ಶಿವಮೊಗ್ಗ[ಜ.07]: ಬಸ್ಸೇ ಬಾರದಿದ್ದ ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆಗೆ ಚಾಲನೆ ನೀಡಿ ಸ್ವತಃ ತಾವೇ ಬಸ್ ಚಾಲನೆ ಮಾಡಿಕೊಂಡು ಹೋಗಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ನಡೆ ಅಧಿಕಾರಿಗಳಿಗೆ ಈಗ ಸಂಕಷ್ಟ ತಂದಿದೆ.

60 ಕಿ.ಮೀ. ಬಸ್ ಚಾಲನೆ ಮಾಡಿ ಹಿರೋಯಿಸಂ ಪ್ರದರ್ಶಿಸಿದ್ದ ರೇಣುಕಾಚಾರ್ಯ ಹೆಸರು ಮಾಧ್ಯಮಗಳಲ್ಲಿ ಪ್ರಕಟಗೊಂಡು ಚರ್ಚೆಗೆ ಕಾರಣವಾಗುತ್ತಿದ್ದಂತೆ, ಅವರ ಕೈಗೆ ಬಸ್ ನೀಡಿದ ಅಧಿಕಾರಿಗಳಿಗೆ ಇದೀಗ ನೋಟೀಸ್ ಜಾರಿಯಾಗಿದೆ. ಹೊನ್ನಾಳಿ ಡಿಪೋ ಮ್ಯಾನೇಜರ್‌ಗೆ ಶಿವಮೊಗ್ಗ ಕೆಎಸ್ ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್. ನವೀನ್‌ಕುಮಾರ್ ಈ ಸಂಬಂಧ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಲೈಸನ್ಸ್ ಇಲ್ಲದೇ ಸರ್ಕಾರಿ ಬಸ್ ಓಡಿಸಿದ ಶಾಸಕ: ನಿಯಮ ಉಲ್ಲಂಘಿಸಿದ್ರೂ ಹಾರಿಕೆಯ ಉತ್ತರ!

ಶನಿವಾರ ಹೊನ್ನಾಳಿ ಗ್ರಾಮಾಂತರ ಮಾರ್ಗದ ಬಸ್‌ಸಂಚಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಚಾಲಕನ ಸಮವಸ್ತ್ರ ಧರಿಸಿ ಸುಮಾರು 60 ಕಿಮೀ ಬಸ್ ಓಡಿಸಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಸಾಕಷ್ಟು ಪ್ರಚಾರ ಸಿಕ್ಕಿತ್ತು. ಇದರ ಬೆನ್ನಲ್ಲೇ ಭಾರೀ ಟೀಕೆಗಳೂ ವ್ಯಕ್ತವಾಗಿದ್ದವು.

ಶಾಸಕ ರೇಣುಕಾಚಾರ್ಯ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬಸ್ ಓಡಿಸಿದ್ದ ಬಗ್ಗೆ ಹಾಕಿದ್ದ ಫೋಟೊ ನೋಡಿ ಕೆಎಸ್ ಆರ್‌ಟಿಸಿ ನಿಯಂತ್ರಣಾಧಿಕಾರಿಗಳು ಸ್ವಯಂ ಪ್ರೇರಣೆಯಿಂದ ನೋಟೀಸ್ ಜಾರಿಗೊಳಿಸಿದ್ದಾರೆ.

ಖಾಕಿ ಅಂಗಿ ಧರಿಸಿ ಬಸ್ ಬಾರದ ಗ್ರಾಮಕ್ಕೆ ಬಸ್ ಓಡಿಸ್ಕೊಂಡು ಬಂದ ಹೊನ್ನಾಳಿ ಶಾಸಕ!