ಬೆಂಗಳೂರು(ಮೇ.03): ಒಂದನೇ ಮತ್ತು ಎರಡನೇ ಹಂತದ ಲಾಕ್‌ಡೌನ್‌ಗಿಂತ ಮೂರನೇ ಹಂತದ ಲಾಕ್‌ಡೌನ್‌ ನಿಭಾಯಿಸುವುದು ಸವಾಲಾಗಿದ್ದು, ಇದನ್ನು ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶನಿವಾರ ‘ಕನ್ನಡಪ್ರಭ’ದ ಜತೆ ಮಾತನಾಡಿದ ಅವರು, ಎರಡು ಹಂತದ ಲಾಕ್‌ಡೌನ್‌ಗಳನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಆದರೆ, ಹಲವು ಸಡಿಲಿಕೆಗಳಿಂದ ಕೂಡಿರುವ ಮೂರನೇ ಹಂತದಲ್ಲಿ ಕೊರೋನಾ ಸೋಂಕು ಹೆಚ್ಚು ಹರಡದಂತೆ ನೋಡಿಕೊಳ್ಳುವುದು ಹಿಂದಿನ ಎರಡು ಹಂತಗಳಿಗಿಂತ ಸವಾಲೇ ಸರಿ. ಅದನ್ನೂ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಸ್ಕ್‌ ಧರಿಸದ್ದಕ್ಕೆ 51 ಸಾವಿರ ದಂಡ!

ಈ ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಕೆಂಪು ವಲಯವನ್ನು ಕಿತ್ತಳೆ ವಲಯವನ್ನಾಗಿ ಮಾಡಬೇಕಿದೆ ಹಾಗೂ ಕಿತ್ತಳೆ ವಲಯವನ್ನು ಹಸಿರು ವಲಯವನ್ನಾಗಿ ಮಾಡಬೇಕಿದೆ. ಅಲ್ಲದೇ, ಕಂಟೈನ್ಮೆಂಟ್‌ ವಲಯಗಳನ್ನು ಹತೋಟಿಗೆ ತಂದು ಹೊಸದಾಗಿ ಕಂಟೈನ್ಮೆಂಟ್‌ ವಲಯಗಳಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಇದರ ಜತೆಗೆ ಆರ್ಥಿಕ ಚಟುವಟಿಕೆಗಳಿಗೂ ಅನುಕೂಲ ಮಾಡಿಕೊಡಬೇಕು. ಕೃಷಿ, ಕೈಗಾರಿಕೆ ಸೇರಿದಂತೆ ಇತರೆ ವಲಯಗಳ ಚಟುವಟಿಕೆಗಳಿಗೂ ಅನುಕೂಲ ಮಾಡಿಕೊಡಬೇಕು ಎಂದರು.

ಕೊರೋನಾ ನಿಯಂತ್ರಣದಲ್ಲಿ ಸರ್ಕಾರದ ಪಾತ್ರಕ್ಕಿಂತ ಹೆಚ್ಚಾಗಿ ಜನರ ಪಾತ್ರ ಮುಖ್ಯವಾಗಿರುತ್ತದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಮಾಸ್ಕ್‌ ಹಾಕಿಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ಕೊರೋನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತೇವೆ. ಇಲ್ಲವಾದರೆ ನಾಲ್ಕನೇ ಹಂತದ ಲಾಕ್‌ಡೌನ್‌ಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕ್ವಾರಂಟೈನ್‌ನಲ್ಲೂ ಕೆಲಸ

ಸ್ವಯಂ ಕಾರಂಟೈನ್‌ನಲ್ಲಿರುವ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರು ಕ್ವಾರಂಟೈನ್‌ನಲ್ಲಿಯೂ ವಿಶ್ರಾಂತಿ ತೆಗೆದುಕೊಳ್ಳದೆ ಮನೆಯಿಂದಲೇ ತಮ್ಮ ಇಲಾಖೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಕ್ವಾರಂಟೈನ್‌ ಅವಧಿಯಲ್ಲಿ ಯಥಾಪ್ರಕಾರ ಕೆಲಸಗಳನ್ನು ನಡೆಸುತ್ತಿದ್ದೇನೆ. ಯಾವುದೇ ಸರ್ಕಾರಿ ಕೆಲಸವನ್ನು ನಿಲ್ಲಿಸಿಲ್ಲ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆಗಳನ್ನು ನಡೆಸುತ್ತಿದ್ದೇನೆ ಎಂದರು.

ಹಸಿರು, ಕಿತ್ತಳೆ ವಲಯಗಳಲ್ಲಿ ಸೆಲೂನ್‌ ಪುನಾರಂಭಕ್ಕೆ ಅಸ್ತು!

ರಾಜ್ಯ ಪ್ರವೇಶ ಮಾಡುವವರಿಗೆ ಕ್ವಾರಂಟೈನ್‌

ಬೇರೆ ರಾಜ್ಯಗಳಿಂದ ಬರುವವರನ್ನು ಒಂದೇ ಸಾರಿ ಬಿಟ್ಟರೆ ಗ್ರಾಮೀಣ ಭಾಗಕ್ಕೆ ಕೋವಿಡ್‌ ಪ್ರವೇಶಿಸುವ ಸಾಧ್ಯತೆ ಇದೆ. ಹೀಗಾಗಿ ಹಂತ ಹಂತವಾಗಿ ಪ್ರವೇಶ ನೀಡುವ ಬಗ್ಗೆ ಚಿಂತನೆ ಇದೆ. ರಾಜ್ಯಕ್ಕೆ ಬರುವವರನ್ನು ಪರೀಕ್ಷಿಸಿ ಕ್ವಾರಂಟೈನ್‌ನಲ್ಲಿಡಲಾಗುವುದು. ಬಿಗಿ ಕ್ರಮ ಕೈಗೊಂಡು ಕೋವಿಡ್‌ ನಿಯಂತ್ರಣ ಮಾಡಲಾಗುವುದು.

ಪಾಸ್‌ ನೀಡಲು ಹೊಸ ವ್ಯವಸ್ಥೆ

ಪಾಸ್‌ಗಳ ವಿತರಣೆಯನ್ನು 2-3 ರೀತಿಯಲ್ಲಿ ಮಾಡಲಾಗಿದೆ. ಈಗಾಗಲೇ ಪಾಸ್‌ ವಿತರಣೆ ಮಾಡಿರುವುದು ಒಂದು ಹಂತವಾದರೆ, ಐಟಿ ಕ್ಷೇತ್ರಕ್ಕೆ ಪಾಸ್‌ ವಿತರಣೆ ಮಾಡುವುದು ಎರಡನೇ ಹಂತವಾಗಿದೆ. ಇನ್ನು ಮೂರನೇ ಹಂತವಾಗಿ ಸರ್ಕಾರದ ಇಲಾಖೆಗಳು ತಮ್ಮ ವ್ಯಾಪ್ತಿಗೊಳಪಡುವ ಸಿಬ್ಬಂದಿಗೆ ಪಾಸ್‌ ವಿತರಣೆ ಮಾಡುತ್ತವೆ. ಜಿಲ್ಲಾ ಮಟ್ಟದಲ್ಲಿ ಕೈಗಾರಿಕೆಗಳಿಗೆ ಸಂಬಂಧಪಟ್ಟಜಂಟಿ ಅಧಿಕಾರಿಗಳು ಪಾಸ್‌ ವಿತರಣೆಯ ಜವಾಬ್ದಾರಿ ನಿರ್ವಹಿಸಲಿದ್ದಾರೆ.