ಕೊಡಗು: ಚುನಾವಣಾ ಪ್ರಚಾರ ಅಖಾಡಕ್ಕಿಳಿದ ಯದುವೀರ್ ಒಡೆಯರ್; ಜನಸಾಮಾನ್ಯರಂತೆ ಸರದಿ ನಿಂತು ಊಟ ಮಾಡಿದ ರಾಜ ವಂಶಸ್ಥ!
ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ನನ್ನು ಕಣಕ್ಕೆ ಇಳಿಸಿದೆ. ಟಿಕೆಟ್ ಘೋಷಣೆಯಾದ ಮಾರನೇ ದಿನವೇ ಮಡಿಕೇರಿಯಲ್ಲಿ ನಡೆದ ಬಿಜೆಪಿ ಕೊಡಗು ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ಆರಂಭಿಸಿದರು.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.15): ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ನನ್ನು ಕಣಕ್ಕೆ ಇಳಿಸಿದೆ. ಟಿಕೆಟ್ ಘೋಷಣೆಯಾದ ಮಾರನೇ ದಿನವೇ ಮಡಿಕೇರಿಯಲ್ಲಿ ನಡೆದ ಬಿಜೆಪಿ ಕೊಡಗು ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ಆರಂಭಿಸಿದರು.
ಸಮಾವೇಶಕ್ಕೆ ಆಗಮಿಸಿದ ಯದುವೀರ್ ಒಡೆಯರ್(Yaduveer krishnadatta wadiyar) ಅವರನ್ನು ಬಿಜೆಪಿ ಅದ್ಧೂರಿಯಾಗಿಯೇ ಸ್ವಾಗತಿಸಿತು. ಕೊಡಗು ಜಿಲ್ಲೆಗೆ ಯದುವೀರ್ ಆಗಮಿಸುತ್ತಿದ್ದಂತೆ ಕೊಡಗು ಮೈಸೂರು ಜಿಲ್ಲೆಗಳ ಗಡಿಭಾಗವಾದ ಕುಶಾಲನಗರದಲ್ಲಿ ಕಾವೇರಿ ನದಿ ದಂಡೆಯ ಮೇಲೆ ಇರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಬಳಿಕ ಕಾರ್ಯಕರ್ತರು ಹೂವಿನ ಮಾಲೆ ಹಾಕಿ ಸ್ವಾಗತಿಸಿದರು. ಇನ್ನು ಯದುವೀರ್ ಒಡೆಯರ್ ಅವರು ಮಡಿಕೇರಿಗೆ ಆಗಮಿಸುತ್ತಿದ್ದಂತೆ ಪೂರ್ಣಕುಂಭ ಕಳಶ ಹಿಡಿದು ಸ್ವಾಗತಿಸಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕೊಡಗಿನ ಸಾಂಪ್ರದಾಯಿಕ ಒಡಿಕತ್ತಿಯನ್ನು ಕೊಟ್ಟು ಸನ್ಮಾನಿಸಿದರು.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಬಿಜೆಪಿಯ ಮುಖಂಡ ರಾಮದಾಸ್, ದೇಶಕ್ಕೆ ಎಚ್ಎಎಲ್ ಅನ್ನು ಹಾಗೂ ಎಸ್ ಬಿಐ ಅನ್ನು ಪರಿಚಯಿಸಿದ್ದು ಮೈಸೂರಿನ ರಾಜವಂಶಸ್ಥರು. ನೂರು ವರ್ಷಗಳ ಹಿಂದೆಯೇ ಕಾವೇರಿ ಹರಿಯುವ ಈ ಪ್ರದೇಶದ ವ್ಯಾಪ್ತಿಯ ಕಾಫಿ ಬೆಳೆಗಾರರಿಗೆ ಅನುಕೂಲವಾಗಲೆಂದು ಕಾಫಿ ಸಂಸ್ಕರಣ ಘಟಕವನ್ನು ಸ್ಥಾಪಿಸಿದವರು ರಾಜವಂಶಸ್ಥರು. ಮೈಸೂರು ರಾಜವಂಶಸ್ಥರಿಗೂ ಕೊಡಗು ಅವಿನಾಭಾವ ಸಂಬಂಧವಿದೆ. ಅವರ ಸೇವೆ ಮುಂದುವರಿಯಬೇಕು ಎನ್ನುವ ದೃಷ್ಟಿಯಿಂದ ರಾಜವಂಶಸ್ಥರ ಕುಡಿ ಯದುವೀರ್ ಒಡೆಯರ್ ಅವರನ್ನು ಪ್ರಧಾನಿ ಮೋದಿಯವರು ಇಲ್ಲಿನ ಅಭ್ಯರ್ಥಿಯನ್ನಾಗಿ ನೀಡಿದ್ದಾರೆ ಎಂದು ಹೇಳಿ ಕೊಡಗು ಹಾಗೂ ಮೈಸೂರು ರಾಜವಂಶಸ್ಥರಿಗೂ ಇರುವ ಸಂಬಂಧದ ಬಗ್ಗೆ ಹೇಳುವ ಪ್ರಯತ್ನ ಮಾಡಿದರು.
Yaduveer Wadiyar: ಯದುವೀರ್ ಸ್ಪರ್ಧೆ..ಅಸಲಿ ಲೆಕ್ಕಾಚಾರ ಏನು? ಒಡೆಯರ್ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುತ್ತಾ?
ಬಳಿಕ ಮಾತನಾಡಿದ ಯದುವೀರ್ ಒಡೆಯರ್ ಹೊಸ ಅಭ್ಯರ್ಥಿ ಬಂದಾಗ ವ್ಯಕ್ತಿಯ ಸಾಮರ್ಥ್ಯದ ಬಗ್ಗೆ ಅನುಮಾನ ಇರುತ್ತದೆ. ಕಾವೇರಿ ತಾಯಿ ಉದ್ಭವವಾಗುವ ಈ ಸ್ಥಳಕ್ಕೆ ಬಂದು ಸೇವೆ ಸಲ್ಲಿಸುವ ಸೌಭಾಗ್ಯ ಬಂದಿದೆ. ಕೊಡಗಿನ ಪರಂಪರೆ ಸಂಸ್ಕೃತಿ ಉಳಿಯಬೇಕಾಗಿದೆ. ಇಲ್ಲಿನ ವನ್ಯಜೀವಿ ಸಂಸತ್ತು ಉಳಿಯಬೇಕಾಗಿದೆ. ಹಿಂದಿನಿಂದಲೂ ಕೊಡಗಿನೊಂದಿಗೆ ನನಗೆ ಒಳ್ಳೆಯ ಸಂಬಂಧವಿದೆ. ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬಂದಿದ್ದೇನೆ. ಮೊದಲ ಭೇಟಿಯಲ್ಲೇ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಕೊಡಗಿನೊಂದಿಗೆ ಒಳ್ಳೆಯ ಭಾವನಾತ್ಮಕ ಸಂಬಂಧವಿದೆ. ನಿನ್ನೆಯಿಂದಲೇ ಚುನಾವಣಾ ಪ್ರಚಾರ ಕಾರ್ಯ ಶುರು ಮಾಡಿದ್ದೇನೆ. ಕೊಡಗಿನಲ್ಲಿ ಇಂದು ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ಕಳೆದ ಒಂಭತ್ತು ವರ್ಷಗಳಲ್ಲಿ ರಾಜಕೀಯಕ್ಕೆ ಬರಬೇಕು ಎಂದು ಕೊಂಡಿದ್ದೆ. ಆದರೆ ಕಳೆದ ಒಂದು ವರ್ಷದಿಂದ ನಾನು ರಾಜಕೀಯಕ್ಕೆ ಬರುವ ಮನಸ್ಸು ಮಾಡಿದ್ದೆ. ಸಮಾಜದಲ್ಲಿ ಬದಲಾವಣೆ ತರಬೇಕೆಂದರೆ ಅದು ರಾಜಕೀಯದಿಂದ, ಮತ್ತು ಆ ಮೂಲಕ ನೀತಿ ನಿಯಮಗಳನ್ನು ಜಾರಿ ಮಾಡುವುದರಿಂದ ಅದು ಸಾಧ್ಯ. ಹೀಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ಯದುವೀರ್ ಒಡೆಯರ್ ಹೇಳಿದರು.
ಬಳಿಕ ಮಾತನಾಡಿದ ಮಡಿಕೇರಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದೆ. ನನಗೆ ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ, ನಿಮಗೆ ಒಂದು ಲಕ್ಷಕ್ಕಿಂತ ಹೆಚ್ಚು ಮತಗಳ ಕೊಟ್ಟು ಗೆಲ್ಲಿಸುತ್ತೇವೆ. ಆದರೆ ಕೊಡಗಿನ ಜನತೆಯನ್ನು ನೀವು ಗೌರವದಿಂದ ಕಾಣಬೇಕು. ಅದು ಬಿಟ್ಟು ನಿಮ್ಮ ಒಂದು ಚುಕ್ಕಾಸು ಕೂಡ ನಮಗೆ ಬೇಡ ಎಂದು ಅಪ್ಪಚ್ಚು ರಂಜನ್, ವೇದಿಕೆಯಲ್ಲಿದ್ದ ಯದುವೀರ್ ಒಡೆಯರ್ ಗೆ ಕೈಮುಗಿದು ಮನವಿ ಮಾಡಿದರು.
ರಾಜಕೀಯಕ್ಕೆ ಬಂದ್ರೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಬೇಕು ಎಂಬುದು ನನ್ನ ಆಸೆ ಇತ್ತು: ಯದುವೀರ್ ಒಡೆಯರ್
ಕೊಡಗಿನ ಜನತೆಯನ್ನು ಗೌರವದಿಂದ ಕಾಣಬೇಕು, ನಮ್ಮ ಕಾರ್ಯಕರ್ತರನ್ನು ಸರಿಯಾಗಿ ಮಾತನಾಡಿಸಬೇಕು. ಕೊಡಗು ಜಿಲ್ಲೆಗೆ ನಿಮ್ಮಿಂದ ಕೊಡಬಹುದಾದ ಸವಲತ್ತು ಕೊಡಬೇಕು, ನಮ್ಮ ಕೊಡಗಿನ ಜನತೆ ಬಂದಾಗ ಸರಿಯಾಗಿ ಮಾತನಾಡಿಸದಿದ್ದರೆ ಬೇಸರವಾಗುತ್ತದೆ. ಹಾಗಾಗಿ ನಮ್ಮ ಕೊಡಗಿನ ಜನತೆಯನ್ನು ಗೌರವದಿಂದ ಕಾಣಿ ಎಂದು ಅಪ್ಪಚ್ಚು ರಂಜನ್ ಕೈಮುಗಿದರು. ಆ ಮೂಲಕ ತಮಗೆ ಟಿಕೆಟ್ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಯದುವೀರ್ ರಾಜವಂಶಸ್ಥರು, ಅವರು ಸಾಮಾನ್ಯ ಜನರ ಕೈಗೆ ಸಿಗುತ್ತಾರೆಯೇ ಎನ್ನುವ ಅನುಮಾನವನ್ನು ಈಗಾಗಲೇ ಜನರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಯದುವೀರ್ ಒಡೆಯರ್ ಮಡಿಕೇರಿಗೆ ಬರುತ್ತಿದ್ದಂತೆ ಬಿಸಿಲ ಧಗೆ ತಾಳಲಾರದೆ ತಮ್ಮ ಕಾರ್ಯಕರ್ತರು, ಮುಖಂಡರೊಂದಿಗೆ ರಸ್ತೆಯಲ್ಲಿ ನಿಂತು ಎಳನೀರು ಸವಿದರು. ಜೊತೆಗೆ ಸಮಾವೇಶ ಮುಗಿದ ಬಳಿಕ ಸಾಮಾನ್ಯ ಕಾರ್ಯಕರ್ತನಂತೆ ಸರದಿಯಲ್ಲಿ ನಿಂತು ಪ್ಲೇಟ್ ಹಿಡಿದು ಊಟ ಹಾಕಿಸಿಕೊಂಡು ಊಟ ಮಾಡಿದ್ರು.
ಒಟ್ಟಿನಲ್ಲಿ ಅಭ್ಯರ್ಥಿಯಾಗಿ ಮೊದಲ ಸಲ ಕೊಡಗಿಗೆ ಆಗಮಿಸಿದ್ದ ಯದುವೀರ್ ಒಡೆಯರ್ ಭರ್ಜರಿಯಾಗಿಯೇ ಸಮಾವೇಶದಲ್ಲಿ ಭಾಗವಹಿಸಿ ಹಿಂದಿರುಗಿದ್ದಾರೆ.