- ಸರ್ಕಾರದ ಇ-ಇಂಡೆಂಟ್ ವಿರುದ್ಧ ಸಿಡಿದೆದ್ದ ವೈನ್ ಸ್ಟೋರ್ ಮಾಲಿಕರು- ಬೇರೆ ಬೇರೆ ವಿಭಾಗವಾರು ಇಂದಿನಿಂದ ಮದ್ಯ ಖರೀದಿ ನಿಲ್ಲಿಸಿ ಪ್ರತಿಭಟನೆ
ಬೆಂಗಳೂರು(ಮೇ.06): ಕರ್ನಾಟಕ ರಾಜ್ಯ ಪಾನೀಯ ನಿಗಮದಿಂದ (ಕೆಎಸ್‌ಬಿಸಿಎಲ್) ಪ್ರಾರಂಭಿಸಿರುವ ‘ಇ-ಇಂಡೆಂಟಿಂಗ್’ ವ್ಯವಸ್ಥೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ಗಳ ಒಕ್ಕೂಟವು ಒಂದು ದಿನ ಕೆಎಸ್‌ಬಿಸಿಎಲ್‌ನಿಂದ ಮದ್ಯ ಖರೀದಿ ಮಾಡದಿರಲು ನಿರ್ಧರಿಸಿದೆ.
ರಾಜ್ಯಾದ್ಯಂತ ಎಲ್ಲಾ ಮದ್ಯ ಮಳಿಗೆಗಳಿಂದ ಒಂದೇ ಸಲ ಮದ್ಯ ಖರೀದಿ ನಿಲ್ಲಿಸದೆ ಶುಕ್ರವಾರದಿಂದ ವಿಭಾಗವಾರು ಖರೀದಿ ಬಹಿಷ್ಕಾರ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.
ಮೇ 6ರಂದು ಶುಕ್ರವಾರ ಕಲಬುರಗಿ ವಿಭಾಗದ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಎಲ್ಲಾ ರೀತಿಯ ಮದ್ಯ ಮಳಿಗೆಯವರು ಕೆಎಸ್‌ಬಿಸಿಎಲ್ ಡಿಪೋಗಳಲ್ಲಿ ಮದ್ಯ ಖರೀದಿ ಮಾಡದೆ ಪ್ರತಿಭಟಿಸಬೇಕು ಎಂದು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಸೂಚನೆ ನೀಡಿದೆ.
ಇನ್ನು ಮೇ 10ರಂದು ಮಂಗಳವಾರ, ಬೆಳಗಾವಿ ವಿಭಾಗದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ ಹಾಗೂ ಹೊಸಪೇಟೆ ವಿಭಾಗದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ , ಮೇ 12ರಂದು ಗುರುವಾರ ಮೈಸೂರು ಹಾಗೂ ಮಂಗಳೂರು ವಿಭಾಗಗಳಲ್ಲಿ, ಮೇ 17ರಂದು ಬೆಂಗಳೂರು ವಿಭಾಗದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳ ಕೆಎಸ್‌ಬಿಸಿಎಲ್ ಡಿಪೋಗಳಲ್ಲಿ, ಮೇ 19ರಂದು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಡಿಪೋಗಳಿಂದ ಮದ್ಯ ಹಾಗೂ ಬಿಯರ್ ಖರೀದಿ ಮಾಡದಂತೆ ಸೂಚಿಸಲಾಗಿದೆ.
ಈ ಬಗ್ಗೆ ಕನ್ನಡಪ್ರಭ ಜತೆ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ, ಹೊಸ ‘ಇ-ಇಂಡೆಂಟಿಂಗ್’ ವ್ಯವಸ್ಥೆಯಲ್ಲಿ ಸಾಕಷ್ಟುಲೋಪಗಳಿವೆ. ಅವುಗಳನ್ನು ಬಗೆಹರಿಸುವವರೆಗೂ ಹಳೆಯ ವ್ಯವಸ್ಥೆ ಮುಂದುವರೆಸುವಂತೆ ಮುಖ್ಯಮಂತ್ರಿಗಳಿಂದ ಹಿಡಿದು ಅಬಕಾರಿ ಆಯುಕ್ತರವರೆಗೆ ಎಲ್ಲರಿಗೂ ಪತ್ರ ಬರೆದಿದ್ದರೂ ಕನಿಷ್ಠ ಮಾತುಕತೆಗೂ ಕರೆದಿಲ್ಲ.
ಹೀಗಾಗಿ ಕನಿಷ್ಠ 3 ತಿಂಗಳು ಹಳೆಯ ವ್ಯವಸ್ಥೆ ಮುಂದುವರೆಸಬೇಕು. ಈ ವೇಳೆಗೆ ಹೊಸ ವ್ಯವಸ್ಥೆಯಲ್ಲಿನ ಲೋಪ ಸರಿಪಡಿಸಬೇಕು. ಇ-ಇಂಡೆಂಟ್‌ನಲ್ಲಿ ರಾತ್ರಿ 9ರಿಂದ ಬೆಳಗ್ಗೆ 9 ಗಂಟೆವರೆಗೆ ಮಾತ್ರ ಇಂಡೆಂಟ್ ಸಲ್ಲಿಸಲು ಅವಕಾಶ ನೀಡಿದ್ದು, ಇದನ್ನು ಬದಲಿಸಬೇಕು. ಬ್ರ್ಯಾಂಡ್ ಕೋಡ್‌ಗಳಲ್ಲಿ ಸಮಸ್ಯೆಯಾಗುತ್ತಿದೆ. ಮದ್ಯ ಹಾಗೂ ಬಿಯರ್ ಹಂಚಿಕೆ (ಅನುಪಾತ) ಸರಿಯಿಲ್ಲ. ಸನ್ನದುದಾರರಿಗೆ ಹಾಗೂ ಡಿಪೋ ವ್ಯವಸ್ಥಾಪಕರಿಗೆ ಎಡಿಟಿಂಗ್‌ಗೆ ಅವಕಾಶವಿಲ್ಲ. ಈ ಎಲ್ಲಾ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಮಾ.29ರಂದು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಅಬಕಾರಿ ಸಚಿವರಿಗೆ, ಕೆಎಸ್‌ಬಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ಅಬಕಾರಿ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಅಲ್ಲದೆ ಒಕ್ಕೂಟದ ಸಹಯೋಗದಲ್ಲಿರುವ ಎಲ್ಲಾ ಜಿಲ್ಲಾ ಸಂಘದವರು ಡಿಪೋ ಮ್ಯಾನೇಜರ್‌ಗಳ ಮೂಲಕ ವ್ಯವಸ್ಥಾಪಕ ನಿರ್ದೇಶಕರಿಗೆ ಏ.6ರಂದು ಮತ್ತೊಮ್ಮೆ ಮನವಿ ಸಲ್ಲಿಸಲಾಗಿತ್ತು. ಇನ್ನು ಏ.26ರಂದು ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಹೀಗಿದ್ದರೂ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಹೋರಾಟದ ಹಾದಿ ಹಿಡಿದಿದ್ದೇವೆ ಎಂದರು.
ಒಂದು ದಿನ ಮಾತ್ರ ಖರೀದಿ ಸ್ಥಗಿತ
ಸಾಂಕೇತಿಕವಾಗಿ ವಿಭಾಗವಾರು ಒಂದು ದಿನದ ಮಟ್ಟಿಗೆ ಮಾತ್ರ ಖರೀದಿ ಸ್ಥಗಿತಗೊಳಿಸುತ್ತಿದ್ದೇವೆ. ಹೀಗಾಗಿ ನಮ್ಮ ಬಳಿ ಲಭ್ಯವಿರುವ ದಾಸ್ತಾನಿನಲ್ಲಿ ಗ್ರಾಹಕರಿಗೆ ಮದ್ಯ ದೊರೆಯಲಿದೆ. ಗ್ರಾಹಕರಿಗೆ ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ - ಬಿ. ಗೋವಿಂದರಾಜ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯನ್‌ಗಳ ಒಕ್ಕೂಟ
