Asianet Suvarna News Asianet Suvarna News

ಕನ್ನಡಪ್ರಭ ವರದಿ ಫಲಶ್ರುತಿ: ಪಠ್ಯಪುಸ್ತಕ ತುಂಬಿದ್ದ ಗೋಡೌನ್‌ಗಳ ಮೇಲೆ ದಾಳಿ

 ಕೆಟಿಬಿಎಸ್‌ ಅಧಿಕಾರಿಗಳು ಸ್ಥಳೀಯ ಬಿಇಒಗಳು ಹಾಗೂ ಪಠ್ಯಪುಸ್ತಕ ಸರಬರಾಜು ಜವಾಬ್ದಾರಿ ಹೊತ್ತ ಬ್ಲಾಕ್‌ ಹಂತದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಇದೇ ರೀತಿ ನಿರ್ಲಕ್ಷ್ಯ ಮುಂದುವರೆದರೆ ಕರ್ತವ್ಯ ಲೋಪದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ktbs raid on godown where textbooks stored in karnataka grg
Author
First Published Jul 5, 2024, 9:22 AM IST

ಬೆಂಗಳೂರು(ಜು.05):  ಶಾಲಾವಾರು ಬೇಡಿಕೆಗಳಿಗೆ ಅನುಗುಣವಾಗಿ ಪ್ರಸಕ್ತ ಸಾಲಿನ ಪಠ್ಯಪುಸ್ತಕಗಳನ್ನು ತಾಲ್ಲೂಕು (ಬ್ಲಾಕ್‌) ಹಂತಕ್ಕೆ ಸರಬರಾಜು ಮಾಡಿದ್ದರೂ ಅವುಗಳನ್ನು ಶಾಲೆಗಳಿಗೆ ತಲುಪಿಸದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಕರ್ನಾಟಕ ಪಠ್ಯಪುಸ್ತಕ ಸಂಘ (ಕೆಟಿಬಿಎಸ್‌) ಗುರುವಾರ ವಿವಿಧೆಡೆ ನಡೆಸಿದ ಪರಿಶೀಲನೆ ವೇಳೆ ಕಂಡು ಬಂದಿದೆ.

ಶಾಲೆಗಳು ಆರಂಭವಾಗಿ ತಿಂಗಳಾದರೂ ಪಠ್ಯಪುಸ್ತಕಗಳು ಪೂರ್ಣ ಪ್ರಮಾಣದಲ್ಲಿ ಶಾಲೆಗಳಿಗೆ ತಲುಪದಿರುವ ಬಗ್ಗೆ ‘ಕನ್ನಡಪ್ರಭ’ ಬುಧವಾರ ಪ್ರಕಟಿಸಿದ್ದ ವಿಶೇಷ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಕೆಟಿಬಿಎಸ್‌ ಅಧಿಕಾರಿಗಳು ಹೆಬ್ಬಾಳ ಕೆಂಪಾಪುರದ ಕರ್ನಾಟಕ ಪಬ್ಲಿಕ್‌ ಶಾಲೆ, ಹೊಸಕೆರೆ ಹಳ್ಳಿ ಸರ್ಕಾರಿ ಶಾಲೆ ಸೇರಿದಂತೆ ಬೆಂಗಳೂರಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕಗಳು ತಲುಪದೆ ಇರುವುದು ಖಚಿತವಾಗಿದೆ. ತಕ್ಷಣ ಬ್ಲಾಕ್‌ ಹಂತದ ಗೋದಾಮುಗಳಿಗೆ ಭೇಟಿ ನೀಡಿದಾಗ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಕಳುಹಿಸದೆ ಧೂಳು ಹಿಡಿಸಿರುವುದು ಬಹಿರಂಗವಾಗಿದೆ.

ರಾಜ್ಯ ಪಠ್ಯಕ್ರಮದಲ್ಲಿ ಹಲವು ಮಹತ್ವದ ಬದಲಾವಣೆ: ಏನೆಲ್ಲಾ ಆಗಿದೆ? ಇಲ್ಲಿದೆ ವಿವರ!

ನಂತರ ಕೆಟಿಬಿಎಸ್‌ ಅಧಿಕಾರಿಗಳು ಸ್ಥಳೀಯ ಬಿಇಒಗಳು ಹಾಗೂ ಪಠ್ಯಪುಸ್ತಕ ಸರಬರಾಜು ಜವಾಬ್ದಾರಿ ಹೊತ್ತ ಬ್ಲಾಕ್‌ ಹಂತದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಇದೇ ರೀತಿ ನಿರ್ಲಕ್ಷ್ಯ ಮುಂದುವರೆದರೆ ಕರ್ತವ್ಯ ಲೋಪದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು, ತುಮಕೂರು ಸೇರಿದಂತ ಹಲವೆಡೆ ಪುಸ್ತಕಗಳು ತಲುಪದಿರುವ ಬಗ್ಗೆ ದೂರುಗಳು ಬಂದ ವಿವಿಧ ಜಿಲ್ಲೆಯ ಶಾಲೆಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಬಿಸಿ ಮುಟ್ಟಿಸಿ ತಕ್ಷಣವೇ ಪಠ್ಯಪುಸ್ತಕ ಶಾಲೆಗಳಿಗೆ ತಲುಪುವಂತೆ ಮಾಡುವಲ್ಲಿ ಕೆಟಿಬಿಎಸ್‌ ಅಧಿಕಾರಿಗಳು ಕ್ರಮ ವಹಿಸಿದ್ದಾರೆ. 

ಗೋದಾಮುಗಳ ಪರಿಶೀಲನೆಗೆ ಸೂಚನೆ

ರಾಜ್ಯದ ಪ್ರತಿ ತಾಲ್ಲೂಕು ಹಂತಕ್ಕೆ ಈಗಾಗಲೇ ಶೇ.95ರಿಂದ 99ರಷ್ಟು ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಆದರೆ, ಇನ್ನೂ ಹಲವೆಡೆ ಬ್ಲಾಕ್‌ ಹಂತದಿಂದ ಶಾಲೆಗಳಿಗೆ ಪುಸ್ತಕಗಳು ತಲುಪುವಲ್ಲಿ ನಿರ್ಲಕ್ಷ್ಯ ವಹಿರುವ ಸಾಧ್ಯತೆ ಇರುವುದರಿಂದ ಶುಕ್ರವಾರದಿಂದ ಪ್ರತಿ ಬ್ಲಾಕ್‌ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios