Asianet Suvarna News Asianet Suvarna News

ಕಾಫಿನಾಡಲ್ಲಿ ರಾಜ್ಯದಲ್ಲೇ ಅತಿದೊಡ್ಡ ಭೂ ಹಗರಣ; ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಮಂಜೂರು!

ರಾಜ್ಯದಲ್ಲೇ ಅತೀ ದೊಡ್ಡ ಲ್ಯಾಂಡ್ ಸ್ಕ್ಯಾಂಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಸಾಕ್ಷಿಯಾಗಿದೆ. ಕಡೂರು ಹಾಗೂ ಮೂಡಿಗೆರೆ ತಾಲೂಕಿನ ಈ ಲ್ಯಾಂಡ್ ಸ್ಕ್ಯಾಂ ರಾಜ್ಯದಲ್ಲೇ ದೊಡ್ಡದ್ದು. ಕಡೂರು ತಹಶೀಲ್ದಾರ್  ಆಗಿದ್ದ ಉಮೇಶ್ 3500 ಎಕರೆ ಅಕ್ರಮ ಮಾಡಿದ್ರೆ ಮೂಡಿಗೆರೆ ತಹಶೀಲ್ದಾರ್ ಆಗಿದ್ದ ರಮೇಶ್ 2200 ಎಕರೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ

Land scam detected in Kaduru Mudigere at chikkamagaluru rav
Author
First Published Sep 26, 2023, 8:58 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.26) : ರಾಜ್ಯದಲ್ಲೇ ಅತೀ ದೊಡ್ಡ ಲ್ಯಾಂಡ್ ಸ್ಕ್ಯಾಂಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಸಾಕ್ಷಿಯಾಗಿದೆ. ಕಡೂರು ಹಾಗೂ ಮೂಡಿಗೆರೆ ತಾಲೂಕಿನ ಈ ಲ್ಯಾಂಡ್ ಸ್ಕ್ಯಾಂ ರಾಜ್ಯದಲ್ಲೇ ದೊಡ್ಡದ್ದು. ಕಡೂರು ತಹಶೀಲ್ದಾರ್  ಆಗಿದ್ದ ಉಮೇಶ್ 3500 ಎಕರೆ ಅಕ್ರಮ ಮಾಡಿದ್ರೆ ಮೂಡಿಗೆರೆ ತಹಶೀಲ್ದಾರ್ ಆಗಿದ್ದ ರಮೇಶ್ 2200 ಎಕರೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ

ತನಿಖೆಯಿಂದ ಅಕ್ರಮ ಭೂಮಿ ಮಂಜೂರು ಪತ್ತೆ

ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿಕೊಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ. ಮೂಡಿಗೆರೆ ತಹಸೀಲ್ದಾರ್ ವೈ.ತಿಪ್ಪೇಸ್ವಾಮಿಯವರು ಮೂಡಿಗೆರೆ ಠಾಣೆಗೆ ನೀಡಿದ ದೂರಿನನ್ವಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಹಿಂದೆ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಪ್ರಭಾರ ರೆವೆನ್ಯೂ ಇನ್ಸ್ ಪೆಕ್ಟರ್ ಮತ್ತು ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಗಿರೀಶ್ ಮತ್ತು ಭೂಮಿ ಆಪರೇಟರ್ ನೇತ್ರಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಕರಣದ ಪ್ರಮುಖ ಆರೋಪಿ ಮೂಡಿಗೆರೆ ಈ ಹಿಂದಿನ ತಹಸೀಲ್ದಾರ್ ಆಗಿದ್ದ ರಮೇಶ್ ಮತ್ತು ಆರ್.ಆರ್.ಟಿ. ಶಿರಸ್ತೇದಾರ್ ಪಾಲಯ್ಯ ಎಂಬುವವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Land scam detected in Kaduru Mudigere at chikkamagaluru rav

 

ಅಕ್ರಮ ಭೂ ಮಂಜೂರಾತಿ ಹಗರಣ: ಬಗೆದಷ್ಟು ಅಕ್ರಮಗಳು ಬಯಲು, ತನಿಖಾ ತಂಡಕ್ಕೆ ಶಾಕ್ ..!

ಏನಿದು ಪ್ರಕರಣ ?:

2019ರಿಂದ 2021ರ  ಅವಧಿಯಲ್ಲಿ ಮೂಡಿಗೆರೆಯಲ್ಲಿ ರಮೇಶ್ ಎಂಬುವವರು ತಹಸೀಲ್ದಾರ್ ಆಗಿದ್ದ ಸಂದರ್ಭದಲ್ಲಿ ಬಾಳೂರು ಹೋಬಳಿ ವ್ಯಾಪ್ತಿಯ ಹಾದಿಯೋಣಿ ಗ್ರಾಮದ ಸರ್ವೆ ನಂ 21ರಲ್ಲಿ 7 ಮಂದಿ ಹಾಗೂ ಕೂವೆ ಗ್ರಾಮದ ಸರ್ವೆ.ನಂ 164, 180, ಕೆಳಗೂರು ಗ್ರಾಮದ ಸರ್ವೆ ನಂ 41, ಬಿಳಗಲಿ ಗ್ರಾಮದ ಸರ್ವೆ ನಂ 87 ಈ ಪ್ರದೇಶದಲ್ಲಿ ಅನೇಕ ಮಂದಿಗೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಡಲಾಗಿತ್ತು. ಅರ್ಜಿ ಇಲ್ಲದೇ, ಅಕ್ರಮ ಸಕ್ರಮ ಸಮಿತಿಯ ಮುಂದೆ ಮಂಡಿಸದೇ, ಹಕ್ಕುಪತ್ರ ನೀಡದೇ ನೇರವಾಗಿ ಮ್ಯುಟೇಷನ್ ಮತ್ತು ಪಹಣಿಯನ್ನು ಮಾಡಿಕೊಡಲಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿಗಳು ಕೆಲವು ಅಕ್ರಮ ಖಾತೆಗಳನ್ನು ರದ್ದುಗೊಳಿಸಿದ್ದರು. ಈ ಸಂಬಂಧ ಅಕ್ರಮ ಎಸಗಿದ್ದ ತಹಸೀಲ್ದಾರ್ ಮತ್ತು ನೌಕರರ ವಿರುದ್ಧ ಪ್ರಕರಣ ದಾಖಲಿಸುವಂತೆ ಮೂಡಿಗೆರೆ ತಹಸೀಲ್ದಾರ್ ರವರಿಗೆ ಉಪವಿಭಾಗಾಧಿಕಾರಿಗಾಳಾದ ರಾಜೇಶ್ ಅವರು ನೀಡಿದ ನಿರ್ದೇಶನ ಮೇರೆಗೆ ಮೂಡಿಗೆರೆ ಠಾಣೆಯಲ್ಲಿ ತಹಸಿಲ್ದಾರ್ ತಿಪ್ಪೇಸ್ವಾಮಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು. ಗಿರೀಶ್  ಹಾಗೂ  ನೇತ್ರ ಅವರನ್ನು ಸೋಮವಾರ ರಾತ್ರಿ ಪೊಲೀಸರು ಬಂದಿಸಿದ್ದಾರೆ. ಗ್ರಾಮ ಲೆಕ್ಕಿಗ ಗಿರೀಶ್ ಈ ಹಿಂದೆಯೂ ಒಮ್ಮೆ ಅಕ್ರಮ ಭೂ ಮಂಜೂರಾತಿ ಆರೋಪದ ಮೇಲೆ ಅಮಾನತ್ತುಗೊಂಡಿದ್ದರು. ಹಿಂದೆ ಇದ್ದ ತಹಸೀಲ್ದಾರ್ ರಮೇಶ್ ಅವರು ಸ್ಥಳ ನಿರೀಕ್ಷಣೆಯಲ್ಲಿದ್ದು, ಮೂಡಿಗೆರೆಯಲ್ಲಿ ಆರ್.ಆರ್.ಟಿ.  ಶಿರಸ್ತೆದಾರರಾಗಿದ್ದ ಪಾಲಯ್ಯ ಅವರು ಜಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಪ್ರಸ್ತುತ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಸರ್ಕಾರದ ವಿರುದ್ದ ರೈತ ಸಂಘ ಕಿಡಿ 

ಚಿಕ್ಕಮಗಳೂರು-ಮೂಡಿಗೆರೆಯ ಅಕ್ರಮ ಭೂ ಮಂಜೂರು ಪ್ರಕರಣದಲ್ಲಿ 60 ಜನ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವರದಿ ನೀಡಿದ್ದಾರೆ. ಆದ್ರೆ, ಯಾರ ಮೇಲೂ ಪ್ರಕರಣ ದಾಖಲಿಸುತ್ತಿಲ್ಲ. ಈಗ 4(1) ಜಾರಿ ಮಾಡಿ ಪ್ರಕರಣವನ್ನ ಜನರ ಮನಸ್ಸಿನಿಂದಲೇ ಮುಚ್ವಿಹಾಕೋ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಹಗರಣ ಮಾಡಿದ್ರೆ, ಕಾಂಗ್ರೆಸ್ ಮುಚ್ಚಿ ಹಾಕ್ತಿದೆ ಅಂತ ರೈತ ಸಂಘ ಸರ್ಕಾರದ ವಿರುದ್ಧ ಕಿಡಿಕಾರಿದೆ. ಒಟ್ಟಾರೆ, ಬೇಲಿಯೇ ಎದ್ದು ಹೊಲ ಮೇಯ್ದ ಘಟನೆಗೆ ಕಾಫಿನಾಡ ಕಡೂರು-ಮೂಡಿಗೆರೆ ಸಾಕ್ಷಿಯಾಗಿದೆ.

ಕಾಂಗ್ರೆಸ್ಸಿಗೆ ಭಾರತ ಅಂದ್ರೆ ಅಸಹನೆ: ಸಿ.ಟಿ.ರವಿ

 ಕಡೂರಲ್ಲಿ ಹುಲಿ ಸಂರಕ್ಷಿತ ಪ್ರದೇಶದಂತ ಮೀಸಲು ಅರಣ್ಯವನ್ನೇ ಪರಭಾರೆ ಮಾಡಿದ್ರೆ, ಮೂಡಿಗೆರೆಯಲ್ಲಿ ಅರ್ಜಿ ಹಾಕಿಲ್ಲ, ಕುಲ-ಗೋತ್ರ ಇಲ್ಲ. ಆದ್ರೂ ಭೂಮಿ ಮಂಜೂರಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಅದ್ಯಾವ ಧೈರ್ಯದಲ್ಲಿ ದಾಖಲೆ ಮಾಡಿ ಪರಭಾರೆ ಮಾಡಿಕೊಟ್ಟಿದ್ದಾರೋ ಗೊತ್ತಿಲ್ಲ. ಅವರ ಬೆನ್ನ ಹಿಂದಿನ ಧೈರ್ಯ ಯಾರು ಅನ್ನೋದು ಇನ್ನೂ ನಿಗೂಢ. ಈಗಾಗಲೇ ತನಿಖೆ ಚುರುಕುಗೊಂಡಿದ್ದು ಅರಣ್ಯ ಹಾಗೂ ಕಂದಾಯ ಇಲಾಖೆ ಎರಡರಿಂದಲೂ ತನಿಖೆ ನಡೆಯುತ್ತಿದ್ದು ಸಂಬಂಧಪಟ್ಟವರಿಗೆ ನೋಟೀಸ್ ನೀಡಿದ್ದಾರೆ. ಪ್ರಕರಣದ ತನಿಖೆ ಸರಿದಾರಿಯಲ್ಲಿ ಸಾಗಿದ್ರೆ ಯಾರ್ಯಾರು ಅಂದರ್ ಆಗ್ತಾರೋ ಕಾದುನೋಡ್ಬೇಕು..

Follow Us:
Download App:
  • android
  • ios