ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳ ಪಕ್ಷದ ಐವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್‌ ಮಥಾಯಿ ಈಪನ್‌ ವೆಟ್ಟತ್‌ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1996ರಲ್ಲಿ ಚೌಧರಿ ಅಜಿತ್‌ ಸಿಂಗ್‌ ಅವರು ರಾಷ್ಟ್ರೀಯ ಲೋಕದಳ ಪಕ್ಷ ಸ್ಥಾಪಿಸಿದರು. ಈ ಪಕ್ಷ ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿದ್ದು, ಕಳೆದ ಮೂರು ತಿಂಗಳ ಹಿಂದೆ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಈಗಾಗಲೇ ಪಕ್ಷದ ಸಂಘಟನೆಯನ್ನು ರಾಜ್ಯಾದ್ಯಂತ ಬಲವಾಗಿ ಸಂಘಟಿಸಲಾಗುತ್ತಿದೆ ಎಂದರು.

ಕರ್ನಾಟಕ ಪ್ರದೇಶ ರಾಷ್ಟ್ರೀಯ ಲೋಕದಳ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಡಿ.ರಮೇಶ್‌ ಗುರುದೇವ್‌, ಪ್ರಧಾನ ಕಾರ್ಯದರ್ಶಿಗಳಾಗಿ ಎಸ್‌.ರವಿಚಂದ್ರನ್‌, ಚಂದ್ರಶೇಖರ್‌, ರಾಜ್ಯ ವಕ್ತಾರರಾಗಿ ವಿಶ್ವನಾಥ್‌, ಸಂಘಟನಾ ಕಾರ್ಯದರ್ಶಿಗಳಾಗಿ ನಿರಂಜನ್‌ ಕುಮಾರ್‌, ಡೇವಿಡಕ್‌, ಕಾರ್ಯದರ್ಶಿಗಳಾಗಿ ಉದಯಕುಮಾರ್‌, ಲಕ್ಷ್ಮೇಕಾಂತ್‌, ಜಗದೀಶ್‌ ಅವರನ್ನು ನೇಮಿಸಲಾಗಿದೆ. ಬೆಂಗಳೂರು ಮತ್ತು ಗ್ರಾಮಾಂತರ, ರಾಮನಗರ, ಮೈಸೂರು, ಕೊಡಗು, ಚಿತ್ರದುರ್ಗ, ರಾಯಚೂರು, ಚಿಕ್ಕಬಳ್ಳಪುರ, ಕೊಪ್ಪಳ, ಯಾದಗಿರಿ, ಹಾಸನ, ಬಿಜಾಪುರಕ್ಕೆ ಜಿಲ್ಲಾಧ್ಯಕ್ಷರು ಹಾಗೂ ನೆಲಮಂಗಲ, ಬೆಂಗಳೂರು ಉತ್ತರಕ್ಕೆ ತಾಲೂಕು ಅಧ್ಯಕ್ಷರನ್ನು ನೇಮಿಸಿ ಪಕ್ಷ ಸಂಘಟಿಸಲಾಗುತ್ತಿದೆ ಎಂದರು.