ಬೆಂಗಳೂರು (ಅ.20):  ನಗರ, ಪಟ್ಟಣ ಹಾಗೂ ಹಳ್ಳಿಗಳಿಂದ 200 ಮೀಟರ್‌ ದೂರದಲ್ಲಿ ಗೋಶಾಲೆ ಹಾಗೂ ಡೈರಿ ಫಾರ್ಮ್ಗ ಳನ್ನು ಸ್ಥಾಪಿಸಬೇಕು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿರುವ ಜಾಹೀರಾತು ರೈತಾಪಿ ವರ್ಗದ ಜನರಿಗೆ ಆಘಾತ ನೀಡಿದೆ.

ರಾಷ್ಟ್ರೀಯ ಹಸಿರು ನ್ಯಾಯಪೀಠದ (ಎನ್‌ಜಿಟಿ) ಆದೇಶದ ಅನುಸಾರವಾಗಿ ಎಲ್ಲಾ ಡೈರಿ ಫಾಮ್‌ರ್‍ಗಳು ಹಾಗೂ ಗೋಶಾಲೆಗಳನ್ನು ಸ್ಥಾಪಿಸುವುದಕ್ಕಾಗಿ ಸಮ್ಮತಿ ಪತ್ರಗಳನ್ನು ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974 ಮತ್ತು ವಾಯು ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1981ರ ಅಡಿಯಲ್ಲಿ ಪಡೆಯಬೇಕಿದೆ. ಕೈಗಾರಿಕೆಗಳ ವರ್ಗೀಕರಣದ ಪ್ರಕಾರ, ಡೈರಿ ಫಾಮ್‌ರ್‍ಗಳನ್ನು ಕಿತ್ತಳೆ ವರ್ಗಕ್ಕೆ ಮತ್ತು ಗೋಶಾಲೆಗಳನ್ನು ಹಸಿರು ವರ್ಗಕ್ಕೆ ಸೇರಿಸಲಾಗಿದೆ. ಹೀಗಾಗಿ, ಎಲ್ಲಾ ಡೈರಿ ಫಾಮ್‌ರ್‍ಗಳು ಮಂಡಳಿಯಿಂದ ಒಪ್ಪಿಗೆ ಪಡೆಯುವಂತೆ ನಿರ್ದೇಶಿಸಿದೆ. ಮಂಡಳಿಯ ಈ ಜಾಹೀರಾತು ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆ ನಡೆಸುತ್ತಿರುವ ರೈತಾಪಿ ಕುಟುಂಬಗಳಿಗೆ ಸಮಸ್ಯೆಯಾಗಿ ಕಾಡುವ ಸಾಧ್ಯತೆಗಳಿವೆ.

ಮೋದಿ ಬಿಡುಗಡೆ ಮಾಡಿದ 17 ಸುಪರ್ ತಳಿಗಳು, ಏನಿದರ ವಿಶೇಷ?

ಜಲಾಶಯ, ಕಾಲುವೆ ಸೇರಿದಂತೆ ಜಲಮೂಲಗಳಿಂದ ಸಾಕಷ್ಟುದೂರದಲ್ಲಿ ಡೈರಿ ಫಾಮ್‌ರ್‍ಗಳಿರಬೇಕು. ರಸ್ತೆ ಅಪಘಾತ, ದುರ್ವಾಸನೆ ತಡೆಯಲು ರಾಷ್ಟ್ರೀಯ ಹೆದ್ದಾರಿಗಳಿಂದ 200 ಮೀ. ಹಾಗೂ ರಾಜ್ಯ ಹೆದ್ದಾರಿಗಳಿಂದ 100 ಮೀ. ಅಂತರ ಕಾಯ್ದುಕೊಳ್ಳಬೇಕು. ಘನತ್ಯಾಜ್ಯ ವಿಲೇವಾರಿಗೆ ಎಸ್‌ಟಿಪಿ ಘಟಕ ಅಳವಡಿಸಿಕೊಳ್ಳಬೇಕು ಮತ್ತು ಜಾನುವಾರುಗಳ ಆರೋಗ್ಯ ತಪಾಸಣೆಗೆ ಬಳಸುವ ಇಂಜೆಕ್ಷನ್‌, ಸಿರೀಂಜ್‌ ಸಹಿತ ವೈದ್ಯಕೀಯ ಉಪಕರಣಗಳ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಜಾಹೀರಾತಿನಲ್ಲಿರುವ ಮಾರ್ಗಸೂಚಿ ತಿಳಿಸಿದೆ.

ಇದು ಅಂತಿಮ ಆದೇಶವಲ್ಲ:  ಈ ಕುರಿತು ಮಾತನಾಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು, ಗೋಶಾಲೆ ಮತ್ತು ಡೈರಿ ಫಾರಂಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಜಾಹೀರಾತು ಪ್ರಕಟಿಸಲಾಗಿದೆ. ಇದರಿಂದ ರೈತಾಪಿ ವರ್ಗದ ಜನರು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ನಡೆಸುವಂತಹ ಜನರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶದ ವಿವಿಧ ತಳಿಗಳ ಹಸುಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಗೋಶಾಲೆ ಮತ್ತು ಡೈರಿ ಫಾರಂಗಳನ್ನು ನಡೆಸುತ್ತಾರೆ. ಈಗ ನಾವು ಎನ್‌ಜಿಟಿ ಆದೇಶದ ಪ್ರಕಾರ ಜಾಹೀರಾತು ಮಾತ್ರ ಪ್ರಕಟಿಸಿದ್ದೇವೆ. ರಾಜ್ಯದಲ್ಲಿ ಈ ನಿಯಮ ಜಾರಿಗೂ ಮುನ್ನ ಗೋಶಾಲೆ ಯಾವ ರೀತಿಯಲ್ಲಿರಬೇಕು ಎಂಬುದರ ಬಗ್ಗೆ ಪಶು ವೈದ್ಯಕೀಯ ಇಲಾಖೆಯೊಂದಿಗೆ ಚರ್ಚಿಸಿ ನಿಯಮಗಳನ್ನು ರೂಪಿಸಲಾಗುತ್ತದೆ. ನಿಯಮಗಳನ್ನು ರೂಪಿಸಿದ ಬಳಿಕ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಬಳಿಕವಷ್ಟೇ ಅಂತಿಮ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.