Lingayats Veerashaivas unite for OBC reservation: ಹಾವೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಚನಾನಂದ ಸ್ವಾಮೀಜಿ, ಕೇಂದ್ರದ ಓಬಿಸಿ ಮೀಸಲಾತಿ ಪಡೆಯಲು ರಾಜ್ಯದ ಎಲ್ಲಾ ವೀರಶೈವ ಲಿಂಗಾಯತರು ಒಂದಾಗಬೇಕು ಎಂದು ಕರೆ ನೀಡಿದರು. 

ಹಾವೇರಿ (ನ.15): ಕೇಂದ್ರದ ಓಬಿಸಿ ಮೀಸಲಾತಿ ಸಿಗಬೇಕಾದರೆ ರಾಜ್ಯದಲ್ಲಿರುವ ಎಲ್ಲಾ ವೀರಶೈವ ಲಿಂಗಾಯತರು ಒಂದಾಗಬೇಕು ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಕರೆ ನೀಡಿದರು.

 ನಗರದಲ್ಲಿ ಶುಕ್ರವಾರ ಕಿತ್ತೂರು ಚನ್ನಮ್ಮನ 201ನೇ ವಿಜಯೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. 

ಓಬಿಸಿ ಮೀಸಲಿಗಾಗಿ ವೀರಶೈವ-ಲಿಂಗಾಯತ ಒಂದಾಗಬೇಕು:

ಕೇವಲ ಪಂಚಮಸಾಲಿ ಲಿಂಗಾಯತರಷ್ಟೇಯಲ್ಲ, ವೀರಶೈವ ಲಿಂಗಾಯತರಿಗೆ ಕೇಂದ್ರದ ಓಬಿಸಿ ಮೀಸಲಾತಿ ಸಿಗಬೇಕಾದರೆ ರಾಜ್ಯದ ಎಲ್ಲ ವೀರಶೈವ ಲಿಂಗಾಯತರು ನಾವೆಲ್ಲಾ ಒಂದು ಎಂಬ ಸಂದೇಶ ಸಾರಬೇಕು. ಇಲ್ಲದಿದ್ದರೆ ನಮ್ಮ ಅಸ್ತಿತ್ವವೇ ಇರುವುದಿಲ್ಲ. ನಮ್ಮ ಮನೆ, ನಮ್ಮ ಸಮಾಜ ಎಲ್ಲವೂ ಇರಲಿ. ಆದರೆ ಒಟ್ಟು ಸಮಾಜ ಎಂದು ಬಂದಾಗ ಎಲ್ಲಾ ವೀರಶೈವ ಲಿಂಗಾಯತರು ಒಂದಾಗಬೇಕು ಎಂದರು.

ಮೀಸಲಿಗಾಗಿ ಕಾನೂನಾತ್ಮಕ ಹೋರಾಟ:

ಈಗಾಗಲೇ ಮೀಸಲಾತಿ ಸಲುವಾಗಿ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದೇವೆ. ಕೇಂದ್ರದ ಹಿಂದುಳಿದ ವರ್ಗಗಳ ಆಯೋಗದ ಪತ್ರ ರಾಜ್ಯದ ಕ್ಯಾಬಿನೆಟ್‌ಗೆ ಬಂದಿದೆ. ಸರ್ಕಾರ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ಸಮಾಜಕ್ಕೆ ಓಬಿಸಿ ಮೀಸಲಾತಿ ಸಿಗುತ್ತದೆ. ಕೇಂದ್ರದ ಓಬಿಸಿ ನಮ್ಮ ಸಮಾಜಕ್ಕೆ ಸಿಕ್ಕರೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ನೌಕರರಾಗುತ್ತಾರೆ. ಶೇ.27ರಷ್ಟು ಮೀಸಲು ಸಿಗುತ್ತದೆ. ಕರ್ನಾಟಕದಲ್ಲಿ ಬಹುಸಂಖ್ಯಾತರಿರುವ ಜನಕ್ಕೆ ಓಬಿಸಿ ಮೀಸಲು ಬೇಕು ಎಂದರು.