Asianet Suvarna News Asianet Suvarna News

ಅಮಾಯಕರಿಗೆ ರೌಡಿ ಪಟ್ಟಿಯಿಂದ ಮುಕ್ತಿ: ಸುಳ್ಳು ಕೇಸ್‌ನಲ್ಲಿ ಸಿಲುಕಿರುವವರು ಇನ್ನು ರೌಡಿಗಳಲ್ಲ!

* ರೌಡಿಶೀಟರ್‌ ಪರಿಶೀಲನೆಗೆ ಸಚಿವ ಆರಗ ಸೂಚನೆ

* ಅಮಾಯಕರಿಗೆ ರೌಡಿ ಪಟ್ಟಿಯಿಂದ ಮುಕ್ತಿ

* ಸುಳ್ಳು ಕೇಸ್‌ನಲ್ಲಿ ಸಿಲುಕಿರುವವರು ಇನ್ನು ರೌಡಿಗಳಲ್ಲ

* ಕನ್ನಡಪರ, ರೈತ ಹೋರಾಟಗಾರರೂ ರೌಡಿಶೀಟರ್‌ನಲ್ಲಿ

* ರೌಡಿಶೀಟರ್‌ ಪಟ್ಟಿಪರಿಶೀಲನೆ ಅಧಿಕಾರ ಎಸ್ಪಿಗಳಿಗೆ

Keep strict vigil on illegal immigrants overstaying foreigners  Home Minister Araga Jnanendra to police pod
Author
Bangalore, First Published Sep 7, 2021, 7:50 AM IST

ಬೆಂಗಳೂರು(ಸೆ.07): ರಾಜ್ಯದಲ್ಲಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದ ಅಮಾಯಕರ ಮೇಲೂ ರೌಡಿ ಶೀಟರ್‌ ಪಟ್ಟಿತೆಗೆಯಲಾಗಿದೆ. ಹೀಗಾಗಿ ರಾಜ್ಯಾದ್ಯಂತ ಎಲ್ಲಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿ ಶೀಟರ್‌ ಪಟ್ಟಿಯನ್ನು ಕಾನೂನು ಪ್ರಕಾರ ಪುನರ್‌ ಪರಿಶೀಲನೆ ನಡೆಸಿ ಪರಿಷ್ಕರಣೆ ಮಾಡಲು ಸೂಚಿಸಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಈ ಮೂಲಕ ಸುಳ್ಳು ಪ್ರಕರಣ ಹಾಗೂ ರೌಡಿ ಶೀಟ್‌ ತೆಗೆಯುವಂತಹ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಿದ್ದರೂ ರೌಡಿ ಪಟ್ಟಿಗೆ ಸೇರ್ಪಡೆಯಾಗಿರುವವರಿಗೆ ರೌಡಿ ಹಣೆಪಟ್ಟಿಯಿಂದ ಮುಕ್ತಿ ಕೊಡಲು ಗೃಹ ಇಲಾಖೆ ಮುಂದಾಗಿದೆ.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪದೇ ಪದೇ ಗಂಭೀರ ಪ್ರಕರಣಗಳಲ್ಲಿ ತೊಡಗಿಸಿಕೊಂಡವರು, ಸಮಾಜಘಾತುಕ, ಕಾನೂನು ಭಂಗ ಉಂಟಾಗುವ ಚಟುವಟಿಕೆಯಲ್ಲಿ ಭಾಗಹಿಸುವವರ ಮೇಲೆ ರೌಡಿಶೀಟರ್‌ ಪಟ್ಟಿತೆರೆಯಲಾಗುತ್ತದೆ. ಆದರೆ, ರಾಜ್ಯದಲ್ಲಿ ಹಲವು ಪ್ರಕರಣಗಳಲ್ಲಿ ಸಣ್ಣ ಪುಟ್ಟಘಟನೆಗಳಲ್ಲಿ ಭಾಗಿಯಾದ ವ್ಯಕ್ತಿಗಳನ್ನೂ ರೌಡಿ ಪಟ್ಟಿಗೆ ಸೇರಿಸಲಾಗಿದೆ. ಅಣ್ಣ-ತಮ್ಮಂದಿರ ಆಸ್ತಿ ಗಲಾಟೆಯಲ್ಲಿ ಭಾಗವಹಿಸಿದವರ ಮೇಲೂ ರೌಡಿ ಪಟ್ಟಿತೆಗೆದಿರುವ ಉದಾಹರಣೆ ಇದೆ. ಕನ್ನಡಪರ, ರೈತಪರ ಹಾಗೂ ಇನ್ನಿತರ ಜನಪರ ಚಳವಳಿಯಲ್ಲಿ ಭಾಗವಹಿಸಿದ್ದವರ ಮೇಲೂ ರೌಡಿ ಶೀಟರ್‌ ತೆಗೆದಿದ್ದಾರೆ.

ಹೀಗಾಗಿ, ಇಂತಹ ಕಾನೂನು ಭಂಗ ಉಂಟು ಮಾಡದಿದ್ದರೂ ರೌಡಿಗಳಾದ ಸಾವಿರಾರು ಮಂದಿ ಇದ್ದಾರೆ. ಇಂತಹವರ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರಲ್ಲದವರನ್ನು ರೌಡಿ ಪಟ್ಟಿಯಿಂದ ಕೈ ಬಿಡಲು ಪೊಲೀಸ್‌ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ವರಿಷ್ಠಾಧಿಕಾರಿಯಿಂದ ಪರಿಷ್ಕರಣೆ:

ಪ್ರತಿ ಪೊಲೀಸ್‌ ಠಾಣೆಯಲ್ಲಿರುವ ರೌಡಿಶೀಟರ್‌ ಪಟ್ಟಿಯನ್ನು ಕಾನೂನಿನ ಅಡಿ ಪುನರ್‌ ಪರಿಶೀಲನೆ ನಡೆಸ ವೈಜ್ಞಾನಿಕವಾಗಿ ಪರಿಷ್ಕರಿಸಬೇಕು. ಅಮಾಯಕರ ಹೆಸರು ಒಂದು ವೇಳೆ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಪರಿಷ್ಕರಿಸಲು ನಿರ್ಧಾರ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದರು.

ಜೊತೆಗೆ ಅಪರಾಧ ಸಭೆಗಳನ್ನು ಪ್ರತಿ ತಿಂಗಳು ನಡೆಸಬೇಕು. ಎಫ್‌ಐಆರ್‌ ಹಾಕಿದ ನಿಗಿದಿತ ದಿನಗಳಲ್ಲಿ ಚಾಜ್‌ರ್‍ಶೀಟ್‌ ಹಾಕಬೇಕು ಎಂದು ಸೂಚಿಸಲಾಗಿದೆ. ಸ್ಫೋಟಕ ವಸ್ತು ತಯಾರಿಕೆ ಹಾಗೂ ಸಾಗಾಣಿಕೆ ಮೇಲೆ ವಿಶೇಷ ನಿಗಾ ವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಗಸ್ತು ಹೆಚ್ಚಳ:

ಗ್ರಾಮೀಣ ಪ್ರದೇಶದಲ್ಲಿ ಪೋಲೀಸರ ಗಸ್ತು ಪದ್ದತಿಯನ್ನು ಪರಿಷ್ಕರಿಸಿ ಅಪರಾಧ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣ ಪ್ರದೇಶದಲ್ಲಿ ಈ-ಗಸ್ತು ವ್ಯವಸ್ಥೆ ಬಲಪಡಿಸಲು ತೀರ್ಮಾನಿಸಲಾಗಿದೆ.

ಉಳಿದಂತೆ ರಾಜ್ಯದಲ್ಲಿ ಅಕ್ರಮ ಜಾನುವಾರು ಸಾಗಣೆ ಹಾಗೂ ಹತ್ಯೆಗೆ ಯಾವುದೇ ರೀತಿಯ ಅವಕಾಶ ನೀಡಬಾರದು. ಕಾನೂನು ಉಲ್ಲಂಘಿಸುವ ಶಕ್ತಿಗಳನ್ನು ಸಮರ್ಥವಾಗಿ ತಡೆಯಬೇಕು ಎಂದು ಸೂಚಿಸಲಾಗಿದೆ ಎಂದರು.

ಅಕ್ರಮ ಕ್ಯಾಸಿನೊಗಳಿಗೆ ಅಧಿಕಾರಿಗಳೇ ಹೊಣೆ:

ಬೆಂಗಳೂರು ನಗರದಲ್ಲಿ ಅಕ್ರಮ ಕ್ಯಾಸಿನೊಗಳು ಹೆಚ್ಚಾಗುತ್ತಿವೆ. ಎಲ್ಲೆಲ್ಲಿ ಅಕ್ರಮ ಕ್ಯಾಸಿನೊ ಕ್ಲಬ್‌, ಮಟ್ಕಾ ನಡೆಯುತ್ತದೆ ಎಂಬುದನ್ನು ಪರಿಶೀಲಿಸುತ್ತೇವೆ. ಅಕ್ರಮ ಕ್ಯಾಸಿನೊ ಕ್ಲಬ್‌ ಕಂಡು ಬಂದರೆ ಆಯಾ ಠಾಣೆ ಅಧಿಕಾರಿಗಳನ್ನೇ ಹೊಣೆ ಮಾಡುತ್ತೇವೆ. ಹೀಗಾಗಿ ಅಕ್ರಮ ತಡೆಯಬೇಕು ಎಂದು ಎಚ್ಚರಿಕೆ ನೀಡಿದರು.

Follow Us:
Download App:
  • android
  • ios