ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿವೆ. ಇನ್ನು ಕಾಂಗ್ರೆಸ್ ಬಿಟ್ಟುಕೊಡುವ 8 ಸೀಟುಗಳಿಗೆ ಜೆಡಿಎಸ್ ತೃಪ್ತಿಪಟ್ಟುಕೊಳ್ಳಲಿದೆ ಎನ್ನಲಾಗುತ್ತಿದೆ. 

ಬೆಂಗಳೂರು :  ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾನ ಹೊಂದಾಣಿಕೆ ಕುರಿತ ಪ್ರಕ್ರಿಯೆ ಆರಂಭವಾಗುತ್ತಿರುವ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಜೆಡಿಎಸ್‌, ಈ ವಿಷಯದಲ್ಲಿ ಮಿತ್ರ ಪಕ್ಷ ಕಾಂಗ್ರೆಸ್‌ ಜೊತೆಗೆ ಹೆಚ್ಚು ಜಟಾಪಟಿಗೆ ಇಳಿಯುವುದು ಬೇಡ ಎಂಬ ನಿಲುವಿಗೆ ಬರತೊಡಗಿದೆ.

ಜೊತೆಗೆ ಕಾಂಗ್ರೆಸ್‌ನ ಹಾಲಿ ಸಂಸದರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಒತ್ತಡ ಹೇರುವುದು ಬೇಡ ಎಂಬ ಅಭಿಪ್ರಾಯವನ್ನೂ ಜೆಡಿಎಸ್‌ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡರು ತಮ್ಮ ಆಪ್ತರ ಬಳಿ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಸುಮಾರು 7 ಕ್ಷೇತ್ರಗಳನ್ನು ಬಿಟ್ಟುಕೊಡಲು ರಾಜ್ಯ ಕಾಂಗ್ರೆಸ್‌ ನಾಯಕರು ಒಲವು ತೋರಿದ್ದಾರೆ. ಜೆಡಿಎಸ್‌ ಬಹಿರಂಗವಾಗಿ 10ರಿಂದ 12 ಸ್ಥಾನಗಳನ್ನು ನೀಡಬೇಕು ಎಂಬ ಮಾತನ್ನು ಹೇಳುತ್ತಿದ್ದರೂ ಮಾತುಕತೆ ವೇಳೆ 10 ಸ್ಥಾನಗಳಿಗೆ ಬೇಡಿಕೆ ಇಡಲಿದೆ. ಚರ್ಚೆ ನಂತರ ಇದು 8ಕ್ಕೆ ಬಂದು ನಿಂತರೂ ಒಪ್ಪಿಕೊಳ್ಳುವ ಮನಸ್ಥಿತಿ ಜೆಡಿಎಸ್‌ ನಾಯಕರಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಜೆಡಿಎಸ್‌ಗೆ ಕೇವಲ ಏಳು ಸ್ಥಾನಗಳನ್ನು ಬಿಟ್ಟುಕೊಡುವ ಇಂಗಿತ ವ್ಯಕ್ತವಾಗಿದೆ. ಮೇಲಾಗಿ ಕಾಂಗ್ರೆಸ್‌ ಸಂಸದರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು ಎಂಬ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿತ್ತು.

ಇದರ ಬೆನ್ನಲ್ಲೇ ದೇವೇಗೌಡರು ಹಲವು ಕ್ಷೇತ್ರಗಳಲ್ಲಿ ಜೆಡಿಎಸ್‌ ಸಂಘಟನೆ ಬಲವಾಗಿದ್ದರೂ ಆ ಕ್ಷೇತ್ರಗಳು ಸದ್ಯಕ್ಕೆ ಕಾಂಗ್ರೆಸ್‌ ವಶದಲ್ಲಿವೆ. ಅವುಗಳನ್ನು ಬಿಟ್ಟುಕೊಡುವಂತೆ ಕೇಳುವುದರಿಂದ ಅನಗತ್ಯವಾಗಿ ಮಿತ್ರ ಪಕ್ಷಗಳ ನಡುವೆ ಗೊಂದಲ, ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಹೆಚ್ಚಿರುವುದರಿಂದ ಕೇಳುವುದೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಉತ್ತರ, ಶಿವಮೊಗ್ಗ, ಧಾರವಾಡ, ವಿಜಯಪುರ, ಬೆಳಗಾವಿ, ಉಡುಪಿ-ಚಿಕ್ಕಮಗಳೂರು ಹಾಗೂ ಬೀದರ್‌ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಜೆಡಿಎಸ್‌ ಮಿತ್ರ ಪಕ್ಷ ಕಾಂಗ್ರೆಸ್ಸಿಗೆ ಬೇಡಿಕೆ ಇಡುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ನಡುವೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಸ್ಥಾನ ಹೊಂದಾಣಿಕೆ ಕುರಿತು ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಅಂದರೆ, ಸೋಮವಾರದ ಸಭೆಯಲ್ಲಿ ನಡೆದ ಚರ್ಚೆ ಮತ್ತು ನಿರ್ಣಯಗಳನ್ನು ಗೌಡರಿಗೆ ತಿಳಿಸಲಿದ್ದಾರೆ.

ಇದು ಪ್ರಾಥಮಿಕ ಹಂತದ ಮಾತುಕತೆ ಹೊರತು ಅಂತಿಮವಲ್ಲ. ಮಾತುಕತೆ, ನಿರ್ಧಾರ ಏನೇ ಇದ್ದರೂ ದೆಹಲಿ ಮಟ್ಟದಲ್ಲಿ ರಾಹುಲ್‌ ಗಾಂಧಿ ಅವರ ಜೊತೆ ನಡೆದ ನಂತರವೇ ಅಂತಿಮಗೊಳ್ಳಲಿದೆ. ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್‌ ಗುಂಡೂರಾವ್‌ ಅವರು ಸಾಂಕೇತಿಕವಾಗಿ ಮಾತುಕತೆ ನಡೆಸಬಹುದು. ತೀರ್ಮಾನ ಹೊರಬೀಳುವುದು ರಾಹುಲ್‌ ಜೊತೆಗೆ ಮಾತುಕತೆ ನಂತರ ಮಾತ್ರ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಜೆಡಿಎಸ್‌ ಬಯಸಿರುವ 10 ಕ್ಷೇತ್ರಗಳು

ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಉತ್ತರ, ಶಿವಮೊಗ್ಗ, ಧಾರವಾಡ, ವಿಜಯಪುರ, ಬೆಳಗಾವಿ, ಉಡುಪಿ-ಚಿಕ್ಕಮಗಳೂರು ಹಾಗೂ ಬೀದರ್‌