ಬೆಂಗಳೂರು(ನ.15): ದೀಪಾವಳಿ ಹಬ್ಬದ ವೇಳೆಗೆ ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗಿರುವುದು ಹಾಗೂ ಆರ್ಥಿಕ ಚೇತರಿಕೆ ಆಗುತ್ತಿರುವುದು ಜನರ ಮೊಗದಲ್ಲಿ ಕೊಂಚ ಸಂಭ್ರಮ ತಂದಿದೆ. ಆದರೆ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೊಗದಲ್ಲಿ ಯಾವುದೇ ಸಂಭ್ರಮ,ಸಡಗರ ಇಲ್ಲ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸುಮಾರು 1.30 ಲಕ್ಷ ನೌಕರರಿಗೆ ನವೆಂಬರ್‌ ಮಧ್ಯಭಾಗಕ್ಕೆ ಬಂದರೂ ಅಕ್ಟೋಬರ್‌ ತಿಂಗಳ ವೇತನ ಸುಮಾರು 364 ಕೋಟಿ ರು. ಬಿಡುಗಡೆಯಾಗಿಲ್ಲ. ಇಡೀ ರಾಜ್ಯದ ಜನತೆ ದೀಪಾವಳಿ ಸಂಭ್ರಮದಲ್ಲಿದ್ದಾರೆ. ನಾವು ಹಾಗೂ ನಮ್ಮ ಕುಟುಂಬಗಳು ಮಾತ್ರ ವೇತನ ಇಲ್ಲದೆ ಬೇಸರ ಅನುಭವಿಸಬೇಕಾಗಿದೆ ಎಂದು ಸಾರಿಗೆ ನೌಕರರು ಸಾರಿಗೆ ನಿಗಮಗಳ ಆಡಳಿತ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಎಸ್ಸಾರ್ಟಿಸಿಯಲ್ಲಿ ನೇಮಕಾತಿಗೆ ಬ್ರೇಕ್‌

ಕೊರೋನಾದಿಂದ ಆದಾಯ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸಾರಿಗೆ ನಿಗಮಗಳು, ನೌಕರರಿಗೆ ವೇತನ ನೀಡಲು ರಾಜ್ಯ ಸರ್ಕಾರ ಮೊರೆ ಹೋಗಿವೆ. ಅದರಂತೆ ಕಳೆದ ಏಳು ತಿಂಗಳಿಂದ ಸಾರಿಗೆ ನೌಕರರ ವೇತನ ಪಾವತಿಗೆ ಸರ್ಕಾರವೇ ಅನುದಾನ ನೀಡಿದೆ. ಇದೀಗ ಸಾರಿಗೆ ನಿಗಮಗಳ ಆದಾಯದಲ್ಲಿ ನಿರೀಕ್ಷಿತ ಏರಿಕೆಯಾಗದ ಪರಿಣಾಮ ನೌಕರರಿಗೆ ಅಕ್ಟೋಬರ್‌ ತಿಂಗಳ ವೇತನ ನೀಡಲು ಸಾಧ್ಯವಾಗದೆ ಸಾರಿಗೆ ನಿಗಮಗಳು ಮತ್ತೊಮ್ಮೆ ಸರ್ಕಾರದ ನೆರವಿಗೆ ಮನವಿ ಮಾಡಿವೆ.

ಪ್ರಸ್ತಾವನೆ ಸಲ್ಲಿಕೆ:

ಕೊರೋನಾದಿಂದ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಅಧೋಗತಿ ತಲುಪಿದೆ. ಸಾರಿಗೆ ಆದಾಯ ಡೀಸೆಲ್‌ ಹಾಗೂ ಇತರೆ ಖರ್ಚುಗಳಿಗೆ ಸರಿ ಹೊಂದುತ್ತಿದೆ. ಕಳೆದ ಏಳು ತಿಂಗಳಿಂದ ಸರ್ಕಾರವೇ ನೌಕರರ ವೇತನಕ್ಕೆ ನೆರವು ನೀಡಿದೆ. ಇದೀಗ ಅಕ್ಟೋಬರ್‌ ತಿಂಗಳ ವೇತನ ಪಾವತಿಗೆ ಆರ್ಥಿಕ ನೆರವು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಸರ್ಕಾರ ಅನುದಾನ ಬಿಡುಗಡೆಗೊಳಿಸುವ ವಿಶ್ವಾಸವಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕೊರೋನಾ ಪೂರ್ವದಲ್ಲಿ ಪ್ರತಿ ತಿಂಗಳ 10ರೊಳಗೆ ವೇತನ ನೀಡಲಾಗುತ್ತಿತ್ತು. ಕೊರೋನಾ ನಂತರ ಸಕಾಲಕ್ಕೆ ವೇತನ ಸಿಗುತ್ತಿಲ್ಲ.