ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) 2024-2025ನೇ ಹಣಕಾಸು ವರ್ಷದಲ್ಲಿ ದಾಖಲೆಯ 1,787 ಕೋಟಿ ರು. ವಹಿವಾಟು ನಡೆಸಿದೆ. ಸಂಸ್ಥೆ ಒಟ್ಟು 451 ಕೋಟಿ ರು. ಲಾಭಗಳಿಸಿದ್ದು, 135 ಕೋಟಿ ರು. ಅನ್ನು ಸರ್ಕಾರಕ್ಕೆ ಲಾಭಾಂಶವಾಗಿ ನೀಡಿದೆ.

ಬೆಂಗಳೂರು : ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) 2024-2025ನೇ ಹಣಕಾಸು ವರ್ಷದಲ್ಲಿ ದಾಖಲೆಯ 1,787 ಕೋಟಿ ರು. ವಹಿವಾಟು ನಡೆಸಿದೆ. ಸಂಸ್ಥೆ ಒಟ್ಟು 451 ಕೋಟಿ ರು. ಲಾಭಗಳಿಸಿದ್ದು, 135 ಕೋಟಿ ರು. ಅನ್ನು ಸರ್ಕಾರಕ್ಕೆ ಲಾಭಾಂಶವಾಗಿ ನೀಡಿದೆ. ವಹಿವಾಟು, ಲಾಭ, ಲಾಭಾಂಶ ಮೂರರಲ್ಲೂ ಇದು ಸಂಸ್ಥೆಯ ಪಾಲಿಗೆ ಹೊಸ ದಾಖಲೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಸ್‌ಡಿಎಲ್‌ ಅಧ್ಯಕ್ಷ ಅಪ್ಪಾಜಿ ಸಿ.ಎಸ್‌.ನಾಡಗೌಡ ಅವರು, ಸದ್ಯ ಪ್ರತಿ ವರ್ಷ 200 ಕೋಟಿ ರು. ವಹಿವಾಟು ಹೆಚ್ಚುತ್ತಿದ್ದು, 2028ರ ವೇಳೆಗೆ ಸಂಸ್ಥೆಯು 5 ಸಾವಿರ ಕೋಟಿ ರು. ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ವಿಜಯಪುರದಲ್ಲಿ ಘಟಕ:

ಇದೇ ವೇಳೆ ಮೈಸೂರು ಸ್ಯಾಂಡಲ್‌ ಸೋಪ್‌ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳದಲ್ಲಿ 50 ಎಕರೆ ವಿಸ್ತೀರ್ಣದಲ್ಲಿ ಮೈಸೂರು ಸ್ಯಾಂಡಲ್‌ ಸೋಪ್‌ ಉತ್ಪಾದನಾ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದೂ ಅವರು ತಿಳಿಸಿದರು.

ಇಟ್ಟಂಗಿಹಾಳದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಸರ್ಕಾರ ಈಗಾಗಲೇ 50 ಎಕರೆ ಭೂಮಿ ಮಂಜೂರು ಮಾಡಿದ್ದು, ಯಂತ್ರೋಪಕರಣ ಖರೀದಿ, ಕಾರ್ಖಾನೆ ಕಟ್ಟಡ ನಕ್ಷೆ ಸಿದ್ಧಪಡಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. 100 ಕೋಟಿ ರು. ವೆಚ್ಚದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲಾಗುವುದು. 200 ಮಂದಿಗೆ ನೇರ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಮೈಸೂರು ಸ್ಯಾಂಡಲ್‌ ಸೋಪ್‌ ಮಾರಾಟ ಪ್ರಮಾಣ ಶೇ.81ರಷ್ಟಿದೆ. ಆ ರಾಜ್ಯಗಳಿಗೆ ಉತ್ಪನ್ನ ಸಾಗಣೆ ಮಾಡಲು 7ರಿಂದ 8 ಕೋಟಿ ರು. ಖರ್ಚಾಗುತ್ತಿದೆ. ಈ ಹೆಚ್ಚುವರಿ ವೆಚ್ಚ ಕಡಿಮೆ ಮಾಡಲು ಮತ್ತು ಮಾರಾಟ ಪ್ರಮಾಣ ಹೆಚ್ಚಿಸಲು ವಿಜಯಪುರದಲ್ಲಿ ಘಟಕ ಸ್ಥಾಪಿಸಲಾಗುತ್ತಿದೆ. ಮೈಸೂರು, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಘಟಕವಿದೆ. ವಿಜಯಪುರದಲ್ಲಿ ಘಟಕ ಸ್ಥಾಪನೆಯಿಂದ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಲಿದೆ ಎಂದು ಹೇಳಿದರು.

ಕೆಎಸ್‌ಡಿಎಲ್‌ನಿಂದ ಸೌಂದರ್ಯವರ್ಧಕ, ಪರಿಮಳ, ಶವರ್‌ ಜೆಲ್‌ ಸೇರಿ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗಿದೆ. ಅವುಗಳನ್ನು ಪ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತಿದ್ದು, ಎಲ್ಲಾ ಪರೀಕ್ಷೆ ಮಾಡಿದ ಮೇಲೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಆದಾಯ ಹೆಚ್ಚಳ ಮಾಡಲಾಗುವುದು ಎಂದರು.

ತಮನ್ನಾ ಜಾಹೀರಾತು

ಚಿತ್ರೀಕರಣ ಮುಕ್ತಾಯ

ಕೆಎಸ್‌ಡಿಎಲ್‌ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುವ ಉದ್ದೇಶದಿಂದ ನಟಿ ತಮನ್ನಾ ಭಾಟಿಯಾ ಅವರನ್ನು ಎರಡು ವರ್ಷದ ಅವಧಿಗೆ ಪ್ರಚಾರ ರಾಯಭಾರಿಯನ್ನಾಗಿ ಮಾಡಲಾಗಿದೆ. ಈಗಾಗಲೇ ಅವರ ಜಾಹೀರಾತು ಚಿತ್ರೀಕರಣ ಮುಕ್ತಾಯವಾಗಿದ್ದು, ದೇಶದ ಪ್ರಮುಖ ಭಾಷೆಗಳಲ್ಲಿ ಜಾಹೀರಾತು ಪ್ರದರ್ಶನಗೊಳ್ಳಲಿದೆ. ತಮನ್ನಾ ಜತೆಗೆ ಕನ್ನಡದ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ, ನಟಿ ಸಾನ್ಯಾ ಅಯ್ಯರ್‌, ಐಶಾನಿ ಶೆಟ್ಟಿ ಮೂಲಕವೂ ಮೈಸೂರು ಸ್ಯಾಂಡಲ್‌ ಸೋಪ್‌ ಪ್ರಚಾರ ಮಾಡಲಾಗುತ್ತಿದೆ ಎಂದು ಸಿ.ಎಸ್‌. ಅಪ್ಪಾಜಿ ನಾಡಗೌಡ ಹೇಳಿದರು.

ಕಳೆದ ಮೂರು ವರ್ಷಗಳಲ್ಲಿನ ಉತ್ಪಾದನೆ

ವರ್ಷಉತ್ಪಾದನೆ ಪ್ರಮಾಣ

2022-2333,962 ಮೆಟ್ರಿಕ್‌ ಟನ್‌

2023-2437,916 ಮೆಟ್ರಿಕ್‌ ಟನ್‌

2024-2543,144 ಮೆಟ್ರಿಕ್‌ ಟನ್‌

2024-25ನೇ ಸಾಲಿನಲ್ಲಿ 1787 ಕೋಟಿ ರು. ದಾಖಲೆ ವಹಿವಾಟು, 451 ಕೋಟಿ ರು.ಲಾಭ ಗಳಿಸಿರುವ ಕೆಎಸ್‌ಡಿಎಲ್‌ ಸಂಸ್ಥೆ

ಮುಂದಿನ ದಿನಗಳಲ್ಲಿ 19 ಹೊಸ ಉತ್ಪನ್ನ ಬಿಡುಗಡೆ, 50 ದೇಶಗಳಲ್ಲಿ ಮೈಸೂರು ಸ್ಯಾಂಡಲ್‌ ಉತ್ಪನ್ನ ಮಾರಾಟದ ಗುರಿ

ಸೋಪ್‌ ಉತ್ಪಾದನೆ ಹೆಚ್ಚಿಸಲು ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳದಲ್ಲಿ 50 ಎಕರೆ ವಿಸ್ತೀರ್ಣದಲ್ಲಿ ಹೊಸ ಘಟಕ ಸ್ಥಾಪನೆ

ಇ-ಕಾಮರ್ಸ್‌ನಲ್ಲಿ ₹300 ಕೋಟಿ ವಹಿವಾಟು, ಜಿಎಸ್‌ಟಿ ಇಳಿಕೆಯಿಂದ ಉಳಿದ ಹಣದಲ್ಲಿ ಗುತ್ತಿಗೆ ನೌಕರರಿಗೆ ವಿಮೆ, ನೆರವು