ಬೆಂಗಳೂರು(ಅ.12): ಕುರುಬ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ (ಎಸ್‌.ಟಿ.) ಸೇರಿಸಬೇಕು ಎಂದು ಒತ್ತಾಯಿಸಿ ಮುಂದಿನ ವರ್ಷದ ಜನವರಿ 15ರಂದು ಹಾವೇರಿಯ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಬೃಹತ್‌ ಪಾದಯಾತ್ರೆ ನಡೆಸಿ ಫೆ.7ರಂದು 10 ಲಕ್ಷ ಜನರೊಂದಿಗೆ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಸಲು ಕುರುಬರ ಎಸ್‌.ಟಿ. ಹೋರಾಟ ಸಮಿತಿ ನಿರ್ಧಾರ ಮಾಡಿದೆ.

ಇದೇ ವೇಳೆ, ಇದಕ್ಕೂ ಮೊದಲು ಕಂದಾಯ ವಿಭಾಗವಾರು ನಾಲ್ಕು ವಿಭಾಗೀಯ ಸಮಾವೇಶಗಳನ್ನು ನಡೆಸಲು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಕುರುಬ ಸಮುದಾಯವನ್ನು ಎಸ್‌.ಟಿ.ಗೆ ಸೇರಿಸುವಂತೆ ಒತ್ತಾಯಿಸಲು ಕೇಂದ್ರ ಸರ್ಕಾರದ ಬಳಿಗೆ ಪಕ್ಷಾತೀತವಾಗಿ ಜನಪ್ರತಿನಿಧಿಗಳ ನಿಯೋಗವನ್ನು ದೆಹಲಿಗೆ ಕರೆದೊಯ್ಯಲು ನಿರ್ಧರಿಸಲಾಗಿದೆ.

"

ಭಾನುವಾರ ಅರಮನೆ ಮೈದಾನದಲ್ಲಿ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ಹಾಗೂ ಸಚಿವ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಪಕ್ಷಾತೀತವಾಗಿ ನಡೆದ ಕುರುಬ ಸಮುದಾಯದ ಜನಪ್ರತಿನಿಧಿಗಳ ಹಾಗೂ ನಾಯಕರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸಭೆಯಲ್ಲಿ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ನವೆಂಬರ್‌ 22ರಂದು ಬೆಳಗಾವಿ ವಿಭಾಗದಲ್ಲಿ ಹಾಗೂ ಡಿ.6ರಂದು ಮೈಸೂರು ವಿಭಾಗದಲ್ಲಿ, ಡಿ.20ರಂದು ಕಲಬುರಗಿ ಹಾಗೂ ಜನವರಿ 3ರಂದು ಬೆಂಗಳೂರು ವಿಭಾಗದಲ್ಲಿ ವಿಭಾಗವಾರು ಸಮಾವೇಶಗಳನ್ನು ನಡೆಸಲಾಗುವುದು. ಇದರ ನಡುವೆಯೇ ಸಚಿವರಾದ ಕೆ.ಎಸ್‌.ಈಶ್ವರಪ್ಪ ಅವರ ನೇತೃತ್ವದಲ್ಲಿ ಪ್ರಮುಖರ ನಿಯೋಗ ದೆಹಲಿಗೆ ತೆರಳಿ ಸಮುದಾಯವನ್ನು ಎಸ್‌.ಟಿ.ಗೆ ಸೇರ್ಪಡೆ ಮಾಡಬೇಕು ಎಂಬ ನಮ್ಮ ಬೇಡಿಕೆಯನ್ನು ಕೇಂದ್ರದ ಮುಂದಿಡಲಿದೆ ಎಂದು ಹೇಳಿದರು.

ಜ.15ರಿಂದ ಫೆ.7 ರವರೆಗೆ ಸ್ವಾಮೀಜಿಗಳ ಪಾದಯಾತ್ರೆ:

ಇದೇ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜನವರಿ 15ರಂದು ಮಕರ ಸಂಕ್ರಾಂತಿ ದಿನ ಪ್ರಮುಖ ಮಠ ಹಾಗೂ ಶಾಖಾ ಮಠ ಸೇರಿ ನಾಲ್ಕು ಹಿರಿಯ ಸ್ವಾಮೀಜಿಗಳು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು. ಫೆ.7ಕ್ಕೆ ಬೆಂಗಳೂರಿಗೆ ಪಾದಯಾತ್ರೆ ತಲುಪಲಿದೆ. ಪ್ರತಿನಿತ್ಯ 20 ಕಿ.ಮೀ. ಪಾದಯಾತ್ರೆ ನಡೆಸಲಿದ್ದು, ಬೆಳಗ್ಗೆ 10 ಕಿ.ಮೀ. ಹಾಗೂ ಸಂಜೆ 10 ಕಿ.ಮೀ. ಪಾದಯಾತ್ರೆ ಮಾಡಲಿದ್ದೇವೆ. ಈ ವೇಳೆ ಅಸಂಖ್ಯಾತ ಸಮುದಾಯದವರು ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಿದರು.

ಸಿದ್ದು ಸಹಕಾರ ಇದೆ:

ಕುರುಬರು ಒಟ್ಟಾದರೆ ಯಾವುದನ್ನಾದರೂ ಸಾಧಿಸಬಹುದು. ಹಿಂದೆ ನಾವೆಲ್ಲರೂ ಒಟ್ಟಾಗಿದ್ದಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದರು. ಇದೀಗ ನಾವೆಲ್ಲಾ ಒಟ್ಟಾಗಿದ್ದೇವೆ. ಎಸ್‌.ಟಿ.ಗಾಗಿ ಎಲ್ಲರೂ ಧ್ವನಿ ಎತ್ತಬೇಕು. ಎಲ್ಲಿಯೂ ಭಿನ್ನಾಭಿಪ್ರಾಯ ಹಾಗೂ ಅಪಸ್ವರ ಬರಬಾರದು. ಹೋರಾಟದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇವೆ. ಅವರು ಸಂಪೂರ್ಣ ಸಹಕಾರ ನೀಡಿ ಮುಂದುವರೆಯಲು ಹೇಳಿದ್ದಾರೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಹೋದರೆ ಯಶಸ್ಸು ಇದೆ ಎಂದರು.

ಪಕ್ಷಾತೀತ ಸಮಾವೇಶ...

ಕುರುಬ ಸಮುದಾಯದ ಜನಪ್ರತಿನಿಧಿಗಳು ಹಾಗೂ ನಾಯಕರ ಪಕ್ಷಾತೀತ ಸಭೆ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ಹಾಗೂ ಸಚಿವ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು.