ಹುಮನಾಬಾದ್‌/ಯಾದಗಿರಿ :  ರಾಜ್ಯದಲ್ಲಿ ಈ ಬಾರಿ 22 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವಿನ ಗುರಿಯೊಂದಿಗೆ ಬಿಜೆಪಿ ತನ್ನ ಪ್ರಚಾರ ಕಾರ್ಯ ನಡೆಸಲಿದ್ದು ಬೀದರ್‌ನಿಂದ ಆರಂಭವಾಗಿರುವ ಈ ಪ್ರಚಾರ ಕಾರ್ಯವನ್ನು ಚುನಾವಣೆ ಮುಗಿಯೋವರೆಗೂ ಹೀಗೆಯೇ ಮುಂದುವರೆಸಿಕೊಂಡು ಹೋಗ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಬೀದರ್‌ ಜಿಲ್ಲೆಯ ಹುಮನಾಬಾದ್‌ ಹಾಗೂ ಯಾದಗಿರಿಗಳಲ್ಲಿ ಹಮ್ಮಿಕೊಂಡಿದ್ದ ಮೋದಿ ವಿಜಯ ಸಂಕಲ್ಪ ಯಾತ್ರೆಗಳಲ್ಲಿ ಮಾತನಾಡಿದ ಅವರು, ಈ ಬಾರಿ ರಾಜ್ಯದ ಮಹಾ ಜನತೆ ಬೀದರ್‌ ಕಲಬುರಗಿ ಸೇರಿದಂತೆ ಕನಿಷ್ಠ 22 ಸಂಸದರನ್ನು ನೀಡಿದ್ದಲ್ಲಿ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿದರು.

ಹಾಲಿಗಳಿಗೇ ಟಿಕೆಟ್‌ ಫಿಕ್ಸ್‌:

ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಾಗಿದ್ದು, ಹಾಲಿ ಸಂಸದರಿಗೆ ಈ ಬಾರಿಯೂ ಅವಕಾಶ ಸಿಗಲಿದೆ. ಈ ಬಗ್ಗೆ ಅಂತಿಮವಾಗಿ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಒಂದು ರಾಜಕೀಯ ಪಕ್ಷದಲ್ಲಿ ಸಣ್ಣ ಪುಟ್ಟವ್ಯತ್ಯಾಸಗಳು, ಭಿನ್ನಾಭಿಪ್ರಾಯಗಳು ಇರುತ್ತೆ. ನಾವು ಎಲ್ಲರನ್ನು ಕೂಡಿಸಿ ಮಾತನಾಡಿ, ಸರಿಮಾಡಿ ಒಗ್ಗಟ್ಟಾಗಿ ಮುಂದೆ ಒಂದಾಗಿ ಹೋಗುತ್ತೇವೆ ಎಂದು ತಿಳಿಸಿದರು.

ಫಲಿತಾಂಶದಂದೇ ಮೈತ್ರಿ ಪತನ:

37 ಸ್ಥಾನ ಹೊಂದಿರೋ ಕುಮಾರಸ್ವಾಮಿ ಸಿಎಂ ಆಗಿದ್ದು ರಾಜ್ಯದ ದುರ್ದೈವ. ರಾಜ್ಯದಲ್ಲಿ ಎಲ್ಲ ತರದ ಅಭಿವೃದ್ಧಿಗಳೂ ನಿಂತು ಹೋಗಿವೆ. ಸಾಲದ ಹೆಸರಲ್ಲಿ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಸರ್ಕಾರಕ್ಕೆ ರೈತರ ಪೂರ್ಣ ಪ್ರಮಾಣದ ಸಾಲ ಮನ್ನಾ ಮಾಡಲು ಸಾಧ್ಯವಾಗಿಲ್ಲ. ಕೇವಲ ಕಚ್ಚಾಟ, ಪರಸ್ಪರ ಹೇಳಿಕೆ, ವರ್ಗಾವಣೆ ಇಂತಹ ಕಾರ್ಯಗಳತ್ತ ಸರ್ಕಾರ ಗಮನ ಕೇಂದ್ರೀಕರಿಸಿದ್ದು ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ದಿನವೇ ರಾಜ್ಯದಲ್ಲಿನ ಎಚ್‌ಡಿಕೆ ಸರ್ಕಾರ ಪತನವಾಗುತ್ತೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆದರೂ ಕಾರ್ಯಕರ್ತರು ಆಗೊಲ್ಲ. ಇದರಿಂದ ಬಿಜೆಪಿಗೆ ಲಾಭ. ರಾಜ್ಯದ ಜನ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಆಶೀರ್ವದಿಸಿರೋ ಮಾಹಿತಿ ಹೊರ ಬೀಳುತ್ತಿದ್ದಂತೆ ಸಮ್ಮಿಶ್ರ ಸರ್ಕಾರ ತನ್ನಿಂದತಾನೇ ಬೀಳುತ್ತೆ ಎಂದು ಭವಿಷ್ಯ ಹೇಳಿದರು.

ಆಪರೇಶನ್‌ ಇಲ್ಲ:

ಇದೇವೇಳೆ ಆಪರೇಶನ್‌ ಕಮಲದ ಪ್ರಶ್ನೇನೆ ಇಲ್ಲ ಎಂದು ಸ್ಪಷ್ಟಪಡಿಸಿದ ಯಡಿಯೂರಪ್ಪ, ಅವರೇ ಬಡಿದಾಡಿಕೊಂಡು ಸರ್ಕಾರ ಹೋಗಬಹುದೆಂದು ಜನ ನಿರೀಕ್ಷೆ ಮಾಡ್ತಿದ್ದಾರೆ ಎಂದರು. ಆಪರೇಶನ್‌ ಕಮಲ ಮಾಧ್ಯಮದವರು ಹುಟ್ಟು ಹಾಕಿದ್ದಷ್ಟೇ. ನಾವು 104 ಜನ ಇದ್ದೇವೆ ನಾವು ವಿರೋಧ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡ್ತೇವೆ. ನಮ್ಮಿಂದ ಸಮ್ಮಿಶ್ರ ಸರ್ಕಾರಕ್ಕೆ ಅಪಾಯವಿಲ್ಲ ಎಂದರು.

ಕೇಂದ್ರದ ಕೃಷಿ ರಾಜ್ಯ ಸಚಿವ ಕೇಂದ್ರ ಪಂಚಾಯತ್‌ ಮತ್ತು ಕೃಷಿ ರಾಜ್ಯ ಸಚಿವ ಪುರುಷೋತ್ತಮ್‌ ರೂಪಾಲ್‌, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಮಾಜಿ ಉಪಮುಖ್ಯಮತ್ರಿ ಆರ್‌.ಅಶೋಕ ಮತ್ತಿತರರಿದ್ದರು.


ಬಿಜೆಪಿ ನೇತೃತ್ವದ ಕೇಂದ್ರದ ಮೋದಿ ಸರ್ಕಾರವನ್ನು ಉರುಳಿಸುವ ನಿಟ್ಟಿನಲ್ಲಿ ಮಹಾಗಠಬಂಧನ ದಿಕ್ಕು ದಿಸೆ ಇಲ್ಲದೆ ಸಾಗುತ್ತಿದ್ದು, ದೇಶಕ್ಕೆ ಇದು ಮಾರಕ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಯೋಜನೆಗಳಿಲ್ಲದ ಗಠಬಂಧನದಿಂದ ಯಾವುದೇ ಪ್ರಯೋಜನವಾಗಲ್ಲ.

- ಪುರುಷೋತ್ತಮ್‌ ರೂಪಾಲ್‌, ಕೇಂದ್ರ ಪಂಚಾಯತ್‌ ಮತ್ತು ಕೃಷಿ ರಾಜ್ಯ ಸಚಿವ

ಉಗ್ರರ ಅಟ್ಟಹಾಸದಲ್ಲಿ ಯೋಧರನ್ನು ಕಳೆದುಕೊಂಡ ನಂತರ ನಡೆಯುವ ಐತಿಹಾಸಿಕ ಚುನಾವಣೆ ಇದಾಗಿದ್ದು, ದೇಶ ರಕ್ಷಣೆಗಾಗಿ ನರೇಂದ್ರ ಮೋದಿ ಮತ್ತೇ ಪ್ರಧಾನಿಯಾಗಬೇಕು. ಮಮತಾ ಬ್ಯಾನರ್ಜಿ, ಮಾಯಾವತಿ ಅವರನ್ನೊಳಗೊಂಡ ಮಹಾಗಠಬಂಧನ್‌ ಅಧಿಕಾರಕ್ಕೆ ಬಂದರೆ ವಾರಕ್ಕೊಮ್ಮೆ ಪ್ರಧಾನಿ ಬದಲಾಯಿಸುವ ಕಾಲ ಬರಬಹುದು

-ಗೋವಿಂದ ಕಾರಜೋಳ, ಮಾಜಿ ಸಚಿವ