ಮೈಸೂರು[ಜ.09]: ಜೆಎನ್‌ಯು ಹೋರಾಟದಲ್ಲಿ ಭಾಗಿಯಾಗಿರುವ ನಟಿ ದೀಪಿಕಾ ಪಡುಕೋಣೆ ಅವರ ನಟನೆಯ ‘ಛಪಾಕ್‌’ ಚಿತ್ರ ಚೆನ್ನಾಗಿದ್ದರೆ ಜನರೇ ನೋಡುತ್ತಾರೆ. ಅವರಿಗೆ ಆಲ್‌ ದಿ ಬೆಸ್ಟ್‌ ಹೇಳುತ್ತೇನೆ ಎಂದು ಸಂಸದ ಪ್ರತಾಪ್‌ ಸಿಂಹ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಿಕಾ ಪಡುಕೋಣೆ ನಟನೆಯ ಸಿನಿಮಾ ಮುಂದಿನ ವಾರ ಬಿಡುಗಡೆ ಆಗುತ್ತಿದೆ. ಅವರಿಗೆ ಆಲ್‌ ದಿ ಬೆಸ್ಟ್‌ ಹೇಳುತ್ತೇನೆ. ಆದರೆ, ಇದೇ ಜೆಎನ್‌ಯು ಮುಚ್ಚಿಸಲು ಯತ್ನಿಸಿದ್ದ ಇಂದಿರಾ ಗಾಂಧಿ ಅವರ ನಿರ್ಧಾರದ ಬಗ್ಗೆಯೂ ನಟಿ ಚಿಂತಿಸಬೇಕಿತ್ತು. ಜೆಎನ್‌ಯುಗೆ 45 ದಿನಗಳ ಕಾಲ ಬೀಗ ಹಾಕಿಸಿದ್ದರು. ಈ ಬಗ್ಗೆ ಕಾಂಗ್ರೆಸ್‌ನ ಅಭಿಪ್ರಾಯ ಏನು ಎಂದು ಪ್ರಶ್ನಿಸಿದರು. ಜೆಎನ್‌ಯು ಘಟನೆಗೂ ಹಿಂದೂಪರ ಸಂಘಟನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

JNU ಹೋರಾಟಕ್ಕೆ ದೀಪಿಕಾ ಪಡುಕೋಣೆ ಬೆಂಬಲ!

ಇಡೀ ದೇಶದಲ್ಲಿ 600ಕ್ಕೂ ಹೆಚ್ಚು ಯುನಿವರ್ಸಿಟಿಗಳು ಇವೆ. ಆದರೆ ಜೆಎನ್‌ಯು, ಜಾಮಿಯಾ ಇಸ್ಲಾಮಿಯಾ ಇವೆರಡೆ ಅಲ್ಲ. ಎಲ್ಲಾ ಕಡೆ ಪಾಠ ಪ್ರವಚನಗಳು ಚೆನ್ನಾಗಿ ನಡೆಯುತ್ತಿವೆ. ಅಂದರೆ ದೇಶ ವಿರೋಧಿ ಚಟುವಟಿಕೆ ಎಲ್ಲಿದೆ ಎಂದು ಇದರಿಂದಲೇ ಅರ್ಥವಾಗುತ್ತದೆ ಎಂದು ಕಿಡಿಕಾರಿದರು.