ಯಾದಗಿರಿ[ಜ.12]: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ವತಿಯಿಂದ ರೈತರ ಸಾಲ ಮನ್ನಾಗೆ ಪ್ರಕ್ರಿಯೆಗಳು ಮುಂದುವರಿದಿರುವ ಸಂದರ್ಭದಲ್ಲೇ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಆದ ರೈತರ 50 ಸಾವಿರ ರು.ವರೆಗಿನ ಅಲ್ಪಾವಧಿ ಸಾಲ ಮನ್ನಾಕ್ಕೆ ಕನ್ನ ಹಾಕಿರುವ ಪ್ರಕರಣಗಳು ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿವೆ.

ಸಹಕಾರಿ ಸಂಘಗಳ ಅಧಿಕಾರಿಗಳು ಸರ್ಕಾರದಿಂದ ಬಿಡುಗಡೆಯಾಗಿ ಬಂದ ಹಣವನ್ನು ರೈತರ ಖಾತೆಗೆ ಜಮೆ ಮಾಡದೆ ಸ್ವಂತಕ್ಕೆ ಬಳಸಿಕೊಂಡಿದ್ದಾರಲ್ಲದೆ, ಮನ್ನಾ ಮೊತ್ತವನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರುಗಳು ದಾಖಲಾಗಿವೆ.

ಕೆಲವು ರೈತರ ಖಾತೆಗಳಿಗೆ ಅಧಿಕಾರಿಗಳು ಅರ್ಧಂಬರ್ಧ ಹಣ ಜಮೆ ಮಾಡಿದ್ದರೆ, ಹಲವರಿಗೆ ಸರ್ಕಾರದಿಂದ ಹಣ ಬಂದೇ ಇಲ್ಲ ಎಂದು ಸುಳ್ಳು ಹೇಳಿ ಸಾಗಹಾಕಿದ್ದಾರೆ. ಯಾದಗಿರಿ ಜಿಲ್ಲೆಯ ನೀಲಹಳ್ಳಿ, ಕಾಮನಟಗಿ, ಕೋಳೂರು (ಎಂ), ಹಾಗರಣಗಾ, ಸಗರ ಹಾಗೂ ಗೋಗಿ ಗ್ರಾಮಗಳಲ್ಲಿ ಈ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ರೈತರಿಗೆ ಅನ್ಯಾಯವಾಗಿದೆ ಎಂದು ಹೇಳಲಾಗಿದೆ.

ತಪ್ಪು ಮಾಹಿತಿ ನೀಡಿದರು:

ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿ.(ಡಿಸಿಸಿ) ಹಾಗೂ ವಿ.ಎಸ್‌.ಎಸ್‌.ಎನ್‌ ಸೊಸೈಟಿ ಕಾರ್ಯದರ್ಶಿಗಳು ಸೇರಿ ಹೊಸ ರೈತರ ಹೆಸರಿನಲ್ಲಿ ಸಾಲದ ಪಟ್ಟಿತಯಾರಿಸಿ, ಸುಮಾರು .60 ಕೋಟಿ ಸಾಲ ಮಂಜೂರು ಪಡೆದು, ರೈತರಿಗೆ ವಿತರಿಸಿದ್ದೇವೆ ಎಂದು ಅಪೆಕ್ಸ್‌ ಬ್ಯಾಂಕಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಅದರಲ್ಲಿ ಸುಮಾರು .28 ಕೋಟಿ ಹಣವನ್ನು ಸರ್ಕಾರದ ಸಾಲ ಮನ್ನಾದಲ್ಲಿ ತೋರಿಸಿ ರೈತರಿಗೆ ಹಾಗೂ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರು ಸಹಕಾರಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

1.5 ಕೋಟಿ ರು. ನಗದು ಡ್ರಾ:

ವಿಚಿತ್ರ ಎಂದರೆ, ಶಹಾಪುರ ತಾಲೂಕಿನ ಗೋಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ .1.57 ಕೋಟಿಗೂ ಹೆಚ್ಚು ಹಣವನ್ನು ರೈತರ ಖಾತೆಗೆ ಜಮೆ ಮಾಡದೆ ನಗದು ರೂಪದಲ್ಲಿ ಪಡೆದಿರುವುದು ಅಚ್ಚರಿ ಮೂಡಿಸಿದೆ. ಕೆಲವೆಡೆ .50 ಸಾವಿರ ಸಾಲಮನ್ನಾ ಹಣ ಇನ್ನೂ ಪೂರ್ಣವಾಗಿ ಬಂದಿಲ್ಲ ಎಂದು ಸಮಜಾಯಿಷಿ ನೀಡಿ, ಹತ್ತೋ ಹದಿನೈದು ಸಾವಿರ ರುಪಾಯಿಗಳ ನಗದು ಹಣವನ್ನು ರೈತರ ಕೈಗಿಟ್ಟು ಸಮಾಧಾನ ಪಡಿಸಲಾಗಿದೆ. ಕೆಲವು ರೈತರು ಸಾಲಮನ್ನಾ ಹಣ ಇನ್ನೂ ಬಂದಿಲ್ಲ ಎಂದು ಭಾವಿಸಿದ್ದರೆ, ಸಹಕಾರಿ ಬ್ಯಾಂಕ್‌ಗಳ ಅಧಿಕಾರಿಗಳು ಹಾಗೂ ಕೆಲವು ಸಿಬ್ಬಂದಿ ರೈತರ ಹೆಸರಲ್ಲಿನ ಹಣ ಗುಳುಂ ಮಾಡಿರುವ ಕುರಿತು ಕೆಲವರು ದೂರುಗಳನ್ನು ದಾಖಲಿಸಿದ್ದಾರೆ. ಈ ಕುರಿತು ದಾಖಲೆಗಳು ಲಭ್ಯವಾಗಿವೆ.

ಶಹಾಪುರ ಠಾಣೆಯಲ್ಲಿ ಪ್ರಕರಣ ಸಂಖ್ಯೆ 462/18, 463/18 ಮತ್ತು 82/17 ಹಾಗೂ ಯಾದಗಿರಿ ತಾಲೂಕಿನ ಸೈದಾಪೂರ ಠಾಣೆಯಲ್ಲಿ 176/18 ಸಂಖ್ಯೆಯ ದೂರು ದಾಖಲಾಗಿದೆ. ಈ ಎಲ್ಲ ಅವ್ಯವಹಾರದ ಬಗ್ಗೆ ಸಹಕಾರಿ ಇಲಾಖೆಯ ಕಾರ್ಯದರ್ಶಿಗಳಿಗೆ ವರದಿ ನೀಡಿರುವ ಸಹಕಾರ ಸಂಘಗಳ ನಿಬಂಧಕರು, ಡಿಸಿಸಿ ಬ್ಯಾಂಕ್‌ 17,785 ರೈತರಿಗಾಗಿ .26.65 ಕೋಟಿ ಸಾಲ ವಿತರಣೆಗೆ ಹಣ ಮಂಜೂರು ಮಾಡಿ ಆದೇಶ ನೀಡಿದೆಯಾದರೂ, ವಾಸ್ತವವಾಗಿ ಶಾಖೆಗಳ ಮಟ್ಟದಲ್ಲಿ ಮತ್ತು ಸಂಘದ ಮಟ್ಟದಲ್ಲಿ ರೈತರಿಗೆ ಸಾಲ ವಿತರಣೆಯೇ ಆಗಿಲ್ಲ ಹಾಗೂ ಅಪೆಕ್ಸ್‌ ಬ್ಯಾಂಕಿಗೂ ವಂಚಿಸಲಾಗಿದೆ ಎಂದು ನ್ಯೂನತೆಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದೆ.

-ಆನಂದ್ ಎಂ. ಸೌದಿ