ಬೆಂಗಳೂರು(ಮಾ.29): ಕೊರೋನಾ ಲಾಕ್‌ಡೌನ್‌ನಿಂದಾಗಿ ನಂದಿನಿ ಹಾಲು ಹಾಗೂ ಮೊಸರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಪರಿಣಾಮ ಪ್ರತಿದಿನ ಎಂಟು ಲಕ್ಷ ಲೀಟರ್‌ನಷ್ಟುಹಾಲು ಹಾಗೂ ಮೊಸಲು ಮಾರಾಟವಾಗದೇ ಉಳಿಯುತ್ತಿದೆ.

ಲಾರಿಗಳು ಮತ್ತು ಚಾಲಕರ ಕೊರತೆಯಿಂದಾಗಿ ಹಾಲನ್ನು ನಿಗದಿತ ಸಮಯಕ್ಕೆ ಎಲ್ಲೆಡೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಾಲು ಮತ್ತು ಮೊಸರಿನ ಮಾರಾಟ ಕುಸಿಯಲು ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದ್ದು ರೈತರು, ಗ್ರಾಹಕರು ಸಹಕರಿಸಬೇಕು ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಕೊರೋನಾ ಭೀತಿ: ನಂದಿನಿ ಹಾಲು ಹೆಚ್ಚಿನ ದರಕ್ಕೆ ಮಾರಿದರೆ ದೂರು ನೀಡಿ

ಶನಿವಾರ ಕೆಎಂಎಫ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೆಎಂಎಫ್‌ ತನ್ನ 14 ಹಾಲು ಒಕ್ಕೂಟಗಳ ಮೂಲಕ ಪ್ರತಿದಿನ 9 ಲಕ್ಷ ಹೈನುಗಾರ ರೈತರಿಂದ 70 ಲಕ್ಷ ಲೀಟರ್‌ ಹಾಲು ಸಂಗ್ರಹಿಸುತ್ತಿದೆ. ಇದರಲ್ಲಿ 40 ಲಕ್ಷ ಲೀಟರ್‌ ಹಾಲು ಮತ್ತು ಹಾಲಿನ ಉತ್ಪನ್ನಗಳು ಮಾರಾಟವಾಗುತ್ತಿದೆ. 15 ಲಕ್ಷ ಲೀಟರ್‌ ಹಾಲನ್ನು ಪೌಡರ್‌ ಮಾಡಲಾಗುತ್ತಿದೆ. ಜತೆಗೆ ಹೊರ ರಾಜ್ಯಗಳ ಪೌಡರ್‌ ಪ್ಲಾಂಟ್‌ಗಳನ್ನು ಸಂಪರ್ಕಿಸಿ 7 ಲಕ್ಷ ಲೀಟರ್‌ ಹಾಲನ್ನು ಪೌಡರ್‌ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಾಲಿನ ಸಂಸ್ಕರಣೆಗೆ ಅನೇಕ ಬಗೆಯ ಕಚ್ಚಾ ಪದಾರ್ಥಗಳ ಕೊರತೆ ಇದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ 15 ಸಾವಿರ ಕಾರ್ಮಿಕರ ಪೈಕಿ ಐದು ಸಾವಿರ ಕಾರ್ಮಿಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಲಿನ ಮಾರಾಟಕ್ಕೆ ಕಚ್ಚಾ ಪದಾರ್ಥಗಳ ಸಾರಿಗೆ ಅವಶ್ಯಕತೆ ಇದೆ. ರಾಮನಗರದಲ್ಲಿ ಹೊಸದಾಗಿ ಪ್ರತಿ ದಿನ 100 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಹಾಲಿನ ಪುಡಿ ಘಟಕ ಸ್ಥಾಪನೆ ಮಾಡಲಾಗಿದೆ. ಕಾರ್ಮಿಕರ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಮಾ.30ರಿಂದ 3 ಲಕ್ಷ ಲೀಟರ್‌ ಹಾಲನ್ನು ಪೌಡರ್‌ ಆಗಿ ಪರಿವರ್ತಿಸಲಾಗುವುದು ಎಂದರು.

ಕೊರೋನಾ ಸೋಂಕು ಹರಡದಂತೆ ಕೆಎಂಎಫ್‌ ಕೂಡ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ. ಹಾಲು ಉತ್ಪಾದಕರ ಸಂಘದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ವಹಿಸಲಾಗಿದೆ. ರೈತರು, ಕಾರ್ಮಿಕರಿಗೆ ಮಾಸ್ಕ್‌, ಗ್ಲೌಸ್‌ಗಳನ್ನು ನೀಡಲಾಗಿದ್ದು ಸೋಂಕು ಪರೀಕ್ಷೆಗಳನ್ನು ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.

ನಿಮ್ಮ ಜಾನುವಾರುಗಳು ಆರೋಗ್ಯಕರವಾಗಿರಲು ಕೆಲವು ಸಲಹೆಗಳು!

ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ, ಪಶುಸಂಗೋಪನಾ ಇಲಾಖೆ ನಿರ್ದೇಶಕ ಡಾ. ಎ.ಎನ್‌. ಹೆಗಡೆ, ಖರೀದಿ ವಿಭಾಗದ ಇಂಜಿನಿಯರ್‌ ಡಾ. ಸುರೇಶಕುಮಾರ, ಮಾರುಕಟ್ಟೆವಿಭಾಗದ ನಿರ್ದೇಶಕ ಡಾ.ಎಂ.ಟಿ.ಕುಲಕರ್ಣಿ, ಮದರ್‌ ಡೈರಿ ನಿರ್ದೇಶಕ ಡಾ.ಸತ್ಯನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.