ಮಂಡ್ಯ :  ಕೆಆರ್‌ಎಸ್‌ ಬಳಿ ಡಿಸ್ನಿಲ್ಯಾಂಡ್‌ ಮಾಡುವ ಬೃಹತ್‌ ಯೋಜನೆಯ ಪ್ರಸ್ತಾವನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಮಂಡ್ಯ ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಮಾತೆಯ ಪ್ರತಿಮೆಯನ್ನು ಸ್ಥಾಪನೆ ಮಾಡುವ ವಿಷಯದಲ್ಲಿ ವಿವಾದ ಉಂಟಾಗಿದೆ. ಇದು ಡಿಸ್ನಿಲ್ಯಾಂಡ್‌ ಯೋಜನೆಗೆ ಅಡ್ಡಿಯಾಗಲಾರದು. ಈ ಯೋಜನೆ ಜಾರಿಯಾದರೆ 50 ಸಾವಿರ ಮಂದಿಗೆ ಉದ್ಯೋಗ ಲಭಿಸಲಿದೆ. ಈ ಯೋಜನೆ ನನ್ನ ಕನಸಿನ ಕೂಸು. ಯಾರು ಎಷ್ಟೆಅಡ್ಡಿ ಪಡಿಸಿದರೂ ಡಿಸ್ನಿಲ್ಯಾಂಡ್‌ ಮಾದರಿ ಯೋಜನೆಯ ಅನುಷ್ಠಾನದಿಂದ ಆಗುವ ಲಾಭಗಳ ಕುರಿತು ವಿರೋಧಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುವುದು ಎಂದರು.

ಇನ್ನು ಸಭೆ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್‌ರನ್ನೇ ಕಣಕ್ಕಿಳಸಬೇಕೆಂದು ಶಾಸಕರು ಒತ್ತಡ ಹೇರಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಕುಮಾರಸ್ವಾಮಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಈ ಬಗ್ಗೆ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ ಎಂದಷ್ಟೇ ಹೇಳಿ ಸುಮ್ಮನಾದರು ಎಂದು ತಿಳಿದುಬಂದಿದೆ.

ಚಲುವರಾಯಸ್ವಾಮಿಗೆ ಪರೋಕ್ಷ ಟಾಂಗ್‌:  ನನ್ನ ಹಳೇ ಸ್ನೇಹಿತರೊಬ್ಬರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಾಕಷ್ಟುನೊಂದು ಹೇಳಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ. ನಾನು ಯಾವುದೇ ರಾಜಕೀಯ ಮಾಡದೇ ಅಭಿವೃದ್ಧಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ಜಾರಿ ಮಾಡಲು ನಿರ್ಧರಿಸಿದ್ದೇನೆ. 

ಹಳೇ ಸ್ನೇಹಿತರು ಕೊರಗುವುದು ಬೇಡ. ಅವರ ಕಳಕಳಿಯಂತೆ ಜಿಲ್ಲೆಯ ಅಭಿವೃದ್ಧಿಗೆ ಬದ್ಧನಾಗಿ ಕೆಲಸ ಮಾಡುತ್ತೇನೆ. ಅವರ ಕಳಕಳಿ, ಅಭಿಮಾನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೆಸರೇಳದೆ ಮಾಜಿ ಸಚಿವ ಚಲುವರಾಯಸ್ವಾಮಿಗೆ ಟಾಂಗ್‌ ಕೊಟ್ಟರು.