ಬರದ ಬರೆ: ರಾಜ್ಯಾದ್ಯಂತ ಕೆರೆಗಳು ಖಾಲಿ, ಖಾಲಿ, ಕುಡಿಯುವ ನೀರಿಗೆ ಹಾಹಾಕಾರ..!
ರಾಜ್ಯ ಸರ್ಕಾರದ ಅಂದಾಜಿನಂತೆ ಮುಂದಿನ ದಿನಗಳಲ್ಲಿ 7,408 ಗ್ರಾಮಗಳು ಹಾಗೂ ನಗರ ಪ್ರದೇಶದ 1,115 ವಾರ್ಡ್‌ಗಳಲ್ಲಿ ನೀರಿಗೆ ಸಮಸ್ಯೆಯಾಗಲಿದೆ. ಅದರ ನಡುವೆಯೇ ರಾಜ್ಯದ ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯಲ್ಲಿರುವ ಕೆರೆಗಳ ಪೈಕಿ ಶೇ.20 ಕೆರೆಗಳು ಸಂಪೂರ್ಣ ಖಾಲಿಯಾಗಿವೆ.
ಗಿರೀಶ್ ಗರಗ
ಬೆಂಗಳೂರು(ಮಾ.12): ಎಲ್ಲೆಡೆ ಬರದ ಛಾಯೆ ಆವರಿಸಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ರಾಜ್ಯ ಸರ್ಕಾರದ ಅಂದಾಜಿನಂತೆ ಮುಂದಿನ ದಿನಗಳಲ್ಲಿ 7,408 ಗ್ರಾಮಗಳು ಹಾಗೂ ನಗರ ಪ್ರದೇಶದ 1,115 ವಾರ್ಡ್‌ಗಳಲ್ಲಿ ನೀರಿಗೆ ಸಮಸ್ಯೆಯಾಗಲಿದೆ. ಅದರ ನಡುವೆಯೇ ರಾಜ್ಯದ ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯಲ್ಲಿರುವ ಕೆರೆಗಳ ಪೈಕಿ ಶೇ.20 ಕೆರೆಗಳು ಸಂಪೂರ್ಣ ಖಾಲಿಯಾಗಿವೆ.
ರಾಜ್ಯದ 240 ತಾಲೂಕುಗಳ ಪೈಕಿ 220 ತಾಲೂಕುಗಳಲ್ಲಿ ಬರ ಛಾಯೆಯಿದ್ದು, ಅದರಿಂದ ಕೃಷಿ ಉತ್ಪಾದನೆಯಲ್ಲಿ ಭಾರೀ ಪ್ರಮಾಣದ ಕುಂಠಿತ ಉಂಟಾಗಿದೆ. ಅದರ ನಡುವೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಕೊಳವೆ ಬಾವಿ ಸೇರಿದಂತೆ ನೀರಿನ ಮೂಲಗಳಲ್ಲಿ ನೀರಿಲ್ಲದಂತಾಗುತ್ತಿದೆ. ಬಿಸಿಲ ಝಳ ಹೆಚ್ಚಿದಂತೆ ಇರುವ ನೀರು ಕೂಡ ಕಡಿಮೆಯಾಗುತ್ತಿದೆ. ಅದರ ಜತೆಗೆ ರಾಜ್ಯದಲ್ಲಿನ ಸಣ್ಣ ನೀರಾವರಿ ಇಲಾಖೆ ಸುಪರ್ದಿಯಲ್ಲಿರುವ 3,685 ಕೆರೆಗಳ ಪೈಕಿ ಶೇ.90ಕ್ಕೂ ಹೆಚ್ಚಿನ ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರಿದ್ದು, ಅದರಿಂದ ಗ್ರಾಮೀಣ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿಯುವಂತಾಗಿದೆ.
ವಿಜಯಪುರ ಜಿಲ್ಲೆಯ 99 ಕೆರೆಗಳ ಭರ್ತಿಗೆ ಹರಿದ ನೀರು
753 ಕೆರೆಗಳಲ್ಲಿ ಒಂದು ಹನಿ ನೀರಿಲ್ಲ
ಸಣ್ಣ ನೀರಾವರಿ ಇಲಾಖೆಯ ಮಾಹಿತಿಯಂತೆ ಇಲಾಖೆ ನಿರ್ವಹಣೆಯಲ್ಲಿನ 3,685 ಕೆರೆಗಳು ಒಟ್ಟು 2.16 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿವೆ. ಆದರೆ, ಪ್ರಸಕ್ತ ಸಾಲಿನಲ್ಲಿ ಮಳೆ ಪ್ರಮಾಣ ತೀರಾ ಕಡಿಮೆಯಿದ್ದ ಕಾರಣದಿಂದಾಗಿ ಕೆರೆಗಳಲ್ಲಿ ನೀರಿನ ಶೇಖರಣೆ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದ್ದು, ಕೃಷಿ ಪ್ರದೇಶಕ್ಕೆ ನೀರಾವರಿ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವಂತಾಗಿದೆ. ಅಲ್ಲದೆ, ಒಟ್ಟು 3,685 ಕೆರೆಗಳಲ್ಲಿ 753 ಕೆರೆಗಳು ಸಂಪೂರ್ಣ ಖಾಲಿಯಾಗಿದ್ದು, ಆ ಕೆರೆಗಳಿಂದ ಈ ವರ್ಷ ಯಾವುದೇ ರೀತಿಯ ಪ್ರಯೋಜನ ಇಲ್ಲದಂತಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕೆರೆಗಳು ನೀರಿಲ್ಲದೆ ಖಾಲಿಯಾಗಿದೆ. ಬೆಳಗಾವಿ ವ್ಯಾಪ್ತಿಯಲ್ಲಿ 290 ಕೆರೆಗಳಿದ್ದು, 150 ಕೆರೆಗಳಲ್ಲಿ ಹನಿ ನೀರು ಇಲ್ಲದಂತಾಗಿದೆ. ಉಳಿದಂತೆ 1,745 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು ಭರ್ತಿಯಾಗಿದೆ. ಹಾಗೆಯೇ, 801 ಕೆರೆಗಳಲ್ಲಿ ಶೇ.31ರಿಂದ 50ರಷ್ಟು ನೀರು ತುಂಬಿದೆ. ಅದನ್ನು ಗಮನಿಸಿದರೆ ಶೇ.94ರಷ್ಟು ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರು ತುಂಬಿದ್ದು, ಅದು ಇನ್ನೊಂದು ತಿಂಗಳಲ್ಲಿ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ.
ಶಿರಾ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಕ್ರಮ: ಡಿಕೆ ಶಿವಕುಮಾರ್
15 ಕೆರೆಗಳು ಮಾತ್ರ ಭರ್ತಿ:
ಸಣ್ಣ ನೀರಾವರಿ ಇಲಾಖೆ ಕೆರೆಗಳ ಪೈಕಿ 371 ಕೆರೆಗಳಲ್ಲಿ ಶೇ.51ರಿಂದ 99ರಷ್ಟು ನೀರು ಭರ್ತಿಯಾಗಿದೆ. ಉಳಿದಂತೆ 15 ಕೆರೆಗಳಲ್ಲಿ ಈಗಲೂ ಪೂರ್ಣ ಪ್ರಮಾಣದ ನೀರಿದ್ದು, ಅವುಗಳಿಂದ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗೆ ಭರ್ತಿಯಾಗಿರುವ ಕೆರೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿಯೇ 6 ಕೆರೆಗಳಿದ್ದು, ಉಳಿದಂತೆ ವಿಜಯಪುರ, ಚಿತ್ರದುರ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ತಲಾ 2, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಗಳಲ್ಲಿ ತಲಾ ಒಂದು ಕೆರೆಗಳು ಮಾತ್ರ ಸಂಪೂರ್ಣ ನೀರಿನಿಂದ ಭರ್ತಿಯಾಗಿವೆ.
ರಾಜ್ಯದಲ್ಲಿ 35 ಸಾವಿರ ಕೆರೆಗಳು
ರಾಜ್ಯದಲ್ಲಿ ಒಟ್ಟಾರೆ 35 ಸಾವಿರಕ್ಕೂ ಹೆಚ್ಚಿನ ಕೆರೆಗಳಿದ್ದು, ಅವುಗಳು ಸಣ್ಣ ನೀರಾವರಿ ಇಲಾಖೆ ಜತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಲಸಂಪನ್ಮೂಲ ಇಲಾಖೆಗಳ ಸುಪರ್ದಿಯಲ್ಲಿವೆ. ಅದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿಯೇ ಅತಿಹೆಚ್ಚು ಕೆರೆಗಳಿದ್ದು, ಅವುಗಳ ಪರಿಸ್ಥಿತಿಯೂ ಸಣ್ಣ ನೀರಾವರಿ ಇಲಾಖೆ ಕೆರೆಗಳಂತೆಯೇ ಆಗಿದೆ. ನರೇಗಾ ಅಡಿಯಲ್ಲಿ ಅವುಗಳಲ್ಲಿ ಶೇಖರಣೆಯಾಗಿರುವ ಹೂಳು ತೆಗೆಯುವುದು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯ ಮಾಡಲಾಗಿದೆಯಾದರೂ, ಮಳೆ ಕೊರತೆ ಕಾರಣದಿಂದಾಗಿ ಶೇ.60ಕ್ಕಿಂತ ಹೆಚ್ಚಿನ ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರು ಶೇಖರಣೆಯಾಗಿದೆ.