ಈ ಬಗ್ಗೆ ‘ಕರ್ಟೈಲ್‌ಮೈಂಟ್’ (ವಿದ್ಯುತ್ ಬಳಕೆ ಮೊಟಕು) ಹೆಸರಿನಲ್ಲಿ ಖುದ್ದು ಕೆಪಿಟಿಸಿಎಲ್ ವತಿಯಿಂದಲೇ ಎಸ್ಕಾಂಗಳಿಗೆ ಗ್ರಿಡ್‌ನಿಂದ ವಿದ್ಯುತ್ ಡ್ರಾ ಮಾಡುವ ಪ್ರಮಾಣಕ್ಕೆ ಮಿತಿ ಹೇರಲಾಗಿದೆ. ಆ.8 ರಿಂದ ಆ.11 ರವರೆಗೆ ವಿದ್ಯುತ್ ಕೊರತೆ ಕಾರಣ ನೀಡಿ ನಿರ್ದಿಷ್ಟ ಸಮಯಗಳಲ್ಲಿ ಇಂತಿಷ್ಟು ಕಡಿಮೆ ವಿದ್ಯುತ್ ಡ್ರಾ ಮಾಡಬೇಕು ಎಂದು ಎಸ್ಕಾಂಗಳಿಗೆ ಸೂಚನೆ ಹೋಗಿದೆ.
ಶ್ರೀಕಾಂತ್ ಎನ್. ಗೌಡಸಂದ್ರ
ಬೆಂಗಳೂರು(ಆ.13): ಮಳೆಗಾಲ ಇದ್ದರೂ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಸಿದಿರುವ ಹಿನ್ನೆಲೆಯಲ್ಲಿ ಕಳೆದ 5 ದಿನಗಳಿಂದ ಅಘೋಷಿತ ಲೋಡ್‌ಶೆಡ್ಡಿಂಗ್ ಜಾರಿಯಾಗಿದೆ. ಪರಿಣಾಮ ಆ.8ರಿಂದ ರಾಜ್ಯಾದ್ಯಂತ ಐದೂ ಎಸ್ಕಾಂಗಳು ಅನಿವಾರ್ಯವಾಗಿ ಅನಿಯಮಿತ ವಿದ್ಯುತ್ ಕಡಿತದ ಮೊರೆ ಹೋಗಿವೆ. ಇದರ ಪರಿಣಾಮ ರೈತರು ಸೇರಿದಂತೆ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.
- ಹೌದು, ಈ ಬಗ್ಗೆ ‘ಕರ್ಟೈಲ್‌ಮೈಂಟ್’ (ವಿದ್ಯುತ್ ಬಳಕೆ ಮೊಟಕು) ಹೆಸರಿನಲ್ಲಿ ಖುದ್ದು ಕೆಪಿಟಿಸಿಎಲ್ ವತಿಯಿಂದಲೇ ಎಸ್ಕಾಂಗಳಿಗೆ ಗ್ರಿಡ್‌ನಿಂದ ವಿದ್ಯುತ್ ಡ್ರಾ ಮಾಡುವ ಪ್ರಮಾಣಕ್ಕೆ ಮಿತಿ ಹೇರಲಾಗಿದೆ. ಆ.8 ರಿಂದ ಆ.11 ರವರೆಗೆ ವಿದ್ಯುತ್ ಕೊರತೆ ಕಾರಣ ನೀಡಿ ನಿರ್ದಿಷ್ಟ ಸಮಯಗಳಲ್ಲಿ ಇಂತಿಷ್ಟು ಕಡಿಮೆ ವಿದ್ಯುತ್ ಡ್ರಾ ಮಾಡಬೇಕು ಎಂದು ಎಸ್ಕಾಂಗಳಿಗೆ ಸೂಚನೆ ಹೋಗಿದೆ.
Gruha Jyothi Scheme Twist: ಈ ದಿನಾಂಕದೊಳಗೆ ಹಿಂಬಾಕಿ ಪಾವತಿಸದಿದ್ದರೆ ಗೃಹಜ್ಯೋತಿ ಅನ್ವಯ ಆಗೊಲ್ಲ
ಈ ರೀತಿ ಸೂಚನೆ ನೀಡುವ ವೇಳೆ ಆ.8ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು (ಕೆಪಿಟಿಸಿಎಲ್) ‘ಲೋಡ್ ಶೆಡ್ಡಿಂಗ್’ ಮೂಲಕ 3,500 ಮೆ.ವ್ಯಾಟ್‌ನಷ್ಟುಕಡಿಮೆ ವಿದ್ಯುತ್ ಅನ್ನು ಗ್ರಿಡ್‌ನಿಂದ ಡ್ರಾ ಮಾಡುವಂತೆ ಸೂಚನೆ ನೀಡಿದೆ. ತನ್ಮೂಲಕ ಅಧಿಕೃತವಾಗಿ ಲೋಡ್‌ಶೆಡ್ಡಿಂಗ್ ಚಾಲನೆ ನೀಡಿದೆ.
ಬಳಿಕ ಎಚ್ಚೆತ್ತುಕೊಂಡಿರುವ ಕೆಪಿಟಿಸಿಎಲ್ ಆ.9, ಆ.10 ಹಾಗೂ ಆ.11 ರಂದು ವಿದ್ಯುತ್ ಡ್ರಾ ಮಾಡಲು ಎಸ್ಕಾಂಗಳಿಗೆ ಮಿತಿ ಹೇರಿದ್ದರೂ, ಆದೇಶದಲ್ಲಿ ‘ಲೋಡ್‌ಶೆಡ್ಡಿಂಗ್’ ಪದ ಬಳಕೆ ಬದಲು ‘ಕರ್ಟೈಲ್‌ಮೆಂಟ್’ ಎಂಬ ಪದ ಬಳಸುವ ಮೂಲಕ ಇದು ‘ಅನಧಿಕೃತ ಲೋಡ್‌ಶೆಡ್ಡಿಂಗ್’ ಎಂದು ಸಾಬೀತುಪಡಿಸಿದೆ.
ಆ.8 ರಂದು 3,500 ಮೆ.ವ್ಯಾಟ್, ಆ.9ರಂದು 2,800 ಮೆ.ವ್ಯಾಟ್, ಆ.10 ರಂದು 4,750 ಮೆ.ವ್ಯಾಟ್, ಆ.11 ರಂದು 3,200 ಮೆ.ವ್ಯಾಟ್ ನಷ್ಟುವಿದ್ಯುತ್ ಕಡಿಮೆ ಡ್ರಾ ಮಾಡುವಂತೆ ಸ್ಪಷ್ಟನಿರ್ದೇಶನ ನೀಡಿದೆ. ಹೀಗಾಗಿ ಅನಿವಾರ್ಯವಾಗಿ ಎಸ್ಕಾಂಗಳು ಬೇಡಿಕೆ ಇದ್ದಷ್ಟುವಿದ್ಯುತ್ ಪೂರೈಕೆ ಮಾಡದೆ ವಿದ್ಯುತ್ ಕಡಿತದ ಮೊರೆ ಹೋಗಿವೆ. ಪರಿಣಾಮ, ಕಳೆದ ನಾಲ್ಕೈದು ದಿನಗಳಿಂದ ಕೃಷಿ ಪಂಪ್‌ಸೆಟ್‌ಗಳಿಗೆ 3 ಫೇಸ್ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅಲ್ಲದೆ, ನಿರ್ವಹಣೆ, ಕಾಮಗಾರಿಗಳ ಹೆಸರಿನಲ್ಲಿ ವ್ಯಾಪಕವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ವಿದ್ಯುತ್ ಬೇಡಿಕೆ ಹೆಚ್ಚಳ, ಪೂರೈಕೆ ಕುಸಿತ:
ಈ ಅನಧಿಕೃತ ಲೋಡ್‌ಶೆಡ್ಡಿಂಗ್‌ಗೆ ವಿದ್ಯುತ್ ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆಯಾಗಿದ್ದೇ ಕಾರಣ ಎಂದು ಕೆಪಿಟಿಸಿಎಲ್ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಜುಲೈ 3 ಹಾಗೂ 4ನೇ ವಾರದಲ್ಲಿ ಮಳೆಯಾಗಿದ್ದರಿಂದ ವಿದ್ಯುತ್ ಉತ್ಪಾದನೆ ಹೆಚ್ಚಾಗಿ ಬಳಕೆ ಕಡಿಮೆಯಾಗಿತ್ತು. ಪರಿಣಾಮ ಆ.1ರಂದು ರಾಜ್ಯದ ವಿದ್ಯುತ್ ಬೇಡಿಕೆ ಗರಿಷ್ಠ 11,054 ಮೆ.ವ್ಯಾಟ್ ಹಾಗೂ ಕನಿಷ್ಠ 6,259 ಮೆ.ವ್ಯಾಟ್ ಮಾತ್ರ ಇತ್ತು.
ಆದರೆ, ಬಳಿಕ ಮಳೆ ಅಭಾವ, ಕಲ್ಲಿದ್ದಲು ಕೊರತೆಯಿಂದ ಉಷ್ಣ ವಿದ್ಯುತ್ ಉತ್ಪಾದನೆ ಕುಸಿತ, ಪವನ ವಿದ್ಯುತ್ ಉತ್ಪಾದನೆ ಕುಸಿತದಿಂದಾಗಿ ವಿದ್ಯುತ್ ಪೂರೈಕೆ ಕುಸಿತವಾಗಿ ಬೇಡಿಕೆ ಹೆಚ್ಚಾಗಿದೆ. ಆ.5 ರಂದು 13,008 ಮೆ.ವ್ಯಾಟ್‌ನಷ್ಟಿದ್ದ ಗರಿಷ್ಠ ಬೇಡಿಕೆ ಆ.8ಕ್ಕೆ 13,775 ಮೆ.ವ್ಯಾಟ್‌ಗೆ ಹೆಚ್ಚಾಗಿದೆ. ಆ.9ಕ್ಕೆ 14,720 ಮೆ.ವ್ಯಾಟ್ ಗರಿಷ್ಠ ಹಾಗೂ 7,597 ಮೆ.ವ್ಯಾಟ್ ಕನಿಷ್ಠ ಬೇಡಿಕೆ ಉಂಟಾಗಿತ್ತು. ಆ.11ರಂದು ಗರಿಷ್ಠ ಬೇಡಿಕೆ 15,233 ಮೆ.ವ್ಯಾಟ್‌ಗೆ ಹಾಗೂ ಕನಿಷ್ಠ ಬೇಡಿಕೆ 8,215 ಮೆ.ವ್ಯಾಟ್‌ಗೆ ಹೆಚ್ಚಾಗಿದೆ. ಹೀಗಾಗಿ ಅನಿವಾರ್ಯವಾಗಿ ಗ್ರಿಡ್‌ನಿಂದ ಡ್ರಾ ಮಾಡಲು ಎಸ್ಕಾಂಗಳಿಗೆ ಮಿತಿ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ಉತ್ಪಾದನೆ ಕುಸಿತ:
ರಾಜ್ಯದ ವಿವಿಧ ಮೂಲಗಳಿಂದ ಗರಿಷ್ಠ 8,852 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದ್ದರೂ ಜಲವಿದ್ಯುತ್, ಉಷ್ಣ ವಿದ್ಯುತ್ ಸ್ಥಾವರ, ಸೋಲಾರ್ ಸೇರಿದಂತೆ ಎಲ್ಲಾ ಮೂಲಗಳಿಂದಲೂ 3,709 ಮೆ.ವ್ಯಾಟ್ ಮಾತ್ರ ಉತ್ಪಾದನೆಯಾಗುತ್ತಿದೆ.
ಪ್ರಮುಖ ಉಷ್ಣ ವಿದ್ಯುತ್ ಸ್ಥಾವರಗಳಾಗಿರುವ ಆರ್‌ಟಿಪಿಎಸ್, ಬಿಟಿಪಿಎಸ್, ವೈಟಿಪಿಸ್ ಘಟಕಗಳಿಂದ 5,020 ಮೆ.ವ್ಯಾಟ್. ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಇದ್ದರೂ 1,600 ಯುನಿಟ್ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದಕ್ಕೆ ಕಲ್ಲಿದ್ದಲು ಪೂರೈಕೆಯಲ್ಲಿನ ವ್ಯತ್ಯಯವೇ ಪ್ರಮುಖ ಕಾರಣ ಎನ್ನಲಾಗಿದೆ. ಇನ್ನು ಜಲ ವಿದ್ಯುತ್, ಪವನ ವಿದ್ಯುತ್ ಘಟಕಗಳಲ್ಲೂ ವಿದ್ಯುತ್ ಉತ್ಪಾದನೆ ಕುಸಿದಿದೆ.
ಹೀಗಾಗಿ ಐಪಿಪಿಗಳಿಂದ (ಇಂಡಿಪೆಂಡೆಂಟ್ ಪವರ್ ಪ್ರೊಡ್ಯೂಸರ್ಸ್) ಉತ್ಪಾದಿಸಲ್ಪಡುವ ಕೇಂದ್ರದ ಎನ್‌ಸಿಇ (ನಾನ್ ಕನ್ವೆನ್ಷಲ್ ಎನರ್ಜಿ ಪ್ರಾಜೆಕ್ಟ್) ಹಾಗೂ ಎನ್‌ಇಟಿ ಸಿಜಿಎಸ್ ಗ್ರಿಡ್ ಮೂಲವನ್ನೇ ರಾಜ್ಯವು ಅವಲಂಬಿಸುವಂತಾಗಿದೆ. ಹೀಗಾಗಿ ಅನಿವಾರ್ಯವಾಗಿ ಮಿತಿ ಹೇರಲಾಗಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ಇಲಾಖೆಗಳಿಂದಲೇ ಎಸ್ಕಾಂಗಳಿಗೆ ₹12240 ಕೋಟಿ ಬಾಕಿ!
ಸಮಸ್ಯೆ ನಿಜ, ಅಧಿಕೃತ ಲೋಡ್‌ಶೆಡ್ಡಿಂಗ್ ಆಗಿಲ್ಲ
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿ ಪೂರೈಕೆ ಕುಸಿತವಾಗಿದ್ದರಿಂದ ಎರಡು ದಿನ ವಿದ್ಯುತ್ ಅಭಾವ ಸೃಷ್ಟಿಯಾಗಿದ್ದು ಸತ್ಯ. ಆದರೆ ಖಾಸಗಿಯವರಿಂದ ವಿದ್ಯುತ್ ಖರೀದಿ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿದ್ದೇವೆ. ನಾವು ಅನಗತ್ಯ ಬಳಕೆ ತಗ್ಗಿಸಲು ಎಸ್ಕಾಂಗಳಿಗೆ ಕರ್ಟೈಲ್‌ಮೆಂಟ್ ಮಾಡಿದ್ದೆವು. ಇದು ಲೋಡ್‌ಶೆಡ್ಡಿಂಗ್ ಅಲ್ಲ, ಲೋಡ್‌ಶೆಡ್ಡಿಂಗ್ ಮಾಡಿದರೆ ನಾವೇ ಅಧಿಕೃತವಾಗಿ ಹೇಳುತ್ತೇವೆ. ಸದ್ಯಕ್ಕೆ ಅಂತಹ ಸ್ಥಿತಿಯಿಲ್ಲ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಏಕೆ ಈಗಲೇ ಸಮಸ್ಯೆ?
- ರಾಜ್ಯದಲ್ಲಿ ಮಳೆ ಇಳಿಕೆಯಿಂದ ವಿದ್ಯುತ್ ಬೇಡಿಕೆ ಹೆಚ್ಚಳ, ಉತ್ಪಾದನೆ ಕುಸಿತ
- ಆ.1ರಂದು 11 ಸಾವಿರ ಮೆ.ವ್ಯಾ. ಇದ್ದ ವಿದ್ಯುತ್ ಬೇಡಿಕೆ ಆ.11ರಂದು 15200 ಮೆ.ವ್ಯಾ.ಗೆ ಏರಿಕೆ
- ಹೀಗಾಗಿ ಗ್ರಿಡ್‌ನಿಂದ ಎಸ್ಕಾಂಗಳು ವಿದ್ಯುತ್ ಡ್ರಾ ಮಾಡುವ ಪ್ರಮಾಣಕ್ಕೆ ಮಿತಿ ಹೇರಿದ ಕೆಪಿಟಿಸಿಎಲ್
- ‘ಲೋಡ್‌ಶೆಡ್ಡಿಂಗ್’ ಬದಲು ‘ಕರ್ಟೈಲ್‌ಮೆಂಟ್’ ಹೆಸರಲ್ಲಿ ಎಸ್ಕಾಂಗಳಿಂದ ಅನಧಿಕೃತ ವಿದ್ಯುತ್ ಕಡಿತ
