ಪಡಿತರ ಅಂಗಡಿಗಳ ಮುಂದೆ ಉದ್ದುದ್ದ ಕ್ಯೂ: ಇಡೀ ದಿನ ಕಾದರೂ ಸಿಗುತ್ತಿಲ್ಲ ರೇಷನ್!
ಡೌನ್ ಸಮಸ್ಯೆಯಿಂದ ದಿನಕ್ಕೆ 50 ಮಂದಿಗೂ ಪಡಿತರ ಕೊಡಲು ಸಾಧ್ಯವಾಗುತ್ತಿಲ್ಲ. ಮಳೆಯಲ್ಲಿ ಬಂದು ನಿಲ್ಲುವ ಕೂಲಿಕಾರ್ಮಿಕರು, ರೈತರಿಗೆ ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಊಟ, ತಿಂಡಿ ವ್ಯವಸ್ಥೆ ಮಾಡಿದರೆ ಒಳ್ಳೆಯದು ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಆಗ್ರಹಿಸಿದ್ದಾರೆ.
ಸಂಪತ್ ತರೀಕೆರೆ
ಬೆಂಗಳೂರು(ಅ.25): ಪಡಿತರ ವಿತರಣೆಯಲ್ಲಿ ಸರ್ವರ್ ಡೌನ್‌ನಿಂದ ಆಗುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಹಾರ ಇಲಾಖೆ ಹೊಸದಾಗಿ ಅಳವಡಿಸಿರುವ ತಂತ್ರಾಂಶ ಪಡಿತರದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ನ್ಯಾಯಬೆಲೆ ಅಂಗಡಿಗಳ ಮುಂದೆ ದಿನವಿಡೀ ಕಾಯುತ್ತಾ ನಿಲ್ಲುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪ್ರತಿ ತಿಂಗಳು 10-12ನೇ ತಾರೀಖಿನೊಳಗೆ ಪಡ ತರ ಆಹಾರ ಧಾನ್ಯ ಹಂಚಿಕೆ ಪೂರ್ಣಗೊಳ್ಳುತ್ತಿತ್ತು. ಈ ಬಾರಿ ತಂತ್ರಾಂಶ ಬದಲಾವಣೆ ನೆಪದಿಂದ ಈ ವರೆಗೂ ಪಡಿತರ ಹಂಚಿಕೆ ಮಾಡಿಲ್ಲ (ಬೆಂಗಳೂರು ಹೊರತುಪಡಿಸಿ). ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ ಸರ್ವರ್ ಡೌನ್ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಿದ್ದು, ಅ.17ರಿಂದ ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಹಂಚಿಕೆ ಕುಂಟುತ್ತಾ ಸಾಗಿದೆ.
ಆದರೆ, ಮೈಸೂರು ವಿಭಾಗ ಮತ್ತು ಕಲಬುರಗಿ ವಿಭಾಗದ ನ್ಯಾಯಬೆಲೆ ಅಂಗಡಿಗಳ ಪರಿಸ್ಥಿತಿ ಹೇಳತೀರದಾಗಿದೆ. ದಾವಣಗೆರೆ, ಧಾರವಾಡ, ಬಾಗಲಕೋಟೆ, ಹಾವೇರಿ, ಶಿವಮೊಗ್ಗ, ಹುಬ್ಬಳ್ಳಿ, ಬೀದರ್, ಬಳ್ಳಾರಿ, ಚಾಮರಾಜನಗರ ಸೇರಿದಂತೆ ವಿವಿಧೆಡೆ ಪ್ರತಿ ನ್ಯಾಯಬೆಲೆ ಅಂಗಡಿಗಳ ಮುಂದೆ ದಿನಕ್ಕೆ 200ರಿಂದ 300 ಮಂದಿ ಆಹಾರ ಧಾನ್ಯಕ್ಕಾಗಿ ಕಾಯುತ್ತಾ ನಿಲ್ಲುವಂತಾಗಿದೆ. ಡೌನ್ ಸಮಸ್ಯೆಯಿಂದ ದಿನಕ್ಕೆ 50 ಮಂದಿಗೂ ಪಡಿತರ ಕೊಡಲು ಸಾಧ್ಯವಾಗುತ್ತಿಲ್ಲ. ಮಳೆಯಲ್ಲಿ ಬಂದು ನಿಲ್ಲುವ ಕೂಲಿಕಾರ್ಮಿಕರು, ರೈತರಿಗೆ ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಊಟ, ತಿಂಡಿ ವ್ಯವಸ್ಥೆ ಮಾಡಿದರೆ ಒಳ್ಳೆಯದು ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಆಗ್ರಹಿಸಿದ್ದಾರೆ.
ಅನ್ನಭಾಗ್ಯದ ಇನ್ನೂ 1700 ಕ್ವಿಂ. ಅಕ್ಕಿ ಎಲ್ಹೋಯ್ತು?: ಫೋನ್ ಪೇ ಮೂಲಕ ಅಧಿಕಾರಿಗಳಿಗೆ ಲಂಚ
ಹೊಸ ತಂತ್ರಾಂಶ ಸಮಸ್ಯೆ:
ಆಹಾರ ಇಲಾಖೆಯ ತಂತ್ರಾಂಶವನ್ನು ಸುಮಾರು 30 ಇಲಾಖೆಗಳು ಬಳಸಿಕೊಳ್ಳುತ್ತಿವೆ. ಇದರಿಂದ ಪಡಿತರ ವಿತರಣೆಯಲ್ಲಿ ಸರ್ವರ್ ಡೌನ್ ಸಮಸ್ಯೆಯಿಂದ ಪಡಿತರ ಆಹಾರ ಧಾನ್ಯ ಹಂಚಿಕೆಗೆ ತೊಡಕು ಉಂಟಾಗುತ್ತಿತ್ತು. ಈ ಸಮಸ್ಯೆ ಬಗೆಹರಿಸುವ ಸಂಬಂಧ ಎನ್‌ಐಸಿ ತಂತ್ರಾಂಶದಿಂದ ಕರ್ನಾಟಕರಾಜ್ಯ ತಂತ್ರಾಂಶಕ್ಕೆ ಆಹಾರ ಇಲಾಖೆಯನ್ನು ಬದಲಾಯಿಸುವ ಕಾರ್ಯವನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಆರಂಭಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅ. 17ರಿಂದ ತಿಂಗಳ ಪಡಿತರ ಹಂಚಿಕೆ ಆರಂಭಿಸುವಂತೆನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಚನೆಯನ್ನು ಆಹಾರ ಇಲಾಖೆ ನೀಡಿತ್ತು. ಆದರೆ, ಈವರೆಗೂ ನೂತನತಂತ್ರಾಂಶ ಅಳವಡಿಕೆ ಪೂರ್ಣವಾಗಿಲ್ಲ ಮತ್ತೆ ಸರ್ವರ್ ಡೌನ್ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದ್ದು, ಪಡಿತರದಾರರು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹೊಸ ಲಾಗಿನ್ ಸಮಸ್ಯೆ:
ಈಗಿರುವ ಹೊಸ ಲಾಗಿನ್‌ನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ವಿನಾಯಿತಿ ಇರುವ ಪಡಿತರ ಚೀಟಿಗಳಿಗೆ ಆಹಾರಧಾನ್ಯ ವಿತರಣೆ ಇಲ್ಲ, ಪಡಿತರ ಚೀಟಿ ಇರುವ ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಜಿಲ್ಲೆಯ ಕಾರ್ಡುಗಳಿಗೆ ಪಡಿತರ ವಿತರಣೆ ಸಾಧ್ಯವಾಗುತ್ತಿಲ್ಲ. ಆಧಾರ್ ಲಿಂಕ್ ಹೊಂದಿದ ಫೋನ್ ನಂಬರಿಗೆ ಒಟಿಪಿ ಮುಖಾಂತರ ವಿತರಣೆ ನಿಲ್ಲಿಸಲಾಗಿದೆ. ಒಂದು ಗಣಕ ಯಂತ್ರಕ್ಕೆ ಒಂದೇ ಲಾಗಿನ್ ನೀಡಲಾಗಿದೆ. ಪ್ರಸ್ತುತ ಓಟಿಪಿ ಮೂಲಕ ಪಡಿತರ ವಿತರಣೆ ನಿಲ್ಲಿಸಲಾಗಿದೆ. ಇದರಿಂದ ಅಂಗವಿಕಲರು, ಅನಾರೋಗ್ಯ ಪೀಡಿತರು, ವೃದ್ದರು ಎಲ್ಲರೂ ಕಡ್ಡಾಯವಾಗಿ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಇದರ ನಡುವೆ ಸರ್ವರ್ ಡೌನ್ ಸಮಸ್ಯೆಯಿಂದ ಬಯೋಮೆಟ್ರಿಕ್ ನೀಡಲು ಕೆಲಸ ಕಾರ್ಯ ಬಿಟ್ಟು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಅನ್ನಭಾಗ್ಯ: ಹಣದ ಬದಲು ದಿನಸಿ ಕಿಟ್?; ಹೊಸ ಯೋಜನೆಗೆ ಸರ್ಕಾರ ಚಿಂತನೆ
ತಾಂತ್ರಿಕ ತಂಡ ಕೆಲಸ ಹೊಸ ತಂತ್ರಾಂಶ ಅಳವಡಿಕೆ ಕಾರ್ಯ ಆಗಿದೆ. ಆರಂಭದಲ್ಲಿ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಇತ್ತು. ಈಗ ಎಲ್ಲವೂ ನಿವಾರಣೆಯಾಗಿದೆ. ಒಂದೇ ಬಾರಿಗೆ 15 ಲಕ್ಷ ಕಾಡ್ ್ರಗಳಿಗೆ ಪಡಿತರ ಹಂಚಿಕೆ ಮಾಡಬಹುದಾಗಿದ್ದು, ದಿನದ 24 ಗಂಟೆಯೂ ತಾಂತ್ರಿಕ ತಂಡ ಅದಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಹೊಸ ತಂತ್ರಾಂಶ ಅಳವಡಿಕೆ ವಿಳಂಬವಾದಲ್ಲಿ ಚೆಕ್‌ಲಿಸ್ಟ್ ಮೂಲಕ ಆಹಾರಧಾನ್ಯ ವಿತರಣೆ ಮಾಡಲು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಅವಕಾಶ ನೀಡಬೇಕು. ವೃದ್ಧರಿಗೆ, ಅನಾರೋಗ್ಯ ಪೀಡಿತರಿಗೆ ಅನುಕೂಲವಾಗುವಂತೆ ಓಟಿಪಿ ಮೂಲಕ ಪಡಿತರ ವಿತರಣೆ ಮಾಡುವ ವ್ಯವಸ್ಥೆ ಪುನರಾರಂಭಿಸಬೇಕು. ಸದ್ಯ ಸರ್ವರ್ ಸಮಸ್ಯೆ ನಿವಾರಿಸಬೇಕು ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಅಧ್ಯಕ್ಷ ಟಿ.ಕೃಷ್ಣಪ್ಪ ಹೇಳಿದ್ದಾರೆ.
ಸಮಸ್ಯೆ ಏನು?
• ಆಹಾರ ಇಲಾಖೆಯ ಸಾಫ್ಟ್‌ವೇರ್ ಅನ್ನು 30 ಇಲಾಖೆಗಳು ಬಳಸುತ್ತಿರುವುದರಿಂದ ಸರ್ವರ್ ಡೌನ್ ಸಮಸ್ಯೆ ವ್ಯಾಪಕವಾಗಿ ಇತ್ತು
• ಇದಕ್ಕಾಗಿ ಆಹಾರ ಇಲಾಖೆಗಾಗಿ ಪ್ರತ್ಯೇಕ ತಂತ್ರಾಂಶ ಅಳವಡಿಸಲು ಆರಂಭಿಸಲಾಯಿತು
• ಸೆಪ್ಟೆಂಬರ್ ಅಂತ್ಯದಲ್ಲಿ ಕೆಲಸ ಆರಂಭವಾ ಗಿತ್ತು. ಆದರೆ ಅಕ್ಟೋಬರ್ ಬಂದರೂ ಅದಿನ್ನೂ ಪೂರ್ಣವಾಗದ್ದು ಪ್ರಮುಖ ಸಮಸ್ಯೆ
• ಇದರ ನಡುವೆ ಮೊದಲೇ ಇದ್ದ ಸರ್ವರ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಿ ಪಡಿತರ ಚೀಟಿದಾರರಿಗೆ ಭಾರಿ ತೊಂದರೆಯಾಗುತ್ತಿದೆ
. ಪಡಿತರ ಅಂಗಡಿಗಳ ಮುಂದೆ ರೇಷನ್ ನಿರೀಕ್ಷೆಯಲ್ಲಿ ನೂರಾರು ಮಂದಿ ಪ್ರತಿ ನಿತ್ಯ ಉದ್ದಕ್ಯೂ ನಿಲ್ಲುವಂತಹ ದುಸ್ಥಿತಿ