ಲೋಕಾಯುಕ್ತಕ್ಕೆ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸುವ ಮುನ್ನ ತಮ್ಮ ಪೂರ್ವಾನುಮತಿ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಅವರು, ಸಶಕ್ತ, ಪ್ರಾಮಾಣಿಕ ಹಾಗೂ ದಕ್ಷತೆ ಮಾತ್ರವಲ್ಲದೆ ದೈಹಿಕ ಆರೋಗ್ಯವಂತ ಅಧಿಕಾರಿಗಳನ್ನು ನಿಯೋಜಿಸುವಂತೆ ಕೂಡ ಸಲಹೆ ನೀಡಿದ್ದಾರೆ.

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು (ಆ.26): ಲೋಕಾಯುಕ್ತಕ್ಕೆ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸುವ ಮುನ್ನ ತಮ್ಮ ಪೂರ್ವಾನುಮತಿ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಅವರು, ಸಶಕ್ತ, ಪ್ರಾಮಾಣಿಕ ಹಾಗೂ ದಕ್ಷತೆ ಮಾತ್ರವಲ್ಲದೆ ದೈಹಿಕ ಆರೋಗ್ಯವಂತ ಅಧಿಕಾರಿಗಳನ್ನು ನಿಯೋಜಿಸುವಂತೆ ಕೂಡ ಸಲಹೆ ನೀಡಿದ್ದಾರೆ.

ಗುರುವಾರ ‘ಕನ್ನಡಪ್ರಭ’ ಜತೆ ಮಾತನಾಡಿದ ಲೋಕಾಯುಕ್ತರು, ಲೋಕಾಯುಕ್ತಕ್ಕೆ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸುವ ಮುನ್ನ ಲೋಕಾಯುಕ್ತರ ಪೂವಾರ್ನುಮತಿ ಪಡೆಯುವಂತೆ ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ. ಅದರಂತೆ ಅಧಿಕಾರಿಗಳ ನಿಯೋಜಿಸುವ ಮುನ್ನ ಲೋಕಾಯುಕ್ತರನ್ನು ಸಂಪರ್ಕಿಸುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ. ಲೋಕಾಯುಕ್ತಕ್ಕೆ ಒಳ್ಳೆಯ ಅಧಿಕಾರಿಗಳ ಅಗತ್ಯವಿದೆ. ಇಲ್ಲಿ ಸವಾಲಿನ ಕೆಲಸಗಳು ಮಾಡಬೇಕಾಗುತ್ತದೆ. ಹಾಗಾಗಿ ಸಶಕ್ತ, ಸದೃಢ, ದಕ್ಷ ಹಾಗೂ ಪ್ರಾಮಾಣಿಕ ಜೊತೆ ದೈಹಿಕ ಆರೋಗ್ಯವಂತ ಅಧಿಕಾರಿಗಳಿಗೆ ಆದ್ಯತೆ ನೀಡುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಹೇಳಿದರು.

ಲೋಕಾಯುಕ್ತಕ್ಕೆ ಬಲ: ಎಸಿಬಿ ರದ್ದತಿ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಇಲ್ಲ

ಹೈಕೋರ್ಟ್‌ ಆದೇಶದಂತೆ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಲೋಕಾಯುಕ್ತ ಪೊಲೀಸರು ಸಿದ್ಧರಾಗಿದ್ದಾರೆ. ಈಗಾಗಲೇ ಮುಂದಿನ ಕಾನೂನು ಕ್ರಮಗಳ ಕುರಿತು ಲೋಕಾಯುಕ್ತ ಪೊಲೀಸ್‌ ವಿಭಾಗದ ಎಡಿಜಿಪಿ ಜತೆ ಸಮಾಲೋಚಿಸಿದ್ದೇನೆ. ಅಲ್ಲದೆ ತನಿಖೆ ವಿಚಾರವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆ ಕೂಡ ಎಡಿಜಿಪಿ ಸಭೆ ನಡೆಸಿದ್ದಾರೆ ಎಂದು ಹೇಳಿದರು.

ಕೈ ಮುಗೀತೇನೆ, ನನ್ನ ವಿರುದ್ಧ ಕೇಸ್‌ ಹಾಕಿ: ಕೆಂಪಣ್ಣ

ಭ್ರಷ್ಟಾಚಾರದ ಬಗ್ಗೆ ಜನರು ದೂರು ಸಲ್ಲಿಸಿದ ತಕ್ಷಣವೇ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಆದರೆ ಜನರಿಂದ ದೂರುಗಳು ಸಲ್ಲಿಕೆಯಾಗಿಲ್ಲ. ಲೋಕಾಯುಕ್ತಕ್ಕೆ ನೇರವಾಗಿ ಆಗಮಿಸಿ ಸಾರ್ವಜನಿಕರು ದೂರು ಸಲ್ಲಿಸಬಹುದು. ಹೈಕೋರ್ಟ್‌ ಆದೇಶದ ನಂತರದ ದಿನಾಂಕದಿಂದ ದೂರುಗಳನ್ನು ಮಾತ್ರ ಪರಿಗಣಿಸಿ ಎಫ್‌ಐಆರ್‌ ದಾಖಲಿಸಲಾಗುತ್ತದೆ. ಈ ಹಿಂದೆ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ಮನವಿಗಳನ್ನು ದೂರುಗಳಾಗಿ ಪರಿಗಣಿಸುವುದಿಲ್ಲ ಎಂದು ನ್ಯಾ.ಪಾಟೀಲ್‌ ಸ್ಪಷ್ಟಪಡಿಸಿದರು.