ್ಲದ ಮಟ್ಟಮಟ್ಟಿದೆ. ಹೀಗಾಗಿ ಹೋರಾಟದ ಹಾದಿ ಹಿಡಿದಿರುವುದಾಗಿ ಹೇಳಿದರು.
ಬಿಜೆಪಿ ಆಡಳಿತದಲ್ಲಿರುವ ಬೇರೆ ರಾಜ್ಯಗಳಲ್ಲಿ ಪೆಟ್ರೋಲ್‌, ಡೀಸೆಲ್‌ ತೆರಿಗೆ ಕಡಿಮೆ ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ಮಾಡಿಲ್ಲ. ರಾಜ್ಯ ಸರ್ಕಾರ ಕನಿಷ್ಠ ನಾಲ್ಕು ರು.ಗಳಷ್ಟಾದರೂ ಡೀಸೆಲ್‌ ಬೆಲೆ ಕಡಿಮೆ ಮಾಡಬೇಕು. ಟ್ರಕ್‌ಗಳಿಗೆ ಒಂದು ಕಿ.ಮೀ. 26 ರು. ಖರ್ಚಾಗುತ್ತಿದೆ. ಹೀಗಾದರೆ, ನಾವು ಹೇಗೆ ಉದ್ಯಮಗಳನ್ನು ನಡೆಸುವುದು ಎಂದು ಪ್ರಶ್ನಿಸಿದ ಅವರು, ಡೀಸೆಲ್‌-ಪೆಟ್ರೋಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಿ ಎಂದು ಒತ್ತಾಯಿಸಿದರು.

ಸ್ಕ್ರ್ಯಾಪ್‌ ನೀತಿಗೆ ವಿರೋಧ:

ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಸ್ಕ್ರ್ಯಾಪ್‌ ನೀತಿಗೆ ಸಂಪೂರ್ಣವಾಗಿ ನಮ್ಮ ವಿರೋಧವಿದೆ. ನಮ್ಮ ವಾಹನಗಳನ್ನು ಸ್ಕ್ರ್ಯಾಪ್‌ಗೆ ಕೊಡುವುದಿಲ್ಲ. ಕೇಂದ್ರ ಸರ್ಕಾರ ಟಾಟಾ ಮತ್ತು ಅಶೋಕ್‌ ಲೈಲ್ಯಾಂಡ್‌ ಕಂಪನಿಗಳ ಜೊತೆ ಸೇರಿಕೊಂಡು ಇಂತಹ ನೀತಿಗಳನ್ನು ತರಲು ಮುಂದಾಗಿದೆ ಎಂದು ಆರೋಪಿಸಿದರು.