ರೈತರ ಮಕ್ಕಳಿಗೆ ಆರ್ಥಿಕ ನೆರವು ಒದಗಿಸುತ್ತಿರುವ ವಿದ್ಯಾನಿಧಿ ಯೋಜನೆ ನೇಕಾರ, ಟ್ಯಾಕ್ಸಿ ಚಾಲಕರ ಮತ್ತು ಮೀನುಗಾರರ ಮಕ್ಕಳಿಗೂ ವಿಸ್ತರಣೆ, ಎಸ್‌ಸಿ/ಎಸ್‌ಟಿ ಯುವಕರಿಗೆ ಬಾಬು ಜಗಜೀವನ್ ರಾಂ ಹೆಸರಲ್ಲಿ ಸ್ವಯಂ ಉದ್ಯೋಗ ಯೋಜನೆ, ಸ್ತ್ರೀಶಕ್ತಿ ಸಂಘಗಳು ಸ್ವಯಂ ಉದ್ಯೋಗ ಕೈಗೊಳ್ಳಲು ‘ಸ್ತ್ರೀ ಸಾಮರ್ಥ್ಯ’ ಯೋಜನೆ.
ಬೆಂಗಳೂರು (ಜು.29): ರೈತರ ಮಕ್ಕಳಿಗೆ ಆರ್ಥಿಕ ನೆರವು ಒದಗಿಸುತ್ತಿರುವ ವಿದ್ಯಾನಿಧಿ ಯೋಜನೆ ನೇಕಾರ, ಟ್ಯಾಕ್ಸಿ ಚಾಲಕರ ಮತ್ತು ಮೀನುಗಾರರ ಮಕ್ಕಳಿಗೂ ವಿಸ್ತರಣೆ, ಎಸ್‌ಸಿ/ಎಸ್‌ಟಿ ಯುವಕರಿಗೆ ಬಾಬು ಜಗಜೀವನ್ ರಾಂ ಹೆಸರಲ್ಲಿ ಸ್ವಯಂ ಉದ್ಯೋಗ ಯೋಜನೆ, ಸ್ತ್ರೀಶಕ್ತಿ ಸಂಘಗಳು ಸ್ವಯಂ ಉದ್ಯೋಗ ಕೈಗೊಳ್ಳಲು ‘ಸ್ತ್ರೀ ಸಾಮರ್ಥ್ಯ’ ಯೋಜನೆ, ಎಂಟು ಸಾವಿರ ಶಾಲಾ ಕೊಠಡಿಗಳ ನಿರ್ಮಾಣ, ಯುವಕರಿಗೆ ಆರ್ಥಿಕ ನೆರವು ನೀಡಲು ‘ಸ್ವಾಮಿ ವಿವೇಕಾನಂದ ಯುವಶಕ್ತಿ’ ಯೋಜನೆ. ಇವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನೇತೃತ್ವದ ಸರ್ಕಾರ 1 ವರ್ಷದ ಅಧಿಕಾರವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ನೀಡಿದ ಹೊಸ ಯೋಜನೆಗಳ ರೂಪದ 5 ಕೊಡುಗೆಗಳು.
ಇದೇ ವೇಳೆ ಬೊಮ್ಮಾಯಿ ಕಳೆದ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿದ್ದ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಸೇರಿದವರ ಮನೆಗಳಿಗೆ 75 ಯೂನಿಟ್ ಉಚಿತ ವಿದ್ಯುತ್ ಯೋಜನೆಯಡಿ ಡಿಬಿಟಿ ವರ್ಗಾವಣೆ, ಬಜೆಟ್‌ನಲ್ಲಿ ಘೋಷಿಸಿದ್ದ ‘ಪುಣ್ಯಕೋಟಿ ದತ್ತು ಯೋಜನೆ’ಯ ವೆಬ್‌ಸೈಟ್ ಲೋಕಾರ್ಪಣೆ ಹಾಗೂ ರಾಜ್ಯದ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸುವ ಯೋಜನೆಗೂ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಯಿಂದಾಗಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮತ್ತು ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂಪುಟದ ಸಹೋದ್ಯೋಗಿಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಹೊಸ ಯೋಜನೆಗಳ ಕುರಿತು ಮಾಹಿತಿ ಒದಗಿಸಿದರು.
ಸಿಎಂ ಬೊಮ್ಮಾಯಿ ತುರ್ತು ಸುದ್ದಿಗೋಷ್ಠಿ: ಬಿಜೆಪಿ ಜನೋತ್ಸವ ಕಾರ್ಯಕ್ರಮ ರದ್ದು
1.ವಿದ್ಯಾನಿಧಿ ಯೋಜನೆ ವಿಸ್ತರಣೆ: ಕಳೆದ ವರ್ಷ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಏಕಾಂಗಿಯಾಗಿ ಸಂಪುಟ ಸಭೆ ನಡೆಸಿ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಘೋಷಿಸಿದ್ದರು. ಇದೀಗ ಆ ಯೋಜನೆಯನ್ನು ನೇಕಾರ, ಟ್ಯಾಕ್ಸಿ ಚಾಲಕರು ಮತ್ತು ಮೀನುಗಾರರ ಮಕ್ಕಳಿಗೂ ವಿಸ್ತರಿಸಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಿಂದ 10-12 ಸಾವಿರ ಮಕ್ಕಳಿಗೆ ಲಾಭವಾಗಲಿದೆ. 50 ಸಾವಿರ ಟ್ಯಾಕ್ಸಿ ಚಾಲಕರ ಮಕ್ಕಳಿಗೂ ಯೋಜನೆಯ ಪ್ರಯೋಜನವಾಗಲಿದೆ. ಅಲ್ಲದೇ, ಮೀನುಗಾರರ ಮಕ್ಕಳಿಗೂ ಯೋಜನೆ ಅನ್ವಯವಾಗಲಿದೆ. ಗುರುವಾರದಿಂದ ಯೋಜನೆ ಚಾಲನೆಯಾಗಿದ್ದು, ಅಗತ್ಯ ಅನುದಾನವನ್ನು ಸರ್ಕಾರ ಒದಗಿಸಿದೆ.
2.ಎಸ್‌ಸಿ, ಎಸ್‌ಟಿ ಹೆಸರಲ್ಲಿ ಸ್ವಯಂ ಉದ್ಯೋಗ: ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಂ ಹೆಸರಿನಲ್ಲಿ ಸ್ವಯಂ ಉದ್ಯೋಗ ಯೋಜನೆ ಘೋಷಿಸಲಾಗಿದೆ. ಈ ಯೋಜನೆಯ ಅನ್ವಯ ಪ್ರತಿ ಕ್ಷೇತ್ರದಲ್ಲಿ 100 ಎಸ್‌ಸಿ, ಎಸ್‌ಟಿ ಯುವಕರಿಗೆ ಸ್ವಯಂ ಉದ್ಯೋಗ ನೀಡಲಾಗುತ್ತದೆ.
3.ಸ್ತ್ರೀ ಸಾಮರ್ಥ್ಯ ಯೋಜನೆ: ಸ್ತ್ರೀಶಕ್ತಿ ಸಂಘಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಉತ್ತೇಜನ ನೀಡುವ ನಿಟ್ಟಿನಲ್ಲಿ 1.50 ಲಕ್ಷ ರು. ನೀಡುವ ಜತೆಗೆ ಸುಲಭವಾಗಿ ಸಾಲಸೌಲಭ್ಯ ಒದಗಿಸಲು ಆ್ಯಂಕರ್ ಬ್ಯಾಂಕ್ ಜೋಡಣೆ, ತರಬೇತಿ, ಉತ್ಪನ್ನಗಳಿಗೆ ಮಾರುಕಟ್ಟೆಸೌಲಭ್ಯ ನೀಡುವ ಸ್ತ್ರೀ ಸಾಮರ್ಥ್ಯ ಯೋಜನೆಗೆ ಚಾಲನೆ ನೀಡಲಾಗಿದೆ. 5 ಲಕ್ಷ ಮಹಿಳೆಯರ ಸ್ವಾವಲಂಬನೆಗೆ ‘ಎಂಡ್ ಟು ಎಂಡ್’ ನೆರವು ನೀಡಲಾಗುತ್ತಿದೆ.
4. 800 ಶಾಲಾ ಕೊಠಡಿ ನಿರ್ಮಾಣ: ಶಿಕ್ಷಣ ಮತ್ತು ಅದರ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ‘ವಿವೇಕ’ ಯೋಜನೆಯಡಿ ಮೊದಲ ಬಾರಿಗೆ 800 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
5.ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ: ರಾಜ್ಯದ 28 ಸಾವಿರ ಗ್ರಾಮಗಳಲ್ಲಿ ತಲಾ ಒಂದು ವಿವೇಕಾನಂದ ಸ್ವಸಹಾಯ ಸಂಘಗಳನ್ನು ರಚಿಸಿ, ಯುವಕರಿಗೂ ಆರ್ಥಿಕ ನೆರವು, ಬ್ಯಾಂಕ್ ವ್ಯವಸ್ಥೆ, ತರಬೇತಿ, ಉತ್ಪನ್ನಗಳಿಗೆ ಮಾರುಕಟ್ಟೆವ್ಯವಸ್ಥೆ ಕಲ್ಪಿಸುವ ಯೋಜನೆ ಇದಾಗಿದೆ. ಇದರಿಂದ 5 ಲಕ್ಷ ಯುವಕರು ಸ್ವಯಂ ಉದ್ಯೋಗದಲ್ಲಿ ತೊಡಗುವ ಅವಕಾಶ ಕಲ್ಪಿಸಲಾಗುತ್ತದೆ.
ಇತರ ಯೋಜನೆಗಳು: ಇದೇ ವೇಳೆ ಬೊಮ್ಮಾಯಿ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸುವ ಯೋಜನೆಗೆ ಹಸಿರು ನಿಶಾನೆ ನೀಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ 71 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಜತೆಗೆ ಎಸ್‌ಸಿ/ಎಸ್‌ಟಿ ಬಡಕುಟುಂಬಗಳಿಗೆ 75 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯಡಿ ಡಿಬಿಟಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಸುಮಾರು 25 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದಕ್ಕಾಗಿ 700 ಕೋಟಿ ರು. ಒದಗಿಸಲಾಗಿದೆ.
SC-ST ಗ್ರಾಹಕರಿಗೆ 75 ಯೂನಿಟ್ ವಿದ್ಯುತ್ ಉಚಿತ: ಸರ್ಕಾರದ ವಿನೂತನ ಯೋಜನೆ
ಗೋವುಗಳ ರಕ್ಷಣೆಯಲ್ಲಿ ಜನರ ಪಾಲುದಾರಿಕೆಯನ್ನು ಉತ್ತೇಜಿಸಲು ಪುಣ್ಯಕೋಟಿ ದತ್ತು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ವೆಬ್‌ಸೈಟ್‌ನ ಲೋಕಾರ್ಪಣೆ ಮಾಡಲಾಗಿದ್ದು, ಪ್ರತಿ ವ್ಯಕ್ತಿಯೂ ವಾರ್ಷಿಕ 11 ಸಾವಿರ ರು. ಪಾವತಿಸಿ 1 ಗೋವಿನ ಒಂದು ವರ್ಷದ ನಿರ್ವಹಣೆ ಮಾಡಬಹುದಾಗಿದೆ. ಅವರೇ ಗೋವುಗಳನ್ನು ದತ್ತು ತೆಗೆದುಕೊಳ್ಳಬಹುದು ಅಥವಾ 11 ಸಾವಿರ ರು. ಮೊತ್ತ ಪಾವತಿಸಿದರೆ ಸರ್ಕಾರದ ಗೋ ಶಾಲೆಗಳಲ್ಲಿ ಗೋವು ರಕ್ಷಣೆಗೆ ಈ ಮೊತ್ತವನ್ನು ಬಳಸಿಕೊಳ್ಳಲಾಗುತ್ತದೆ.
