ಬೆಂಗಳೂರು(ಅ.06): ‘ಕೇಂದ್ರದ ಜನ ವಿರೋಧಿ ನೀತಿ, ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಉಪ ಚುನಾವಣೆಗಳ ಹೋರಾಟವನ್ನು ಹತ್ತಿಕ್ಕಲು ರಾಜಕೀಯ ಕುತಂತ್ರದಿಂದ ಸಿಬಿಐ ದಾಳಿ ನಡೆದಿದೆ. ಇಂತಹ ಕುತಂತ್ರ, ಷಡ್ಯಂತ್ರಗಳಿಗೆ ಈ ಡಿ.ಕೆ. ಶಿವಕುಮಾರ್‌ ಹೆದರುವ ಮಗ ಅಲ್ಲ. ಜೈಲು, ಎಫ್‌ಐಆರ್‌ಗಳ ಮೂಲಕ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ’.

- ಇದು ಸಿಬಿಐ ದಾಳಿ ಹಾಗೂ 12 ಗಂಟೆಗಳ ಸತತ ಪರಿಶೀಲನೆ ಬಳಿಕ ಸೋಮ​ವಾರ ಸಂಜೆ ಸದಾಶಿವನಗರದ ತಮ್ಮ ನಿವಾಸದಿಂದ ಹೊರ ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹೇಳಿದ ಮಾತು.

‘ನಿಮಗೆ ಇನ್ನೂ ಸಮಯ ನೀಡುತ್ತೇನೆ. ನನ್ನ ಬಗೆಗಿನ ಎಲ್ಲಾ ದಾಖಲೆಗಳನ್ನು ಜಾಲಾಡಿಸಿ. ನಾನು ಯಾವುದೇ ತಪ್ಪು ಮಾಡಿದ್ದರೂ ನಿಮ್ಮ ಸರ್ಕಾರ ಹಾಗೂ ನ್ಯಾಯಾಲಯ ನೀಡುವ ಶಿಕ್ಷೆಗೆ ಬದ್ಧನಾಗಿದ್ದೇನೆ’ ಎಂದೂ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಸಿಬಿಐ ಪರಿಶೀಲನೆ ಪ್ರಕ್ರಿಯೆ ಮುಗಿದ ಬಳಿಕ ಸಂಜೆ ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನಾನು ಹೋರಾಟಕ್ಕೆ ಸಜ್ಜಾದಾಗಲೆಲ್ಲಾ ಈ ರೀತಿ ದಾಳಿ ಮಾಡುವುದು ಸಾಮಾನ್ಯ. ಇದೀಗ ರೈತ ವಿರೋಧಿ ಕಾಯಿದೆಗಳು, ಉತ್ತರ ಪ್ರದೇಶದ ಅತ್ಯಾಚಾರ ಹಾಗೂ ರಾಜ್ಯದಲ್ಲಿನ ಭ್ರಷ್ಟಾಚಾರದ ವಿರುದ್ಧ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದೆ. ಅಲ್ಲದೆ, ಎರಡು ಕ್ಷೇತ್ರಗಳ ಉಪ ಚುನಾವಣೆಯ ಹೋರಾಟಕ್ಕೂ ಅಣಿಯಾಗಿದ್ದೆವು. ಹೀಗಾಗಿಯೇ ಸೆ.30ಕ್ಕೆ ಎಫ್‌ಐಆರ್‌ ದಾಖಲಿಸಿ ತರಾತುರಿಯಲ್ಲಿ ಸಿಬಿಐ ದಾಳಿ ಮಾಡಿದ್ದಾರೆ. ಇಷ್ಟುದಿನ ಸುಮ್ಮನಿದ್ದವರು ತರಾತುರಿಯಲ್ಲಿ ಎಫ್‌ಐಆರ್‌ ಹಾಕಿ ದಾಳಿ ಮಾಡಿದ್ದು ಏಕೆ? ಇದಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅನುಮತಿ ನೀಡಿದ್ದು ಯಾಕೆ?’ ಎಂದು ಅವರು ತರಾಟೆಗೆ ತೆಗೆದುಕೊಂಡರು.

‘ನನ್ನ ನಾಲ್ಕು ದಶಕಗಳ ರಾಜಕೀಯದಲ್ಲಿ ಈ ಐ.ಟಿ., ಇ.ಡಿ. ಪ್ರಕರಣ ಹೊರತುಪಡಿಸಿ ಒಂದು ಅಪರಾಧದ ಆರೋಪವೂ ನನ್ನ ಮೇಲೆ ಇಲ್ಲ. ಇದೀಗ 2013-18ರವರೆಗೆ ನಾನು ಸಚಿವನಾಗಿದ್ದ ಅವಧಿಯ ತನಿಖೆಗೆ ಮುಂದಾಗಿದ್ದಾರೆ. ಈಗಾಗಲೇ ಬೇನಾಮಿ ಪ್ರಕರಣದ ಹೆಸರಲ್ಲಿ ಹಿಂಸೆ ಮಾಡುತ್ತಿದ್ದಾರೆ. ಮತ್ತೊಂದು ಬೇನಾಮಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಈ ರೀತಿಯ ಎಫ್‌ಐಆರ್‌ ದಾಖಲಿಸಲು ಅವಕಾಶವೇ ಇಲ್ಲ ಎಂದು ನಮ್ಮ ವಕೀಲರು ಹೇಳಿದ್ದಾರೆ. ಎಲ್ಲವನ್ನೂ ಧೈರ್ಯವಾಗಿ, ಕಾನೂನಾತ್ಮಕವಾಗಿ ಎದುರಿಸುತ್ತೇನೆ. ನಾನು ಯಾವುದಕ್ಕೂ ಹೆದರುವವನಲ್ಲ’ ಎಂದು ಹೇಳಿದರು.

ದಾಳಿಗಳು ನನಗೆ ಹೊಸದಲ್ಲ:

ಪ್ರತಿ ಬಾರಿ ನಾನು ಹೋರಾಟಕ್ಕೆ ಅಣಿಯಾದಾಗಲೂ ನನ್ನ ತುಳಿಯಲು ಯತ್ನಿಸಿದ್ದಾರೆ. ಗುಜರಾತ್‌ ರಾಜ್ಯಸಭಾ ಚುನಾವಣೆ ವೇಳೆ ಶಾಸಕರಿಗೆ ರಕ್ಷಣೆ ನೀಡಿದ್ದಕ್ಕಾಗಿ 2017ರಲ್ಲಿ ಐಟಿ ದಾಳಿ ಮಾಡಿದರು. ಬಳಿಕ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ನನ್ನ ಮೇಲೆ ಬೇನಾಮಿ ಪ್ರಕರಣ ದಾಖಲಿಸಿದರು. 2019-20ರಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ 10-11 ದಿನ ಜೈಲಿನಲ್ಲಿ 48 ದಿನ ತಿಹಾರ್‌ ಜೈಲಿನಲ್ಲಿ ಇಟ್ಟಿದ್ದರು. ಚಾಜ್‌ರ್‍ಶೀಟ್‌ ಹಾಕುವ ಮೊದಲೇ ನನಗೆ ವಕೀಲರು ಜಾಮೀನು ಕೊಡಿಸಿದ್ದರು. ಇದೀಗ ಮತ್ತೆ ಉಪ ಚುನಾವಣೆ ದೃಷ್ಟಿಇಟ್ಟುಕೊಂಡು ದಾಳಿ ನಡೆಸಿದ್ದಾರೆ ಎಂದು ಶಿವಕುಮಾರ್‌ ದೂರಿದರು.

ಪರಪ್ಪನ ಅಗ್ರಹಾರದಿಂದ ಬಂದವರು ಯಾರು?

‘ನಾನು ತಿಹಾರ್‌ ಜೈಲಿನಿಂದ ಬಂದಾಗ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಕ್ಕೆ ‘ಜೈಲಿನಿಂದ ಬಂದವನಿಗೆ ಮೆರವಣಿಗೆ ಬೇಕಾ’ ಎಂದು ಕಾನೂನು ಸಚಿವರು ಕೇಳಿದ್ದಾರೆ. ಪರಪ್ಪನ ಅಗ್ರಹಾರದಿಂದ ವಿಜಯದ ಸಂಕೇತ (ವಿಕ್ಟರಿ) ತೋರಿಸಿಕೊಂಡು ಬಂದವರು ಯಾರು?’ ಎಂದು ಡಿ.ಕೆ. ಶಿವಕುಮಾರ್‌ ಅವರು ಜೈಲು​ವಾ​ಸಿ​ಯಾ​ಗಿದ್ದ ಕೆಲವು ಆಡ​ಳಿತ ಪಕ್ಷ​ದ ಮುಖಂಡರ ಹೆಸ​ರೆ​ತ್ತ​ದೇ ಪ್ರಶ್ನಿಸಿದರು.

ದಾಳಿಗೆ ನಾನೊಬ್ನೇ ಸಿಕ್ಕಿದ್ದಾ?

ಸತತವಾಗಿ ನನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. 30-40 ವರ್ಷದಿಂದ ಯಾವ ಮಂತ್ರಿಯೂ ನನ್ನಂತೆ ಆಗಿಲ್ಲ. ಪಾಪ ಎಲ್ಲರೂ ಹರಿಶ್ಚಂದ್ರನ ಮೊಮ್ಮಕ್ಕಳು. ನಿಮಗೆ ದಾಳಿ ಮಾಡಲು ಡಿ.ಕೆ. ಶಿವಕುಮಾರ್‌ ಮಾತ್ರ ಸಿಕ್ಕಿದ್ದಾ? ಬೇರೆ ಯಾರೂ ಸಿಕ್ಕಿಲ್ಲವಾ?

- ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ