Asianet Suvarna News Asianet Suvarna News

‘ಕಾವೇರಿ’ ವೆಬ್‌ಸೈಟ್‌ ಹಗರಣ: ಸಿಸಿಬಿಯಿಂದ ಕಂಪ್ಯೂಟರ್‌ ವಶ

ಅಕ್ರಮ ನಿವೇಶನ ಪರಭಾರೆ ಹಗರಣ ರಾಜ್ಯ ವ್ಯಾಪ್ತಿ ಹಲವು ಸಬ್‌ ರಿಜಿಸ್ಟ್ರರ್‌ ಕಚೇರಿಗಳಲ್ಲಿ ಹರಡಿದ್ದು, 350ಕ್ಕೂ ಹೆಚ್ಚು ನಿವೇಶನಗಳನ್ನು ಕಾನೂನು ಬಾಹಿರವಾಗಿ ಸೇಲ್‌ ಅಗ್ರಿಮೆಂಟ್‌ ಮೇಲೆ ಖರೀದಿದಾರರಿಗೆ ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವೆಬ್‌ಸೈಟ್‌ನಲ್ಲಿ ಅಡಕವಾಗಿದ್ದ ರೆವಿನ್ಯೂ ನಿವೇಶನಗಳ ದಾಖಲೆಗಳನ್ನು ತಿದ್ದುಪಡಿ ಮಾಡಿದ ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಕೆಲ ಅಧಿಕಾರಿಗಳು, ಆ ನಿವೇಶನಗಳನ್ನು ಖರೀದಿದಾರರ ಹೆಸರಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ.

Kaveri website scam ccb seized computer
Author
Bangalore, First Published Oct 31, 2019, 7:56 AM IST

ಬೆಂಗಳೂರು(ಅ.31): ರಾಜ್ಯ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ‘ಕಾವೇರಿ’ ವೆಬ್‌ಸೈಟ್‌ ತಿರುಚಿ ಕಂದಾಯ ನಿವೇಶನಗಳ ಅಕ್ರಮ ಪರಭಾರೆ ಪ್ರಕರಣ ಸಂಬಂಧ ಸಿಸಿಬಿ ತನಿಖೆ ಬಿರುಸುಗೊಂಡಿದ್ದು, ಇಲಾಖೆಯ ಕೇಂದ್ರ ಕಚೇರಿಯ ಬಹುಮುಖ್ಯವಾದ ಕಂಪ್ಯೂಟರ್‌ಗಳು ಸೇರಿದಂತೆ ಕೆಲವು ವಸ್ತುಗಳನ್ನು ಬುಧವಾರ ಜಪ್ತಿ ಮಾಡಿದೆ.

ನಗರದ ಕೆ.ಆರ್‌.ಸರ್ಕಲ್‌ ವೃತ್ತದಲ್ಲಿರುವ ರಾಜ್ಯ ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ ತೆರಳಿದ ಸಿಸಿಬಿ ಪೊಲೀಸರು, ಇಲಾಖೆಯ ವೆಬ್‌ಸೈಟ್‌ ನಿರ್ವಹಣೆ ವಿಭಾಗದ ಐದು ಕಂಪ್ಯೂಟರ್‌ಗಳು ಹಾಗೂ ಹಾರ್ಡ್‌ಡಿಸ್ಕ್‌ ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಇದೇ ವೇಳೆ ಕೆಲವು ಸಿಬ್ಬಂದಿಯನ್ನು ಸಹ ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದಿದ್ದಾರೆ.

ದುಬೈನಿಂದ ಬಂದ ಕಪ್ಪು ಬಿಳಿ ಮಾಡೋ ಕೃಷ್ಣೇಗೌಡ, ವಂಚಿಸಿದ್ದು ಕೋಟಿಗಳ ಲೆಕ್ಕದಲ್ಲಿ!

ಈ ಸಂಬಂಧ ಮಾತನಾಡಿದ ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ಅವರು, ಮುದ್ರಾಂಕ ಇಲಾಖೆಯ ಪ್ರಮುಖ ಐದು ಕಂಪ್ಯೂಟರ್‌ಗಳು ಜಪ್ತಿಯಾಗಿವೆ. ಇವುಗಳಲ್ಲಿರುವ ದತ್ತಾಂಶಗಳ ಪರಿಶೀಲಿಸಿದಾಗ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವ ಸಿಗಲಿದೆ ಎಂದಿದ್ದಾರೆ.

ಅಲ್ಲದೆ, ಪ್ರಕರಣದ ಕುರಿತು ಕೆಲವು ಮಾಹಿತಿಯನ್ನು ಕೋರಿ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಮಹಾನಿರೀಕ್ಷಕ ಡಾ.ಕೆ.ವಿ.ತ್ರಿಲೋಕ ಚಂದ್ರ ಅವರಿಗೆ ಪತ್ರ ಬರೆಯಲಾಗಿದೆ. ಈ ಅಕ್ರಮ ಯಾವಾಗ ನಡೆದಿದೆ. ಆ ಸಮಯದಲ್ಲಿ ವೆಬ್‌ಸೈಟ್‌ ನಿರ್ವಹಣೆ ಹೊತ್ತಿದ್ದ ಸಿಬ್ಬಂದಿ ಯಾರು ಎಂಬುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಕೋರಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಈ ಪ್ರಕರಣ ಸಂಬಂಧ ಮಾದನಾಯಕನಹಳ್ಳಿ, ದಾಸರಹಳ್ಳಿ, ಲಗ್ಗೆರೆ ಹಾಗೂ ಪೀಣ್ಯ ವಿಭಾಗದ ಸಬ್‌ ರಿಜಿಸ್ಟ್ರಾರ್‌ಗಳಿಗೆ ಸಿಸಿಬಿ ತನಿಖೆ ಬಿಸಿ ತಟ್ಟಿದ್ದು, ಕೇಂದ್ರ ಕಚೇರಿ ಮೇಲೆ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ.

ಕೆಲ ದಿನಗಳ ಹಿಂದೆ ಕಂದಾಯ ನಿವೇಶನಗಳ ಪರಭಾರೆ ಸಂಬಂಧ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಕಾವೇರಿ ವೆಬ್‌ಸೈಟ್‌ ತಿರುಚಿ ಕೆಲವರು ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಇಲಾಖೆಯ ಮಹಾನಿರೀಕ್ಷಕ ಡಾ.ಕೆ.ವಿ.ತ್ರಿಲೋಕ್‌ಚಂದ್‌ ದೂರು ನೀಡಿದ್ದರು.

350 ನಿವೇಶನಗಳ ಅಕ್ರಮ?

ಅಕ್ರಮ ನಿವೇಶನ ಪರಭಾರೆ ಹಗರಣ ರಾಜ್ಯ ವ್ಯಾಪ್ತಿ ಹಲವು ಸಬ್‌ ರಿಜಿಸ್ಟ್ರರ್‌ ಕಚೇರಿಗಳಲ್ಲಿ ಹರಡಿದ್ದು, 350ಕ್ಕೂ ಹೆಚ್ಚು ನಿವೇಶನಗಳನ್ನು ಕಾನೂನು ಬಾಹಿರವಾಗಿ ಸೇಲ್‌ ಅಗ್ರಿಮೆಂಟ್‌ ಮೇಲೆ ಖರೀದಿದಾರರಿಗೆ ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ವೆಬ್‌ಸೈಟ್‌ನಲ್ಲಿ ಅಡಕವಾಗಿದ್ದ ರೆವಿನ್ಯೂ ನಿವೇಶನಗಳ ದಾಖಲೆಗಳನ್ನು ತಿದ್ದುಪಡಿ ಮಾಡಿದ ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಕೆಲ ಅಧಿಕಾರಿಗಳು, ಆ ನಿವೇಶನಗಳನ್ನು ಖರೀದಿದಾರರ ಹೆಸರಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟವಾಗಿದೆ ಎನ್ನಲಾಗಿದೆ.

2018ರ ಡಿಸೆಂಬರ್‌ನಲ್ಲಿ ನಿವೇಶನವೊಂದರ ನೋಂದಣಿಗೆ ಸಂಬಂಧಿಸಿದ ಇಲಾಖೆ ಮಹಾನಿರೀಕ್ಷಕರಿಗೆ ಬಂದ ದೂರು ಸಬ್‌ ರಿಜಿಸ್ಟ್ರಾರ್‌ ಕಚೇರಿಗಳ ಭಾನಗಡಿ ಹೊರ ಬರಲು ಕಾರಣವಾಗಿದೆ. ಅನಧಿಕೃತ ಬಡಾವಣೆಗಳಲ್ಲಿರುವ ನಿವೇಶನಗಳನ್ನು ಸೇಲ್‌ ಅಗ್ರಿಮೆಂಟ್‌ ಆಧಾರದಲ್ಲಿ ನೋಂದಣಿ ಮಾಡಿದ ಪ್ರಕರಣ ಬಯಲಾಯಿತು. ಕಾವೇರಿ ವೆಬ್‌ಸೈಟ್‌ನ ತಂತ್ರಾಂಶದಲ್ಲಿ ತಿದ್ದುಪಡಿ ಮಾಡಿ ನಡೆಸಿರುವುದು ಆಯುಕ್ತರಿಗೆ ಸ್ಪಷ್ಟವಾಯಿತು. ಬಳಿಕ ಸೈಬರ್‌ ಕ್ರೈಂ ಠಾಣೆಗೆ ಅವರು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

INX ಹಗರಣ: ದ.ಕ, ಶಿವಮೊಗ್ಗದ ಮಾಜಿ ಡಿಸಿ ಕೂಡಾ ಆರೋಪಿ!

ನಿವೇಶನ ನೋಂದಣಿಗೆ ಸಂಬಂಧಿಸಿದ ಈ ಸೇವೆಗಳನ್ನು ಜನರಿಗೆ ಸುಲಭವಾಗಿ ದಾಟಿಸುವ ಸದ್ದುದೇಶದಿಂದ ಇಲಾಖೆ ಕಾವೇರಿ ಆನ್‌ಲೈನ್‌ ಸೇವೆಗಳನ್ನು ಆರಂಭಿಸಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9,11ಎ ಮತ್ತು 11ಬಿ ವಿತರಿಸುತ್ತದೆ. ಕಾವೇರಿ ಮತ್ತು ಇ-ಸ್ವತ್ತು ತಂತ್ರಾಂಶಗಳವನ್ನು ಸಂಯೋಜಿಸಲಾಗಿದೆ. ಆದರೆ ಕೆಲ ಸಬ್‌ ರಿಜಿಸ್ಟ್ರಾರ್‌ಗಳು ಈ ಸಂಯೋಜನಾ ಉದ್ದತಿಯನ್ನು ಉಲ್ಲಂಘಿಸಿ ಖರೀದಿದಾರರಿಗೆ ಹೆಸರಿಗೆ ನಿವೇಶನ ನೋಂದಣಿ ಮಾಡಿಕೊಟ್ಟಿದ್ದಾರೆ ಎಂದು ವಿವರಿಸಿದ್ದಾರೆ.

ಇ-ಸ್ವತ್ತು ನಲ್ಲಿ ಇಲ್ಲದ ನಿವೇಶನವನ್ನು ಸೇಲ್‌ ಅಗ್ರಿಮೆಂಟ್‌ ಮೇಲೆ ನೋಂದಣಿ ಮಾಡಿದ ಬಳಿಕ ಕಾವೇರಿ ತಂತ್ರಾಂಶದಲ್ಲಿ ಅದನ್ನು ಸೇಲ್‌ ಡೀಡ್‌ ಆಗಿ ಬದಲಿಸಿರುವುದು ಗೊತ್ತಾಗಿದೆ. ಆದರೆ ಇದಕ್ಕೆ ನಿಖರ ಕಾರಣ ಮತ್ತು ಜಿಲ್ಲಾ ನೋಂದಣಾಧಿಕಾರಿಗಳ ಅನುಮತಿ ಪಡೆಯದೆ ತಂತ್ರಾಂಶದಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ. ಹೀಗಿದ್ದರೂ ಅಧಿಕಾರಿಗಳ ಕಣ್ತಪ್ಪಿಸಿ ಅಕ್ರಮವೆಸಗಿದ್ದಾರೆ ಎಂದು ಹೇಳಲಾಗಿದೆ.

Follow Us:
Download App:
  • android
  • ios