ಬೆಂಗಳೂರು(ಆ.01): ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರ ನಡುವೆಯೇ ಖಾಲಿ ಇರುವ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಕ್ಕೆ ಆಗಸ್ಟ್‌ 24ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ಮುಂದಾಗಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಅಭ್ಯರ್ಥಿಗಳು ನಿರ್ಧರಿಸಿದ್ದಾರೆ.

ರಾಜ್ಯದ ಆಯ್ದ ಕೇಂದ್ರಗಳಲ್ಲಿ ಮಾತ್ರ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತಿದೆ. ಕೊರೋನಾ ಪ್ರಕರಣ ಹೆಚ್ಚಳದ ಕಾರಣ ಆತಂಕದಿಂದ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವ ಸಾಧ್ಯತೆ ಕಡಿಮೆ. ಸೂಕ್ತ ಪುಸ್ತಕಗಳೂ ಸಿಗುತ್ತಿಲ್ಲ. ಹೀಗಾ​ಗಿ ಪರೀಕ್ಷೆ ಮುಂದೂಡಲು ಕೆಪಿಎಸ್‌ಸಿಗೆ ಸೂಚನೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ಅಭ್ಯರ್ಥಿಗಳ ಪರ ವಕೀಲ ಶಿವಕುಮಾರಗೌಡ ತಿಳಿ​ಸಿ​ದ್ದಾ​ರೆ.

ವಿವಿಧ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನ

ಅಲ್ಲದೆ, ವೈದ್ಯಕೀಯ ಕ್ಷೇತ್ರ, ಪೊಲೀಸ್‌ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ನೂರಾರು ಜನ ಕೆಎಎಸ್‌ ಪರೀಕ್ಷೆಗೆ ಸಜ್ಜಾಗಿದ್ದಾರೆ. ಆದರೆ ಈ ಎಲ್ಲ ಸಿಬ್ಬಂದಿಯನ್ನು ಕೊರೋನಾ ನಿಯಂತ್ರಣಕ್ಕಾಗಿ ನಿಯೋಜಿಸಿರುವುದರಿಂದ ಅಂತಹವರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ.

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಗಳನ್ನು ಬರೆಯುವ ಹಲವು ಅಭ್ಯರ್ಥಿಗಳು ಕೆಪಿಎಸ್‌ಸಿ ನಡೆಸುವ ಗೆಜೆಟೆಡ್‌ ಪ್ರೊಬೆಷನರಿ ಪರೀಕ್ಷೆಗಳಲ್ಲಿ ಭಾಗಿಯಾಗುತ್ತಾರೆ. ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ದೆಹಲಿ, ಹೈದ್ರಾಬಾದ್‌ ಸೇರಿದಂತೆ ರಾಜ್ಯದ ಹೊರ ಭಾಗಗಳಲ್ಲಿ ಅವರಲ್ಲಿ ಅನೇಕರು ನೆಲೆಸಿದ್ದಾರೆ. ಕೊರೋನಾದಿಂದ ಅವರು ಹಿಂದಿರುಗಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಬೆಂಗಳೂರು ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳು ಸ್ಥಗಿತವಾಗಿವೆ.