* ನಾಡಗೀತೆ, ಕುವೆಂಪುಗೆ ಅವಮಾನ: ದೂರು ನೀಡಿದ್ದ ಚುಂಚಶ್ರೀ* ನಾಡಗೀತೆ ತಿರುಚಿದ ಬಗ್ಗೆ ಪತ್ರ, ಗಂಭೀರವಾಗಿ ಪರಿಗಣನೆ: ಸಿಎಂ 

ಬೆಂಗಳೂರು(ಮೇ.30): ರಾಷ್ಟ್ರಕವಿ ಕುವೆಂಪು ಅವರನ್ನು ಅಸಂಸದೀಯ ಭಾಷೆಯಲ್ಲಿ ನಿಂದಿಸಿರುವವರ ವಿರುದ್ಧ ಹಾಗೂ ನಾಡಗೀತೆ ತಿರುಚಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆದಿಚುಂಚನಗಿರಿಯ ನಿರ್ಮಿಲಾನಂದ ನಾಥ ಸ್ವಾಮೀಜಿ ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿಚುಂಚನಗಿರಿ ಶ್ರೀಗಳು ತಮಗೆ ಬರೆದಿರುವ ಪತ್ರದ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳಿಗೆ ಶನಿವಾರ ಪತ್ರ ಬರೆದಿದ್ದ ಶ್ರೀಗಳು, ‘ಕುವೆಂಪು ಅವರು ನಮ್ಮ ನಾಡು ಕಂಡ ಅಪ್ರತಿಮ ಕವಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಕರ್ನಾಟಕ ಆರ್ಥಿಕ, ಸಾಮಾಜಿಕ, ಧಾರ್ಮಿಕ ಅಸಮಾನತೆ ಮತ್ತು ಲಿಂಗಭೇದ ನಿವಾರಿಸಿಕೊಂಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂಬ ಕನಸು ಕಂಡವರು. ಅದರೆ, ಕುವೆಂಪು ಬರೆದಿರುವ ‘ಜೈ ಭಾರತ ಜನನಿಯ ತನುಜಾತೆ’ ಗೀತೆಯನ್ನು ಕೆಲವರು ತಿರುಚಿ ಬರೆದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕುವೆಂಪು ಬಗ್ಗೆ ಅತ್ಯಂತ ಕೀಳುಭಾಷೆಯಲ್ಲಿ ನಿಂದಿಸಿ ಅವಹೇಳನಕಾರಿ ಲೇಖನ ಬರೆದಿದ್ದು, ಅಂಥಹವರ ವಿರುದ್ಧ ಸೈಬರ್‌ ಕ್ರೈಂ ಅಡಿಯಲ್ಲಿ ಸರ್ಕಾರ ಕ್ರಮ ಜರುಗಿಸಬೇಕು’ ಎಂದು ಕೋರಿದ್ದರು.

ಕುವೆಂಪು ಹಾಡು ರೈತಗೀತೆ ಮಾಡಿದ್ದು ಬಿಜೆಪಿ: ಕಟೀಲ್‌

ನಾಡಗೀತೆಗೆ ಅವಮಾನವಾಗಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್‌ ಮಾತನಾಡಿದ್ದು, ಕುವೆಂಪು ಅವರ ಹಾಡನ್ನು ರೈತ ಗೀತೆ ಮಾಡಿದ್ದು ಬಿ.ಎಸ್‌.ಯಡಿಯೂರಪ್ಪ ಅವರ ಸರ್ಕಾರ ಎಂದು ಹೇಳುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ ಎಂದರು. ತುಮಕೂರಿನ ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ರೈತರ ಪರ ಹೋರಾಟ ಮಾಡಿದವರು. ಯಡಿಯೂರಪ್ಪರನ್ನು ರೈತರ ಮಗ ಎಂದು ಕರೆಯುತ್ತಾರೆ ಎಂದು ಕಟೀಲ್‌ ಬಣ್ಣಿಸಿದರು.

ರೋಹಿತ್‌ ವಿರುದ್ಧ ಪ್ರಕರಣ ದಾಖಲಿಸಿ

ರಾಷ್ಟ್ರಕವಿ ಕುವೆಂಪು ಅವರನ್ನು ಅಸಂಸದೀಯ ಭಾಷೆಯಲ್ಲಿ ನಿಂಧಿಸಿ ಲೇಖನ ಬರೆದಿರುವ ಮತ್ತು ನಾಡಗೀತೆಯನ್ನು ತಿರುಚಿ ಬರೆದಿರುವ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ಡೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸುವಂತೆ ಕೆಜಿಎಫ್‌ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್‌.ಎನ್‌ ರಾಜಗೋಪಾಲಗೌಡ ಒತ್ತಾಯಿಸಿದ್ದಾರೆ.

ಕುವೆಂಪು ಅವರ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಒಕ್ಕಲಿಗ ಸಮಾಜವನ್ನು ಅವಮಾನಿಸದಂತೆ, ಕುವೆಂಪು ಅವರು ನಾಡು ಕಟ್ಟುವ ಕೆಲಸವನ್ನು ಮಾಡಿದ್ದಾರೆ, ಕುವೆಂಪು ರಚನೆ ಮಾಡಿರುವ ಅನೇಕ ಕೃತಿಗಳು ಸಮಾಜ ಮುಖಿಯಾಗಿವೆ. Üಆದರೆ ರೋಹಿತ್‌ ಚಕ್ರತೀರ್ಥ ನಾಡಗೀತೆಯನ್ನು ತಿರುಚಿದ್ದರು ಸರ್ಕಾರ ಕಣ್ಣುಮುಚ್ಚಿ ಕುಳಿತಿರುವುದು ನೋಡಿದರೆ ಚಕ್ರತೀರ್ಥ ಅವರಿಗೆ ಸರ್ಕಾರ ಕುಮ್ಮಕ್ಕು ನೀಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಕೂಡಲೇ ಸರಕಾರ ಚಕ್ರತೀರ್ಥ ಅವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಒಕ್ಕಲಿಗ ಸಮಾಜ ಬೀದಿಗೆ ಇಳಿದು ಉಗ್ರ ಹೋರಾಟ ಹಮ್ಮಿಕೊಳ್ಳಕೊಳ್ಳಬೇಕಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.