ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಅತ್ಯಾ*ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನಟಿ ರಮ್ಯಾ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಅತ್ಯಾ*ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಈ ಕುರಿತು ಮಾಜಿ ಸಂಸದೆ, ನಟಿ ರಮ್ಯಾ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಎಕ್ಸ್ ಖಾತೆಯಲ್ಲಿ ಕಾನೂನು ಎಲ್ಲರಿಗೂ ಒಂದೇ. ಮಹಿಳೆಯರ ಮೇಲಿನ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಶುಕ್ರವಾರ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ ಸಂದರ್ಭದಲ್ಲಿಯೂ ರಮ್ಯಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಮಾಜಿ ಪ್ರಧಾನಿ ದೇವೇಗೌಡ ಕಣ್ಣೀರು
ಮೊಮ್ಮಗ ಪ್ರಜ್ವಲ್ ಪ್ರಕರಣದ ತೀರ್ಪು ಪ್ರಕಟವಾಗುವ ಹಿನ್ನೆಲೆ ಮಾಜಿ ಪ್ರಧಾನಿಗಳಾದ ಹೆಚ್‌ಡಿ ದೇವೇಗೌಡರು ಮಧ್ಯಾಹ್ನದಿಂದಲೇ ಟಿವಿ ನೋಡುತ್ತಾ ಕುಳಿತಿದ್ದರಂತೆ. ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ದೇವೇಗೌಡರು ಕಣ್ಣೀರು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಪ್ರಜ್ವಲ್ ಪೋಷಕರಾದ ಹೆಚ್‌ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಹ ಆಘಾತಕ್ಕೊಳಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯಾವ ಸೆಕ್ಷನ್‌ಗೆ ಎಷ್ಟು ದಂಡ?
- ಐಪಿಸಿ 376(2)(k), ಜೀವಾವಧಿ, 5 ಲಕ್ಷ
- ಐಪಿಸಿ 376(2)(n), - ಜೀವಾವಧಿ, 5 ಲಕ್ಷ
- ಐಪಿಸಿ 354(a) - 3 ವರ್ಷ ಕಠಿಣ ಜೈಲು, 25 ಸಾವಿರ ದಂಡ
- ಐಪಿಸಿ 354(b) - 7 ವರ್ಷ ಕಠಿಣ ಜೈಲು, 50ಸಾವಿರ ದಂಡ, ದಂಡ ಪಾವತಿಸದಿದ್ದಲ್ಲಿ 6 ತಿಂಗಳು ಸರಳ ಜೈಲು
- ಐಪಿಸಿ 354(c) - 3 ವರ್ಷ ಕಠಿಣ ಜೈಲು
- ಐಪಿಸಿ 506 - 2 ವರ್ಷ ಕಠಿಣ ಜೈಲು 10 ಸಾವಿರ ದಂಡ
- ಐಪಿಸಿ 201 - 3 ವರ್ಷ ಕಠಿಣ ಜೈಲಿ, 25 ಸಾವಿರ ದಂಡ
- IT ACt 66(E) - 3 ವರ್ಷ ಕಠಿಣ, 25 ಸಾವಿರ ದಂಡ
ಕೆ ಆರ್ ನಗರದ ಮನೆಗೆಲಸದವಳ ಮೇಲಿನ ಅತ್ಯಾ*ಚಾರ ಪ್ರಕರಣದ ವಿಚಾರಣೆ ನಡೆಸಿ ಶುಕ್ರವಾರ ದೋಷಿ ಎಂದು ಪ್ರಕಟಿಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಮಧ್ಯಾಹ್ನ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ. ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಈ ಆದೇಶ ಪ್ರಕಟಿಸಿದ್ದಾರೆ.
