Asianet Suvarna News Asianet Suvarna News

ಲೋಕಸಭಾ ಚುನಾವಣೆ : ಬಿಜೆಪಿ ಕೈ ಬಿಡಲಿವೆ ಕರ್ನಾಟಕದ 6 ಕ್ಷೇತ್ರಗಳು?

ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ವಿವಿಧ ಪಕ್ಷಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಇನ್ನು ಬಿಜೆಪಿಯಲ್ಲಿ ಇದೇ ವೇಳೆ ಆತಂಕವೊಂದು ಮನೆ ಮಾಡಿದೆ. 

Lok Sabha Election 2019 BJP May Lose 6 Karnataka Constituency
Author
Bengaluru, First Published Feb 13, 2019, 9:23 AM IST

ನವದೆಹಲಿ :  ರಾಜ್ಯದ ಬಿಜೆಪಿ ಮುಂದಾಳುಗಳು ಸರ್ಕಾರ ರಚಿಸುವ ಕಸರತ್ತಿನಲ್ಲಿ ನಿರತರಾಗಿದ್ದಾರೆ. ಹತ್ತಿರದಲ್ಲೇ ಇರುವ ಲೋಕಸಭಾ ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಮಾಡುವುದನ್ನು ಮರೆತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಮಟ್ಟಿಗೆ ಇದು ದುಬಾರಿಯಾಗಲಿದೆ. ಪಕ್ಷದ ರಾಜ್ಯ ಮುಂದಾಳತ್ವ ಹೀಗೆ ಮೈಮರೆತರೆ ಹೆಚ್ಚುವರಿ ಕ್ಷೇತ್ರಗಳಲ್ಲಿ ಗೆಲ್ಲುವುದಿರಲಿ, ಈಗಾಗಲೇ ಪಕ್ಷದ ಸಂಸದರಿರುವ ಆರು ಕ್ಷೇತ್ರಗಳು ಕೈಬಿಟ್ಟು ಹೋಗುವ ಅಪಾಯದ ಸ್ಥಿತಿ ಇದೆ.

ಹೀಗೆಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಸಲ್ಲಿಕೆಯಾಗಿರುವ ಪಕ್ಷದ ಆಂತರಿಕ ವರದಿಯೊಂದು ಎಚ್ಚರಿಕೆ ನೀಡಿದೆ. ಕಳೆದ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ರಾಜ್ಯದಲ್ಲಿನ ಆಗುಹೋಗುಗಳ ಮೇಲೆ ತಮ್ಮದೇ ವಿಧಾನದ ಮೂಲಕ ಕಣ್ಣಿಡಲು ಅಮಿತ್‌ ಶಾ ಅವರು ತಂಡವೊಂದನ್ನು ರೂಪಿಸಿದ್ದರು. ಈ ತಂಡ ಸದ್ಯ ಲೋಕಸಭಾ ಚುನಾವಣೆಗೆ ಸಂಬಂಧಿಸಿ ರಾಜ್ಯದಲ್ಲಿನ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದು, ನಿಯಮಿತವಾಗಿ ಶಾ ಅವರಿಗೆ ವರದಿ ಸಲ್ಲಿಸುತ್ತದೆ. ಇಂತಹ ಒಂದು ವರದಿಯಲ್ಲಿ ರಾಜ್ಯದಲ್ಲಿ ಬಿಜೆಪಿಯ ಸ್ಥಿತಿಗತಿಯ ಚಿತ್ರಣವಿದೆ.

ತೇಜಸ್ವಿನಿಗೆ ವಿರೋಧ: ಕೇಂದ್ರ ಸಚಿವ ಅನಂತ್‌ ಕುಮಾರ್‌ ಅವರ ನಿಧನದಿಂದಾಗಿ ತೆರವಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅವರ ಪತ್ನಿ ತೇಜಸ್ವಿನಿ ಅನಂತ್‌ ಕುಮಾರ್‌ ಅವರಿಗೆ ಟಿಕೆಟ್‌ ಕೊಡುವ ಬೇಡಿಕೆ ಇತ್ತು. ಆದರೆ, ತೇಜಸ್ವಿನಿ ಅವರಿಗೆ ಟಿಕೆಟ್‌ ನೀಡಿದರೆ ತಾನು ಕೆಲಸ ಮಾಡುವುದಿಲ್ಲ ಎಂದು ಅಲ್ಲಿನ ಪ್ರಭಾವಿ ಬಿಜೆಪಿ ನಾಯಕರೊಬ್ಬರು ಘೋಷಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿಲಾಗಿದೆ.

6 ಕ್ಷೇತ್ರ ಕಷ್ಟ: ಹೀಗೆ ಬೆಂಗಳೂರು ದಕ್ಷಿಣ ಕ್ಷೇತ್ರವಷ್ಟೇ ಅಲ್ಲದೆ, ಉಡುಪಿ-ಚಿಕ್ಕಮಗಳೂರು, ಬೀದರ್‌, ಮೈಸೂರು, ವಿಜಯಪುರ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿರುವ ಪ್ರಸಕ್ತ ಸಂಸದರಿಗೆ ಪಕ್ಷದೊಳಗಿನಿಂದಲೇ ವಿರೋಧವಿದೆ. ಈ ವಿರೋಧವನ್ನು ರಾಜ್ಯ ನಾಯಕತ್ವ ಶಮನಗೊಳಿಸಬೇಕಿತ್ತು ಅಥವಾ ತಮ್ಮ ಮುಂದಿರುವ ಹಾದಿ ಬಗ್ಗೆ ಸ್ಪಷ್ಟತೆ ಹೊಂದಿರಬೇಕಿತ್ತು. ಆದರೆ ಚುನಾವಣೆ ಸಮೀಪಿಸುತ್ತಿದ್ದರೂ ಇಂಥ ಯಾವುದೇ ಬೆಳವಣಿಗೆ ಈವರೆಗೆ ನಡೆದೇ ಇಲ್ಲ ಎಂದು ಈ ವರದಿಯಲ್ಲಿ ವಿವರಿಸಲಾಗಿದೆ.

ಡಿವಿ ಕ್ಷೇತ್ರದಲ್ಲೂ ಕಷ್ಟ: ಕೇಂದ್ರದ ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಅವರು ಪ್ರತಿನಿಧಿಸುವ ಬೆಂಗಳೂರು ಉತ್ತರ ಕ್ಷೇತ್ರದಲ್ಲಿನ ಫಲಿತಾಂಶವನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ಅಂತಿಮಗೊಂಡ ಬಳಿಕವೇ ಊಹಿಸಬಹುದು. ಆದರೂ ಬಿಜೆಪಿಗೆ ಈ ಕ್ಷೇತ್ರ ಉಳಿಸಿಕೊಳ್ಳುವುದು ಅಷ್ಟೊಂದು ಅಷ್ಟೊಂದು ಸುಲಭವಲ್ಲ ಎಂದು ವರದಿ ಹೇಳಿದೆ.

3 ಹೆಚ್ಚುವರಿ ಗೆಲ್ಲುವ ಅವಕಾಶ ಕ್ಷೀಣ:

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳನ್ನು ಬಿಜೆಪಿ ಸೋತಿತ್ತು, ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಬಳ್ಳಾರಿಯನ್ನೂ ಕಳೆದುಕೊಳ್ಳುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸಂಸದರ ಸಂಖ್ಯೆ 16ಕ್ಕೆ ಇಳಿದಿದೆ. ಕಳೆದ ಬಾರಿ ಪಕ್ಷ ಕಳೆದುಕೊಂಡಿರುವ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ, ಚಿಕ್ಕೋಡಿ ಮತ್ತು ಚಿತ್ರದುರ್ಗದಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲಬಹುದೆನ್ನುವ ಆಶಾಭಾವ ಇತ್ತು. ಆ ಆಶಾಭಾವ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂಬ ಮಾಹಿತಿಯನ್ನು ಶಾ ಅವರಿಗೆ ಈ ವರದಿ ಮೂಲಕ ನೀಡಲಾಗಿದೆ.

ಸರ್ಕಾರ ರಚನೆಗೇ ಒತ್ತು:  ರಾಜ್ಯದಲ್ಲಿ ಚುನಾವಣೆಯ ಹೊಣೆ ಹೊರಬೇಕಾದವರು ಸರ್ಕಾರ ರಚನೆಯಲ್ಲಿ ವ್ಯಸ್ತರಾಗಿದ್ದಾರೆ. ಸರ್ಕಾರ ರಚನೆಯಾದರೆ ಪಕ್ಷಕ್ಕೆ ಲಾಭವಾಗಬಹುದು. ಆದರೆ ಸರ್ಕಾರ ರಚನೆ ಪ್ರಕ್ರಿಯೆ ಭಾರೀ ಎಳೆದಾಟ ಕಾಣುತ್ತಿರುವುದು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ. ಆದ್ದರಿಂದ ಸರ್ಕಾರ ರಚನೆ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಡೆಸುತ್ತಿರುವ ಪ್ರಯತ್ನವನ್ನು ಶೀಘ್ರವೇ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂದು ಶಾ ಅವರಿಗೆ ನೀಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈಗಾಗಲೇ ರಾಜ್ಯ ಬಿಜೆಪಿಯು ಪಕ್ಷ ಸಂಘಟಿಸಿ ಲೋಕಸಭೆ ಚುನಾವಣೆ ತಯಾರಿ ನಡೆಸಬೇಕಿತ್ತು. ಆದರೆ ರಾಜ್ಯದ ನಾಯಕರು ಮಾತ್ರ ಸರ್ಕಾರ ರಚನೆಯ ಪ್ರಯತ್ನದಲ್ಲಿದ್ದಾರೆ. ಇದು ಪಕ್ಷದ ಚುನಾವಣಾ ತಯಾರಿಗೆ ಭಾರೀ ಹೊಡೆತ ನೀಡಿದೆ. ಆದ್ದರಿಂದ ಒಂದೋ ಶೀಘ್ರ ಸರ್ಕಾರ ರಚಿಸಿ, ಇಲ್ಲವೇ ಈ ಪ್ರಯತ್ನ ಕೈಬಿಟ್ಟು ಲೋಕಸಭಾ ಚುನಾವಣೆಗೆ ತಯಾರಿ ನಡೆಸಿ ಎಂದು ರಾಜ್ಯ ಘಟಕಕ್ಕೆ ಸೂಚನೆ ನೀಡಬೇಕು ಎಂದು ಅಮಿತ್‌ ಶಾ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಸಲಹೆ ನೀಡಲಾಗಿದೆ.

ಕಳೆದ ಚುನಾವಣೆಯಲ್ಲಿ ಸೋತ ಲೋಕಸಭಾ ಕ್ಷೇತ್ರಗಳಲ್ಲಿ ಪರಾಮರ್ಶೆ ಸಭೆ ನಡೆಸಲಾಗಿದೆ. ಆದರೆ ಗೆದ್ದಿರುವ ಬೆಂಗಳೂರಿನ ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ ಲೋಕಸಭಾ ಕ್ಷೇತ್ರಗಳ ಪರಾಮರ್ಶೆ ಸಭೆ ಇನ್ನೂ ಸರಿಯಾಗಿ ನಡೆದಿಲ್ಲ.

ಟಾಸ್ಕ್‌ ಪೂರ್ಣ ಆಗಿಯೇ ಇಲ್ಲ: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಫೆಬ್ರವರಿ ಹೊತ್ತಿಗೆ ಬಿಜೆಪಿಯ ಪರಿವರ್ತನಾ ಯಾತ್ರೆ, ರೈತ ಬಂಧು ಯಾತ್ರೆ ಸೇರಿ ಅನೇಕ ಕಾರ್ಯಕ್ರಮಗಳು ತಾರ್ಕಿಕ ಅಂತ್ಯಕ್ಕೆ ಬಂದಿದ್ದವು. ಆದರೆ ಲೋಕಸಭಾ ಚುನಾವಣೆ ಹೊತ್ತಿಗೆ ಪಕ್ಷದ ರಾಷ್ಟ್ರೀಯ ಘಟಕ ನೀಡಿರುವ ಅಸೈನ್‌ಮೆಂಟ್‌ಗಳನ್ನು ಈವರೆಗೂ ರಾಜ್ಯ ಘಟಕ ಪೂರ್ಣಗೊಳಿಸಿಲ್ಲ. ರಾಜ್ಯ ಬಿಜೆಪಿಯ ಯುವ ಮೋರ್ಚಾ ಸೇರಿ ಬಹುತೇಕ ಘಟಕಗಳು ತಮಗೆ ನೀಡಲಾಗಿರುವ ಟಾಸ್ಕ್‌ಗಳನ್ನು ಮಾಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2014ರ ಹೊತ್ತಿಗೆ ರಾಜ್ಯದಲ್ಲಿ ಮೋದಿ ಅಲೆ ತೀವ್ರವಾಗಿತ್ತು. ಆದರೆ, ಈ ಬಾರಿ ಅದು ಅಷ್ಟುತೀವ್ರವಾಗಿಲ್ಲ. ಮೋದಿ ಆಲೆಯೊಂದನ್ನೇ ನಂಬಿ ಚುನಾವಣೆಗೆ ಹೋಗುವ ಸ್ಥಿತಿಯಲ್ಲಿ ಸದ್ಯ ರಾಜ್ಯ ಬಿಜೆಪಿಯಿಲ್ಲ. ಆದರೆ ಮೋದಿ ಅವರು ಮತವನ್ನು ಸೆಳೆದು ಕೊಡಬಲ್ಲ ಸಾಮರ್ಥ್ಯವನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಈ ಮತ ಸೆಳೆಯುವ ಸಾಮರ್ಥ್ಯ ಗೆಲುವಾಗಿ ಮಾರ್ಪಾಡುಗೊಳ್ಳಬೇಕಾದರೆ ಪಕ್ಷದ ಚುನಾವಣಾ ಪೂರ್ವ ಸಿದ್ಧತೆಗಳು ಸಮರೋಪಾದಿಯಲ್ಲಿ ನಡೆಯಬೇಕು ಎಂದು ಅಮಿತ್‌ ಶಾ ಅವರ ಗಮನಕ್ಕೆ ತರಲಾಗಿದೆ.

ಮುರಳೀಧರ್‌ ರಾವ್‌ ಹೊಣೆ ನಿರ್ವಹಿಸುತ್ತಿಲ್ಲ

ಆಪರೇಷನ್‌ ಕಮಲದ ಆರೋಪವಿರುವ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ವಿಧಾನಸಭೆಯಲ್ಲಿ ನಡೆದ ಬೆಳವಣಿಗೆಗಳು ಪಕ್ಷಕ್ಕೆ ಪೂರಕವಾದದ್ದಲ್ಲ. ಹಾಗೆಯೇ ಪಕ್ಷದ ರಾಜ್ಯ ಉಸ್ತುವಾರಿ ಮುರುಳೀಧರ್‌ ರಾವ್‌ ಅವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ವಿಚಾರವೂ ವರದಿಯಲ್ಲಿ ಉಲ್ಲೇಖವಾಗಿದೆ. 

ವರದಿ :  ರಾಕೇಶ್‌.ಎನ್‌.ಎಸ್‌

Follow Us:
Download App:
  • android
  • ios