ಮಂಡ್ಯ :  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಕೆಆರ್‌ಎಸ್‌ ಬೃಂದಾವನ ಬಳಿ ಡಿಸ್ನಿಲ್ಯಾಂಡ್‌ ಮಾದರಿ ಅಭಿವೃದ್ಧಿ ಯೋಜನೆಗೆ ಆರಂಭದಲ್ಲೇ ವಿಘ್ನ ಉಂಟಾಗಿದೆ. ಜಿಲ್ಲಾಡಳಿತವು ಶುಕ್ರವಾರ ಜಮೀನು ವೀಕ್ಷಣೆ ಕಾರ್ಯಕ್ಕೆ ಮುಂದಾದ ಸಂದರ್ಭದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. 

ಬಳಿಕ ಜಿಲ್ಲಾಧಿಕಾರಿ ಮಂಜುಶ್ರೀ ಸಮಾಧಾನದ ಮಾತುಗಳನ್ನು ಹೇಳಿದ ಬಳಿಕ ತಣ್ಣಗಾಗಿದ್ದಾರೆ. ಡಿಸ್ನಿಲ್ಯಾಂಡ್‌ ಮಾದರಿ ಅಭಿವೃದ್ಧಿಗಾಗಿ 300 ಎಕರೆ ಭೂಮಿ ಒದಗಿಸಲು ಸರ್ಕಾರ ಚಿಂತನೆ ಮಾಡಿ ಶ್ರೀರಂಗಪಟ್ಟಣ ತಾಲೂಕಿನ ಹೊಂಗಳ್ಳಿ, ಚಿಕ್ಕಯಾರಹಳ್ಳಿ ಗ್ರಾಮಗಳ ಜಮೀನು ಸ್ವಾಧೀನ ಮಾಡಿಕೊಳ್ಳುವ ಚಿಂತನೆ ನಡೆಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಭೂಮಿಯನ್ನೂ ಕೊಡಲ್ಲ, ಗ್ರಾಮವನ್ನೂ ತೊರೆಯಲ್ಲ ಎಂದು ಎಚ್ಚರಿಕೆ ನೀಡಿದರು.

ಕೆಆರ್‌ಎಸ್‌ ಜಲಾಶಯದ ಅಕ್ಕಪಕ್ಕದಲ್ಲಿ ಇರುವ ಹಳ್ಳಿಗಳು ಎರಡೂ ಗ್ರಾಮಗಳನ್ನು ಸ್ಥಳಾಂತರ ಮಾಡುವುದು. ನಂತರ ಭೂಮಿ ವಶಪಡಿಸಿಕೊಳ್ಳಲು ಆಲೋಚಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ರೈತರ ವಿರೋಧವಿದೆ. ಜಿಲ್ಲಾಡಳಿತವು ಶುಕ್ರವಾರ ಜಮೀನು ವೀಕ್ಷಣೆ ಕಾರ್ಯಕ್ಕೆ ಮುಂದಾದ ಸುದ್ದಿ ತಿಳಿದ ಸ್ಥಳೀಯರು ಗ್ರಾಮದಲ್ಲಿ ಸಭೆ, ಪ್ರತಿಭಟನೆ ಮಾಡಲು ಮುಂದಾದರು.

ರೈತರ ಭೂಮಿ ಸ್ವಾಧೀನವಿಲ್ಲ:  ರೈತರು ಮತ್ತು ಗ್ರಾಮಸ್ಥರ ವಿರೋಧದ ಮಾಹಿತಿ ತಿಳಿದುಕೊಂಡ ಜಿಲ್ಲಾಧಿಕಾರಿ ಮಂಜುಶ್ರೀ, ಸರ್ಕಾರ ನಮಗೆ ರೈತ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಅಥವಾ ಗ್ರಾಮಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಯಾವುದೇ ಸೂಚನೆ ಕೊಟ್ಟಿಲ್ಲ. ಯಾರದ್ದೋ ಮಾತುಗಳನ್ನು ಕೇಳಿ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರಿ ಭೂಮಿ ಎಲ್ಲಿ ಎಷ್ಟುಲಭ್ಯವಿದೆ ಎಂಬುದನ್ನು ಮಾತ್ರ ನಾವು ತಲಾಷೆ ಮಾಡುತ್ತೇವೆ ಎಂದು ಸಮಾಧಾನ ಮಾತುಗಳನ್ನು ಹೇಳಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.